ಕುಷ್ಟಗಿ: ಪಟ್ಟಣದ ಮಾರುತಿ ಸರ್ಕಲ್‌ನಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಶಾಖೆಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರ ಹಾಗೂ ಗ್ರಾಹಕರ ಖಾತೆಗಳಿಂದ ಹಣವನ್ನು ಅನಧಿಕೃತವಾಗಿ ವರ್ಗಾವಣೆ ಮಾಡಿಕೊಂಡ ಆರೋಪದಡಿ ಮಾಜಿ ಶಾಖಾಧಿಕಾರಿ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದ ನಿವಾಸಿ ರಂಗನಾಥ ತಲತೋಟಿ ಆರೋಪಿಯಾಗಿದ್ದು, ಅವರು ಕುಷ್ಟಗಿಯ ಮಾರುತಿ ಸರ್ಕಲ್‌ನ ಎಸ್‌ಬಿಐ ಶಾಖೆಯಲ್ಲಿ ಶಾಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಹಣ ವರ್ಗಾವಣೆ ಅಕ್ರಮ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

2025ರ ಜುಲೈ 24ರಿಂದ ಅಕ್ಟೋಬರ್ 21ರ ವರೆಗೆ ಸರ್ಕಾರ ಹಾಗೂ ಗ್ರಾಹಕರ ಖಾತೆಗಳಿಂದ ಒಟ್ಟು ₹1,27,994.72 ಹಣವನ್ನು ಅನಧಿಕೃತವಾಗಿ ಕಡಿತಗೊಳಿಸಲಾಗಿದೆ. ಈ ಪೈಕಿ ₹13,986.32 ಹಣವನ್ನು ಸರ್ಕಾರದ ಆಂತರಿಕ ಖಾತೆಗೆ ಮರುಜಮೆ ಮಾಡಲಾಗಿದ್ದು, ಉಳಿದ ₹1,14,008.40 ಹಣವನ್ನು ತಮ್ಮ, ಪತ್ನಿ ಹಾಗೂ ಇತರರ ವೈಯಕ್ತಿಕ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬ್ಯಾಂಕಿನ ಆಂತರಿಕ ತನಿಖೆಯಲ್ಲಿ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ 2026ರ ಏಪ್ರಿಲ್ 4ರಂದು ರಂಗನಾಥ ತಲತೋಟಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಬಳಿಕ, ಏಪ್ರಿಲ್ 30ರಂದು ದುರುಪಯೋಗ ಮಾಡಿಸಿಕೊಂಡಿದ್ದಾರೆ ಎನ್ನಲಾದ ₹1,14,008.40 ಮೊತ್ತವನ್ನು ಡಿ.ಡಿ. ಮೂಲಕ ಬ್ಯಾಂಕ್‌ಗೆ ಮರುಪಾವತಿಸಿದ್ದಾರೆ ಎಂದು ತಿಳಿಸಲಾಗಿದೆ.

ಹಣ ಮರುಪಾವತಿಸಿದರೂ ಆರೋಪಿತ ಕೃತ್ಯಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳುವಂತೆ ಬ್ಯಾಂಕಿನ ಉನ್ನತ ಅಧಿಕಾರಿಗಳು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಹೊಸಪೇಟೆ ಮೂಲದ ಬ್ಯಾಂಕ್ ಅಧಿಕಾರಿ ಸೈಯದ್ ಕೆ.ಎಚ್. ಅವರು ನೀಡಿದ ದೂರಿನ ಮೇರೆಗೆ ಕುಷ್ಟಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.