ಶಾಸಕರು ಹೇಳಿದಂತೆ ಶೇ .೦೫ ಬಡ್ಡಿಯಂತೆ ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ನಿಂದ ಸಾಲ ಒದಗಿಸಲಾದರೆ, ಸೊಸೈಟಿಯವರು ಮಾತ್ರ ರೈತರಿಂದ ಶೇ. ೫ರಷ್ಟು ಬಡ್ಡಿ ವಸೂಲಿ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮುಂಡಗೋಡ: ತಾಲೂಕಿನ ಕಾತೂರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ರೈತರು, ಬುಧವಾರ ಸಂಘದ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿ ೬೪ರ ಅಡಿಯಲ್ಲಿ ಕೂಲಂಕಷವಾಗಿ ತನಿಖೆ ನಡಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸಂಘದಲ್ಲಿ ಗೊಬ್ಬರದ ವಿಷಯದಲ್ಲಿ ₹೩೩ ಲಕ್ಷ ದುರುಪಯೋಗವಾಗಿರುವುದು ಕಂಡುಬಂದಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ಹಣ ದುರುಪಯೋಗಪಡಿಸಿಕೊಂಡವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಬಡ್ಡಿ ಸಮೇತ ಹಣ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು.ಶಾಸಕರು ಹೇಳಿದಂತೆ ಶೇ .೦೫ ಬಡ್ಡಿಯಂತೆ ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ನಿಂದ ಸಾಲ ಒದಗಿಸಲಾದರೆ, ಸೊಸೈಟಿಯವರು ಮಾತ್ರ ರೈತರಿಂದ ಶೇ. ೫ರಷ್ಟು ಬಡ್ಡಿ ವಸೂಲಿ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಪಾಟೀಲ ಹಾಗೂ ನಿರ್ದೇಶಕರು ಈ ಬಗ್ಗೆ ಸಭೆ ನಡೆಸಿ ಸುದೀರ್ಘವಾಗಿ ಚರ್ಚೆ ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಸಂಘದ ಕೆಲವಷ್ಟು ವ್ಯವಹಾರಗಳಲ್ಲಿ ಹಣ ದುರುಪಯೋಗ ನಡೆದಿರುವ ಬಗ್ಗೆ ನಮಗೂ ಅನುಮಾನವಿದ್ದು, ಈಗಾಗಲೇ ಅವುಗಳ ಬಗ್ಗೆ ಆಂತರಿಕವಾಗಿ ಪರಿಶೀಲಿಸಲಾಗುತ್ತಿದೆ. ೨ ದಿನದೊಳಗಾಗಿ ಈ ಕುರಿತು ತರ್ತು ಸಭೆ ಕರೆದು ತನಿಖೆಗೆ ಒಪ್ಪಿಸಲು ತೀರ್ಮಾನ ಕೈಗೊಳ್ಳಲಾಗುವುದೆಂದು ತಿಳಿಸಿದರು.ಇದಕ್ಕೆ ಜಗ್ಗದ ಪ್ರತಿಭಟನಾಕಾರರು, ತಕ್ಷಣ ಡಿಆರ್ ಸ್ಥಳಕ್ಕಾಗಮಿಸಿ ೬೪ ಅಡಿ ತನಿಖೆ ಆರಂಭಿಸಬೇಕು ಎಂದು ಪಟ್ಟುಹಿಡಿದರಲ್ಲದೇ ಈ ವೇಳೆ ಅಧ್ಯಕ್ಷರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಆರಂಭವಾಗಿ ಕೈ ಕೈ ಮಿಲಾಯಿಸುವ ಹಂತ ತಲುಪಿತು. ಮಧ್ಯಪ್ರವೇಶಿಸಿದ ಮುಂಡಗೋಡ ಪೊಲೀಸರು, ಶಾಂತವಾಗಿ ಮಾತುಕತೆ ಮೂಲಕ ಸಮಸ್ಯೆ ಪರಿಹಸಿಕೊಳ್ಳುವಂತೆ ಮನವಿ ಮಾಡಿದರು.
ಕಳೆದ ೨೦ ವರ್ಷಗಳಿಂದ ಸಂಘದಲ್ಲಿ ನಡೆದ ವ್ಯವಹಾರದ ಬಗ್ಗೆ ೬೪ರ ಅಡಿಯಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮಕ್ಕೆ ಮುಂದಾಗುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಧರಣಿಯನ್ನು ಮುಂದುವರಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದಲ್ಲಿ ಭಾರಿ ಬಿಗಿ ಭದ್ರತೆ ಮಾಡಿದ್ದರು.