ಅಂಬೇಡ್ಕರ್ ಸ್ಮಾರಕ ಸಂಘದ ಲೆಟರ್ ಹೆಡ್ ದುರ್ಬಳಕೆ: ಆರೋಪ

| Published : May 25 2025, 02:50 AM IST

ಸಾರಾಂಶ

ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಲೆಟರ್ ಹೆಡ್‌ಗಳನ್ನು ಎಲ್.ನಾಗಣ್ಣ ಎಂಬುವರು ದುರ್ಬಳಕೆ ಮಾಡಿಕೊಂಡಿದ್ದು, ಇಲ್ಲಿತನಕ ಇವರು 25 ಲೆಟರ್ ಹೆಡ್‌ಗಳನ್ನು ನಕಲು ಮಾಡಿ ಬೇರೆ ಬೇರೆ ಇಲಾಖೆಗಳಿಗೆ ಪತ್ರ ಬರೆದಿದ್ದು ಇವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಹಾಲಿ ಅಧ್ಯಕ್ಷ ಆನಂದ ಮೂರ್ತಿ, ಕಾರ್ಯದರ್ಶಿ ಪಾಪಣ್ಣ ಪಟ್ಟಣ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಲೆಟರ್ ಹೆಡ್‌ಗಳನ್ನು ಎಲ್.ನಾಗಣ್ಣ ಎಂಬುವರು ದುರ್ಬಳಕೆ ಮಾಡಿಕೊಂಡಿದ್ದು, ಇಲ್ಲಿತನಕ ಇವರು 25 ಲೆಟರ್ ಹೆಡ್‌ಗಳನ್ನು ನಕಲು ಮಾಡಿ ಬೇರೆ ಬೇರೆ ಇಲಾಖೆಗಳಿಗೆ ಪತ್ರ ಬರೆದಿದ್ದು ಇವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಹಾಲಿ ಅಧ್ಯಕ್ಷ ಆನಂದ ಮೂರ್ತಿ, ಕಾರ್ಯದರ್ಶಿ ಪಾಪಣ್ಣ ಪಟ್ಟಣ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘವು ಹಲವು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಸಕಾಲದಲ್ಲಿ ಸಂಘದ ನವೀಕರಣವನ್ನಾಗಲೀ, ಲೆಕ್ಕ ಪತ್ರಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆ ಸರ್ಕಾರ 2022ರ ಮೇ 26ರಂದು ಸಂಘಕ್ಕೆ ತಾಲೂಕು ಸಮಾಜ ಕಲ್ಯಾಣಾಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಿಸಿ ಕ್ರಮಕೈಗೊಂಡಿತ್ತು. ಈ ಹಿನ್ನೆಲೆ ಹಿಂದಿನ ಯಾವ ಪದಾಧಿಕಾರಿಗಳು, ಸದಸ್ಯರು ಲೆಟರ್ ಹೆಡ್ ಬಳಸಬಾರದು, ಆಡಳಿತಾಧಿಕಾರಿ ಮಾತ್ರ ವ್ಯವಹರಿಸಬೇಕು ಎಂಬ ನಿಯಮ ವಿಧಿಸಲಾಗಿತ್ತು. ಆದರೆ ನಾಗಣ್ಣ ಅವರು ಇಲ್ಲಿತನಕ ಹಲವು ಇಲಾಖಾಧಿಕಾರಿಗಳಿಗೆ ಸಂಘದ ಲೆಟರ್ ಹೆಡ್‌ ತಾವೇ ಬಳಸಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಸಂಘಕ್ಕೆ ನಿಯಮಾನುಸಾರ ಚುನಾವಣೆ ನಡೆದು ನಾನು ಸೇರಿದಂತೆ 5 ಮಂದಿ ಪದಾಧಿಕಾರಿಗಳು ಆಯ್ಕೆಯಾಗಿದ್ದರು ಸಹಾ ನಾಗಣ್ಣ ಅವರು ನಿಯಮ ಮೀರಿ ಚಟುವಟಿಕೆ ನಡೆಸಿ ಸಂಘದ ನಿರ್ದೇಶಕರೆಂದು ಹಾಗೂ ಸಂಘದ ಆಸ್ತಿ ನಿರ್ವಹಣಾ ಸಮಿತಿಯ ಸದಸ್ಯನೆಂದು ಸಮಾಜ ಕಲ್ಯಾಣ ಇಲಾಖೆಯ ಉಪ-ನಿರ್ದೇಶಕರಿಗೆ ಪತ್ರ ಬರೆದು ನಿಯಮ ಉಲ್ಲಂಘಿಸಿದ್ದು ಇವರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ವಿವರಿಸಿದ್ದಾರೆ.ಮಾಜಿ, ಹಾಲಿ ಪದಾಧಿಕಾರಿಗಳ ಮುಸುಕಿನ ಗುದ್ದಾಟ:

ಡಾ.ಅಂಬೇಡ್ಕರ್ ಸ್ಮಾರಕ ಸಂಘದ ಗದ್ದುಗೆ ಹಾಗೂ ಇನ್ನಿತರೆ ವಿಚಾರಗಳಿಗಾಗಿ ಹಾಲಿ ಹಾಗೂ ಮಾಜಿ ಸಂಘದ ಪದಾಧಿಕಾರಿಗಳ ನಡುವೆ ನಡೆಯುತ್ತಿರುವ ಶೀತಲ ಸಮರ ಹಾಗೂ ಮುಸುಕಿನ ಗುದ್ದಾಟ ಬಹಿರಂಗಗೊಂಡಿದೆ.

