ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ಆಸ್ಪತ್ರೆಯಲ್ಲಿ ಸುಮಾರು ₹10 ಕೋಟಿ ಮೊತ್ತದ ವಿವಿಧ ಟೆಂಡರ್ಗಳ ಪ್ರಕ್ರಿಯೆಯಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ, ನಿರ್ದಿಷ್ಟ ಏಜೆನ್ಸಿಗಳಿಗೆ ಅನುಕೂಲವಾಗುವಂತೆ ಷರತ್ತುಗಳನ್ನು ರೂಪಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯ ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ್ ಕೆಂಪೆನೋರ್ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ಆಸ್ಪತ್ರೆಯಲ್ಲಿ ಸುಮಾರು ₹10 ಕೋಟಿ ಮೊತ್ತದ ವಿವಿಧ ಟೆಂಡರ್ಗಳ ಪ್ರಕ್ರಿಯೆಯಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ, ನಿರ್ದಿಷ್ಟ ಏಜೆನ್ಸಿಗಳಿಗೆ ಅನುಕೂಲವಾಗುವಂತೆ ಷರತ್ತುಗಳನ್ನು ರೂಪಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯ ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ್ ಕೆಂಪೆನೋರ್ ಆರೋಪಿಸಿದರು.ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ರಿಮ್ಸ್ನಲ್ಲಿ ಔಷಧ, ಕೆಮಿಕಲ್ಸ್, ರಿಯೇಜೆಂಟ್ಸ್, ಕಂಪ್ಯೂಟರ್, ಎಲೆಕ್ಟ್ರಿಕಲ್ ಸಾಮಗ್ರಿ, ಪ್ಲಂಬಿಂಗ್ ಹಾಗೂ ಕ್ಯಾಟರಿಂಗ್ ಸೇವೆ ಸೇರಿದಂತೆ ವಿವಿಧ ಕಾಮಗಾರಿ ಮತ್ತು ಸಾಮಗ್ರಿಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ. ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳದೆ, ತಮಗೆ ಬೇಕಾದ ಸಂಸ್ಥೆಗಳಿಗೆ ಗುತ್ತಿಗೆ ದೊರೆಯುವಂತೆ ಷರತ್ತುಗಳನ್ನು ವಿಧಿಸಲಾಗಿದೆ ಎಂದು ದೂರಿದರು.
₹99 ಲಕ್ಷ ಮೊತ್ತದ ಕೆಮಿಕಲ್ಸ್ ಮತ್ತು ರಿಯೇಜೆಂಟ್ಸ್ ಪೂರೈಕೆ ಟೆಂಡರ್ಗೆ ₹6 ಕೋಟಿ ವಾರ್ಷಿಕ ವಹಿವಾಟಿನ ಅರ್ಹತೆ ನಿಗದಿಪಡಿಸಲಾಗಿದೆ. ಆದರೆ, ಅಷ್ಟೇ ಮೊತ್ತದ ಔಷಧ ಪೂರೈಕೆ ಟೆಂಡರ್ಗೆ ₹99 ಲಕ್ಷ ವಹಿವಾಟು ನಿಗದಿಪಡಿಸಲಾಗಿದೆ. ಕಂಪ್ಯೂಟರ್ ಖರೀದಿ ಟೆಂಡರ್ಗೆ ವಹಿವಾಟಿನ ಷರತ್ತೇ ವಿಧಿಸಿಲ್ಲ. ಒಂದೇ ಸಂಸ್ಥೆಯಲ್ಲಿ ಟೆಂಡರ್ಗಳಿಗೆ ವಿಭಿನ್ನ ಮಾನದಂಡಗಳನ್ನು ಅನುಸರಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.ಸುಮಾರು ₹45 ಲಕ್ಷ ಮೊತ್ತದ ಎಲೆಕ್ಟ್ರಿಕಲ್ ಸಾಮಗ್ರಿ ಹಾಗೂ ₹27 ಲಕ್ಷ ಮೊತ್ತದ ಪ್ಲಂಬಿಂಗ್ ಕಾಮಗಾರಿ ಸೇರಿದಂತೆ ಹಲವು ಟೆಂಡರ್ಗಳನ್ನು ಅಗತ್ಯ ಅನುಮತಿ ಪಡೆಯದೆ ಕರೆಯಲಾಗಿದೆ. ಟೆಂಡರ್ಗಳಲ್ಲಿ ಇಎಂಡಿ ಮೊತ್ತ ನಿಗದಿಪಡಿಸುವಲ್ಲಿಯೂ ತಾರತಮ್ಯ ಮಾಡಲಾಗಿದೆ. ಸಣ್ಣ ಉದ್ಯಮಿಗಳು ಹಾಗೂ ಸ್ಥಳೀಯ ಗುತ್ತಿಗೆದಾರರು ಭಾಗವಹಿಸದಂತೆ ತಡೆಯುವ ಉದ್ದೇಶದಿಂದ ಇಂತಹ ಷರತ್ತುಗಳನ್ನು ವಿಧಿಸಲಾಗಿದೆ ಎಂದು ಆರೋಪಿಸಿದರು.
