ಸಾರಾಂಶ
ಹರಪನಹಳ್ಳಿ: ಪಟ್ಟಣದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘ(ಬಿ.90) ದಲ್ಲಿ ಅವ್ಯವಹಾರವಾಗಿದೆ ಎಂದು ಸಂಘದ ಚುನಾವಣೆಯಲ್ಲಿ ಪರಾಜಿತಗೊಂಡ ಅಭ್ಯರ್ಥಿಗಳು ಆರೋಪಿಸಿರುವುದು ಸಂಪೂರ್ಣ ಸುಳ್ಳು ಎಂದು ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ದಂಡಿನ ಹರೀಶ ಹೇಳಿದ್ದಾರೆ.
ಅವರು ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟೀಕರಣ ನೀಡಿದ್ದು, ಚುನಾವಣೆಯಲ್ಲಿ ಪರಾಜಿತಗೊಂಡ ಅಭ್ಯರ್ಥಿಗಳು ಹತಾಸೆಯಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ ಮಾಡುವ ದುರುದೇಶದಿಂದ ಹೇಳಿಕೆ ನೀಡಿದ್ದಾರೆ ಎಂದು ಅವರು ಹೇಳಿದರು.ಕೃಷಿಯೇತರ ಹಾಗೂ ಬಿಡಿಎ ಸಾಲಗಳಲ್ಲಿ ಅವ್ಯವಹಾರ ನಡೆದಿದೆ ಎಂಬುದು ಸಂಪೂರ್ಣ ಸುಳ್ಳು. ಈ ಆರೋಪಗಳನ್ನು ಮಾಡುವ ಸದಸ್ಯರೇ ಸಹಕಾರ ಸಂಘದಿಂದ ಲಕ್ಷಾಂತರ ಹಣ ಸಾಲ ಪಡೆದು ಈವರೆಗೂ ಪಾವತಿಸಿಲ್ಲ. ಸಾಲ ಮರು ಪಾವತಿಸುವ ಸಾಮರ್ಥ್ಯವಿದ್ದರೂ ಉದೇಶ ಪೂರ್ವಕವಾಗಿ ಬಾಕಿ ಉಳಿಸಿಕೊಂಡು ಸಂಘದ ಆರ್ಥಿಕ ಶಿಸ್ತಿಗೆ ದಕ್ಕೆ ತರುವ ವರ್ತನೆ ತೋರಿದ್ದಾರೆ ಎಂದು ಆರೋಪಿಸಿದರು.
ಆರೋಪ ಮಾಡಿರುವ ಸದಸ್ಯರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಮತ್ತು ಸಾಲ ವಸೂಲಿ ಪ್ರಕ್ರಿಯೆ ತ್ವರಿತಗೊಳಿಸಲು ಆಡಳಿತ ಮಂಡಳಿ ಈಗಾಗಲೇ ಕ್ರಮ ಆರಂಭಿಸಿದೆ ಎಂದು ಅವರು ತಿಳಿಸಿದರು.ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳನ್ನು ಮಾಧ್ಯಮಗಳಲ್ಲಿ ಹೊರ ಹಾಕಿರುವುದು ಸಂಘದ ಪರಂಪರೆ ಮತ್ತು ಗೌರವಕ್ಕೆ ಧಕ್ಕೆ ತರುವ ಕ್ರಿಯೆಯಾಗಿದೆ. ನಮ್ಮ ಸಹಕಾರಿ ಸಂಘದ ಬಹುಪಾಲು ಸದಸ್ಯರು ಆಡಳಿತ ಮಂಡಳಿಗೆ ಬೆಂಬಲ ನೀಡಿದ್ದಾರೆ ಎಂದು ಅವರು ಹೇಳಿದರು.
ಸಂಘದ ನಿಧಿ ಜನರ ನಂಬಿಕೆಯ ನಿಧಿಯಾಗಿದೆ. ಅದರ ದುರ್ಬಳಕೆ ಪ್ರಯತ್ನ ಯಾರಿಂದದಾದರೂ ನಡೆದರೆ ಆಡಳಿತ ಮಂಡಳಿ ಸಹಿಸುವುದಿಲ್ಲ ಎಂಬ ಎಚ್ಚರಿಕೆ ನೀಡಿದರು.ಕೆಲವು ಸದಸ್ಯರು ಸುಳ್ಳು ಆರೋಪಗಳನ್ನು ಬಿಟ್ಟು ತಾವು ಪಡೆದ ಸಾಲವನ್ನು ಪಾವತಿಸಿ ಸಹಕಾರ ತತ್ವ ಅರಿತು ಸಂಘದ ಪ್ರಗತಿಗೆ ಕೈ ಜೋಡಿಸಬೇಕು ಎಂದು ಕೋರಿದರು.
ನಿರ್ದೆಶಕ ಗಿಡ್ಡಳ್ಳಿ ನಾಗರಾಜ ಮಾತನಾಡಿ, ಅವ್ಯವಹಾರದ ಆರೋಪ ಸುಳ್ಳು, ಅಂತಹುದೇನು ನಡೆದಿಲ್ಲ, ಹತೆಸೆಯಿಂದ ಆರೋಪ ಮಾಡಿದ್ದಾರೆ ಎಂದು ಹೇಳಿದರು.ಸಹಕಾರ ಸಂಘದ ಅಧ್ಯಕ್ಷ ಎಂ.ವಿ.ಕೃಷ್ಣ, ಉಪಾದ್ಯಕ್ಷೆ ಉಮಾಮಹೇಶ್ವರಿ, ದಂಡಿನ ಹರೀಶ, ಗಿಡ್ಡಳ್ಳಿ ನಾಗರಾಜ, ಕೆ.ಮೆಹಬೂಬ್ ಸಾಹೇಬ್, ಲುಂಗಿಬಸಪ್ಪ, ಜಿ.ಬಸವರಾಜ, ಎನ್.ನಿಸ್ಸಾರ, ರಂಗಪ್ಪ, ಮುಖಂಡರಾದ ಬಸವರಾಜ ಸಂಗಪ್ಪನವರ್, ಬಂಡ್ರಿ ಗೋಣಿಬಸಪ್ಪ ಇದ್ದರು.