ಸಾರಾಂಶ
ಶಿಗ್ಗಾಂವಿ ತಾಲೂಕಿನ ಜೇಕಿನಕಟ್ಟಿ ₹೬೫೦ ಲಕ್ಷ ವೆಚ್ಚದಲ್ಲಿ ಸರ್ಕಾರಿ ಮೆಟ್ರಿಕ್ ನಂತರ ಹಾಗೂ ವೃತ್ತಿಪರ ಬಾಲಕರ ವಿದ್ಯಾರ್ಥಿ ನಿಲಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ತಾಲೂಕು ಅಧ್ಯಕ್ಷ ವಿಶ್ವನಾಥ ಹರವಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದರು.
ಶಿಗ್ಗಾಂವಿ: ತಾಲೂಕಿನ ಜೇಕಿನಕಟ್ಟಿ ₹೬೫೦ ಲಕ್ಷ ವೆಚ್ಚದಲ್ಲಿ ಸರ್ಕಾರಿ ಮೆಟ್ರಿಕ್ ನಂತರ ಹಾಗೂ ವೃತ್ತಿಪರ ಬಾಲಕರ ವಿದ್ಯಾರ್ಥಿ ನಿಲಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ತಾಲೂಕು ಅಧ್ಯಕ್ಷ ವಿಶ್ವನಾಥ ಹರವಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದರು.
ಬಿಜೆಪಿ ಯುವ ಮುಖಂಡ ನರಹರಿ ಕಟ್ಟಿ ಮಾತನಾಡಿ, ಸರ್ಕಾರಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರು ಹೆಸರು ಕೈಬಿಡಲಾಗಿದೆ. ತಾಲೂಕು ಆಡಳಿತ ಶಿಷ್ಟಾಚಾರ ಗಾಳಿಗೆ ತೂರಿದೆ ಎಂದು ಆರೋಪಿಸಿದರು.ಈ ಕುರಿತು ಹಿಂದೊಮ್ಮೆ ಪ್ರತಿಭಟನೆ ಮಾಡಿದಾಗಲೂ ಶಿಷ್ಟಾಚಾರ ಪಾಲಿಸುವುದಾಗಿ ಅಧಿಕಾರಿಗಳು ಲಿಖಿತ ಹೇಳಿಕೆ ನೀಡಿದ್ದರು. ಮತ್ತೆ ಅದೇ ಮಾರ್ಗ ಅನುಸರಿಸುವುದನ್ನು ಖಂಡಿಸುತ್ತೇವೆ ಎಂದು ಹೇಳಿದರು.
ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ಜನಪ್ರತಿನಿಧಿಗಳಿಗೆ ಈ ರೀತಿ ಅಗೌರವ ತೋರುವುದು ಅಕ್ಷಮ್ಯ. ಸಂಬಂದಿಸಿದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಅಲ್ಲದೆ ಶಿಷ್ಟಾಚಾರ ಪಾಲನೆ ಮಾಡುವ ವರೆಗೂ ಬೀಗ ತೆಗೆಯುವುದಿಲ್ಲ ಎಂದು ಹೇಳಿದರು.ಆನಂತರ ಅಧಿಕಾರಿಗಳು ಕಾರ್ಯಕ್ರಮ ರದ್ದುಗೊಳಿಸಿರುವ ಲಿಖಿತ ಹೇಳಿಕೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.
ಬಿಜೆಪಿ ಯುವ ಮುಖಂಡರಾದ ರೇಣುಕಗೌಡ ಪಾಟೀಲ, ಮಂಜುನಾಥ ಬ್ಯಾಹಟ್ಟಿ, ಅನಿಲ ಸಾತಣ್ಣನವರ, ಸಂತೋಷ ದೊಡ್ಡಮನಿ, ಪ್ರತೀಕ ಕೋಳೇಕರ, ಸಚಿನ್ ಮಡಿವಾಳರ, ಮಂಜು ನಂಜಪ್ಪನವರ, ಅರುಣ ಬನ್ನಿಕೊಪ್ಪ, ಕೃಷ್ಣ ದೊಡ್ಡಮನಿ ಪಾಲ್ಗೊಂಡಿದ್ದರು.