ಆಸ್ಪತ್ರೆಯ ಕ್ಯಾಟರಿಂಗ್ ಸೇವೆಯ ಟೆಂಡರ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದರೂ, ನಿರ್ದಿಷ್ಟ ಏಜೆನ್ಸಿಯೊಂದಿಗೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ಅನುಮಾನವಿದೆ. ಕೆಲವು ಟೆಂಡರ್ ದಾಖಲೆಗಳಲ್ಲಿ ಹಳೆಯ ಮತ್ತು ಹೊಸ ವಹಿವಾಟಿನ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಿಲ್ಲ. ಈ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಅನುಮತಿ ಹಾಗೂ ಸುತ್ತೋಲೆಗಳ ದೃಢೀಕೃತ ಪ್ರತಿಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದರೂ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಮತ್ತೊಂದೆಡೆ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಹೃದ್ರೋಗ ಚಿಕಿತ್ಸಾ ವಿಭಾಗದಲ್ಲಿ ವೈದ್ಯರ ಕೊರತೆಯಿಂದ ಚಿಕಿತ್ಸಾ ಸೌಲಭ್ಯಗಳು ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಆಸ್ಪತ್ರೆಯ ಮೂಲಸೌಕರ್ಯ ಮತ್ತು ವೈದ್ಯಕೀಯ ಸೇವೆಗಳ ಸುಧಾರಣೆಗೆ ಆದ್ಯತೆ ನೀಡುವ ಬದಲು ಅನಗತ್ಯ ಖರೀದಿಗಳಿಗೆ ಒತ್ತು ನೀಡಲಾಗುತ್ತಿದೆ ಎಂದು ದೂರಿದರು.
ಬ್ರಿಮ್ಸ್ ನಿರ್ದೇಶಕಿ ಡಾ. ಶಾಂತಲಾ ಕೌಜಲಗಿ, ಆರ್ಥಿಕ ಸಲಹೆಗಾರ ಪ್ರಕಾಶ ಸೂರ್ಯವಂಶಿ ಅವರ ಟೆಂಡರ್ ಸಮಿತಿಯ ಕಾರ್ಯವೈಖರಿ ಕುರಿತು ಜಿಲ್ಲಾಧಿಕಾರಿಗಳು ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಧ್ಯ ಪ್ರವೇಶಿಸಿ ನಿಯಮ ಬಾಹಿರ ಟೆಂಡರ್ಗಳನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.8 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಹೋರಾಟ: ಟೆಂಡರ್ ಪ್ರಕ್ರಿಯೆಯಲ್ಲಿನ ಲೋಪ ದೋಷಗಳನ್ನು 8 ದಿನಗಳಲ್ಲಿ ಸರಿಪಡಿಸದಿದ್ದರೆ ಲೋಕಾಯುಕ್ತ ಹಾಗೂ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಲಾಗುವುದು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಹೋರಾಟ ನಡೆಸಲಾಗುವುದು ಎಂದು ಸ್ವಾಮಿದಾಸ್ ಕೆಂಪೆನೋರ್ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಸುರೇಶ ಎನ್. ದೊಡ್ಡಿ, ಕಮಲಹಸನ್ ಬಾವಿದೊಡ್ಡಿ, ರಮೇಶ ಹಲಬರ್ಗಾ, ಡಾ. ಜೇಮ್ಸ್, ಘಾಳೆಪ್ಪ, ರೋಹನ್ ಮಾಳಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.