ನೂತನವಾಗಿ ಅಂಬೇಡ್ಕರ್ ಸಂಘಕ್ಕೆ ಪದಾಧಿಕಾರಿಗಳು ಪದಗ್ರಹಣಕ್ಕೆ ಅಂಬೇಡ್ಕರ್ ಭವನ ಸ್ಥಳ ನಿಗದಿ ಮಾಡುತ್ತಿದ್ದಂತೆ ನಾಗಣ್ಣ ಬಣದ ಕೆಲವರು ವಿರೋಧಿಸಿ ಇಲ್ಲಿ ಕಾರ್ಯಕ್ರಮ ನಡೆಸಿದರೆ ಮುಂದಾಗುವ ಅನಾಹುತಕ್ಕೆ ಸಮಾಜ ಕಲ್ಯಾಣಾಧಿಕಾರಿಗೆಳೇ ಹೊಣೆ ಹೊರಬೇಕಾಗುತ್ತದೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದರು. ಆದರೆ ಪತ್ರಿಕಾ ಹೇಳಿಕೆಗೆ ಹಾಲಿ ಸಂಘದ ಪದಾಧಿಕಾರಿಗಳು ಲೆಕ್ಕಿಸದೆ ಕಾರ್ಯಕ್ರಮವನ್ನು ಶಾಸಕರ ಸಮ್ಮುಖದಲ್ಲಿಯೇ ಅದ್ಧೂರಿಯಾಗಿ ನಡೆಸಿ ಗಮನ ಸೆಳೆದರು. ಬಳಿಕ ಈಗಿನ ಸಂಘದ ಚುನಾವಣೆ ಅಸಿಂಧು, ನಾನೇ ಹಾಲಿ ನಿರ್ದೇಶಕ, ಸಂಘದ ಚುನಾವಣೆ ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡುವೆ ಎಂದು ನಾಗಣ್ಣ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದ್ದರು.

ಪದಗ್ರಹಣ ವೇಳೆ ಇದನ್ನು ಮನಗಂಡ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಹಿಂದಿನ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಭವನ ಕಾಮಗಾರಿ ಪೂರ್ಣಗೊಳ್ಳಲು ಸಹಕರಿಸಿ, ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿ ಭವನ ಉಪಯೋಗಕ್ಕೆ ಬಳಸಲು ಎಲ್ಲರೂ ಶ್ರಮಿಸಿ ಎಂಬ ಸಂದೇಶ ರವಾನಿಸಿದ್ದರು. ಇದೇ ರೀತಿ ಇತ್ತಿಚೆಗೆ ಸಚಿವ ಮಹದೇವಪ್ಪ ಅವರು ಅಂಬೇಡ್ಕರ್ ಭವನಕ್ಕೆ ಭೇಟಿ ನೀಡಿ ಕಾಮಗಾರಿ ಸಂಬಂಧ ಮೆಚ್ಚುಗೆ ವ್ಯಕ್ತಪಡಿಸಿ ಹಳೆಯ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಸಮಾಜದ ಬಳಕೆಗೆ ಅಬೇಡ್ಕರ್ ಭವನ ಕಾಮಗಾರಿ ಶೀಘ್ರ ಪೂರ್ಣವಾಗಲು ಸ್ಪಂದಿಸಿ ಎಂಬ ಸಂದೇಶ ರವಾನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಏತನ್ಮದ್ಯೆ ಹಾಲಿ ಅಧ್ಯಕ್ಷ ಆನಂದ ಮೂರ್ತಿ ಅವರೇ ಖುದ್ದು ಈಗ ನಾಗಣ್ಣ ವಿರುದ್ಧ ಲೆಟರ್ ಹೆಡ್ ದುರ್ಬಳಕೆ ದೂರು ನೀಡಿರುವುದನ್ನು ಗಮನಿಸಿದರೆ ಅಂಬೇಡ್ಕರ್ ಸಂಘದ ಬಣದಲ್ಲಿ ಇನ್ನು ಮುಸುಕಿನ ಗುದ್ದಾಟ, ಶೀತಲ ಸಮರ ನಿಂತಿಲ್ಲ ಎಂಬುದು ವೇದ್ಯವಾಗಲಿದ್ದು ಶಾಸಕರು, ಸಚಿವರು ಸಂದೇಶ ನೀಡಿದ್ದಾಗಿಯೂ ಸಹಾ ಮುಸುಕನ ಗುದ್ದಾಟ ಮುಂದುವರೆದಿರುವುದು ನಾನಾ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಹೋರಾಟಗಾರ ನಟರಾಜಮಾಳಿಗೆ ಅಂಬೇಡ್ಕರ್ ಸಂಘದ ಚುನಾವಣೆ ವಿಚಾರದಲ್ಲೂ ಸಹಾ ಜಾಲತಾಣದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದರು.