ಸಾರಾಂಶ
ಸೋಮವಾರಪೇಟೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸಾಮಾನ್ಯ ಜನರ ಶೋಷಣೆ ನಡೆಯುತ್ತಿದೆ. ವಕೀಲರನ್ನು ಪೀಡಿಸುತ್ತಿದ್ದಾರೆ ಎಂದು ಆರೋಪಿಸಿ ವಕೀಲರ ಸಂಘದಿಂದ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ ಮಂಗಳವಾರ ದೂರು ನೀಡಿ, ಉಪ ನೋಂದಣಾಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ತಾಲೂಕು ಕಚೇರಿಯಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸಾಮಾನ್ಯ ಜನರ ಶೋಷಣೆ ನಡೆಯುತ್ತಿದೆ. ವಕೀಲರನ್ನು ಪೀಡಿಸುತ್ತಿದ್ದಾರೆ ಎಂದು ಆರೋಪಿಸಿ ವಕೀಲರ ಸಂಘದಿಂದ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ ಮಂಗಳವಾರ ದೂರು ನೀಡಿ, ಉಪ ನೋಂದಣಾಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.ವಕೀಲರ ಸಂಘದ ಅಧ್ಯಕ್ಷ ಕಾಟ್ನಮನೆ ವಿಠಲ್ ಗೌಡ ನೇತೃತ್ವದಲ್ಲಿ ತಾಲೂಕು ಕಚೇರಿಗೆ ತೆರಳಿದ ವಕೀಲರು, ನೋಂದಣಾಧಿಕಾರಿ ಕಚೇರಿಯಲ್ಲಾಗುತ್ತಿರುವ ಕಿರುಕುಳದ ಬಗ್ಗೆ ತಹಸೀಲ್ದಾರ್ ಕೃಷ್ಣಮೂರ್ತಿ ಅವರ ಗಮನಕ್ಕೆ ತಂದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಫೆ.೧೦ರಂದು ವಕೀಲ ಮಂಜುನಾಥ್ ಅವರೊಂದಿಗೆ ಉಪ ನೋಂದಣಾಧಿಕಾರಿ ದರ್ಪ ತೋರಿದ್ದಾರೆ. ಇಂತಹ ಅಧಿಕಾರಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ವಕೀಲರ ಸಂಘದ ಅಧ್ಯಕ್ಷ ಕಾಟ್ನಮನೆ ವಿಠಲ್ ಗೌಡ ಆಗ್ರಹಿಸಿದರು.ಮನವಿ ಸ್ವೀಕರಿಸಿದ ತಹಸೀಲ್ದಾರ್ ಕೃಷ್ಣಮೂರ್ತಿ ಅವರು, ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ನಂತರ ಕಚೇರಿಗೆ ಉಪ ನೋಂದಣಾಧಿಕಾರಿಯನ್ನು ಕರೆಯಿಸಿ, ಎಚ್ಚರಿಕೆ ನೀಡಲಾಯಿತು. ತಾಲೂಕು ಕಚೇರಿ ಕಟ್ಟಡದಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿ ಇರುವುದರಿಂದ ಸಾರ್ವಜನಿಕವಾಗಿ ನಮ್ಮ ಕಚೇರಿಯ ಮೇಲೂ ಕೆಟ್ಟ ಸಂದೇಶ ಹೋಗುತ್ತದೆ. ಕಾನೂನು ಭಾಗದಲ್ಲಿ ಆಗುವಂತಹ ಕೆಲಸವನ್ನು ಯಾವುದೇ ಅಪೇಕ್ಷೆಯಿಲ್ಲದೆ ಮಾಡಕೊಡಬೇಕೆಂದು ಅಧಿಕಾರಿಗೆ ತಹಸೀಲ್ದಾರ್ ಸೂಚಿಸಿದರು.
ವಕೀಲರ ಸಂಘದ ಕಾರ್ಯದರ್ಶಿ ಡಿ.ಎ. ಕೃಷ್ಣಕುಮಾರ್ ಮಾತನಾಡಿ, ಈ ಸಂಬಂಧಿತ ದೂರನ್ನು ಜಿಲ್ಲಾಧಿಕಾರಿಗೆ ನೀಡಲಾಗಿದೆ. ಕಂದಾಯ ಸಚಿವರು, ಇಲಾಖೆಯ ಮುಖ್ಯಕಾರ್ಯದರ್ಶಿಗಳು, ಶಾಸಕರು, ನೋಂದಣಿ ಮಹಾ ಪರಿವೀಕ್ಷಕರು, ಜಿಲ್ಲಾ ನೋಂದಣಾಧಿಕಾರಿಗಳು, ಲೋಕಾಯುಕ್ತ ಅಧೀಕ್ಷಕರಿಗೂ ದೂರು ನೀಡಲಾಗುವುದು. ಮೇಲಾಧಿಕಾರಿಗಳು ಶೀಘ್ರ ಕೈಗೊಳ್ಳದಿದ್ದಲ್ಲಿ ಕಾನೂನು ಭಾಗದ ಹೋರಾಟ ನಡೆಸಲಾಗುವುದು ಎಂದರು.ಸಂಘದ ಉಪಾಧ್ಯಕ್ಷೆ ಎಚ್.ಆರ್. ಪವಿತ್ರ, ನಿರ್ದೇಶಕ ಬಿ.ಎಂ. ಯತೀಶ್, ಹಿರಿಯ ವಕೀಲರಾದ ಈಶ್ವರಚಂದ್ರ ಸಾಗರ್, ಮಂಜುನಾಥ್ ಚೌಟ ಸೇರಿದಂತೆ ಇತರರು ಇದ್ದರು.