ಸಾರಾಂಶ
ಬೆಳ್ಳಿಗಟ್ಟಿ ಗ್ರಾಮದ ಬಗರುಹುಕುಂ ಸಾಗುವಳಿದಾರರು ಕಳೆದ 40 ವರ್ಷಗಳಿಂದ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದಾರೆ. ಸರ್ಕಾರದ ಆದೇಶದ ಮೇರೆಗೆ ಭೂಮಿ ಹಕ್ಕುಪತ್ರ ಪಡೆಯಲು ಫಾರಂ ನಂಬರ್ 53, 57 ತುಂಬಿದ್ದು ಹಕ್ಕು ಪತ್ರಕ್ಕಾಗಿ ಕಾಯುತ್ತಿದ್ದೇವೆ.
ಧಾರವಾಡ:
ತಾಲೂಕಿನ ಬೆಳ್ಳಿಗೆಟ್ಟಿ ಗ್ರಾಮದ ಸಾಗುವಳಿದಾರರಿಗೆ ಕಿರುಕುಳ ತಪ್ಪಿಸಿ, ಹಕ್ಕುಪತ್ರ ನೀಡಲು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ವತಿಯಿಂದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.ಬೆಳ್ಳಿಗಟ್ಟಿ ಗ್ರಾಮದ ಬಗರುಹುಕುಂ ಸಾಗುವಳಿದಾರರು ಕಳೆದ 40 ವರ್ಷಗಳಿಂದ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದಾರೆ. ಸರ್ಕಾರದ ಆದೇಶದ ಮೇರೆಗೆ ಭೂಮಿ ಹಕ್ಕುಪತ್ರ ಪಡೆಯಲು ಫಾರಂ ನಂಬರ್ 53, 57 ತುಂಬಿದ್ದು ಹಕ್ಕು ಪತ್ರಕ್ಕಾಗಿ ಕಾಯುತ್ತಿದ್ದೇವೆ. ಬಡ ರೈತರು ತುಂಡು ಭೂಮಿಯಲ್ಲಿ ಸಾಗುವಳಿ ಮಾಡಿ ಜೀವನ ನಡೆಸುತ್ತಿದ್ದಾರೆ. ತೀವ್ರ ಸಂಕಷ್ಟದ ದಿನಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಕಿರುಕುಳ ನೀಡಲಾಗುತ್ತಿದ್ದು, ಇದನ್ನು ತಪ್ಪಿಸಿ ಕೂಡಲೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಲಾಯಿತು.
ಜಿಲ್ಲಾ ಮಟ್ಟದಲ್ಲಿ ಭೂ ಮಂಜುರಾತಿ ಸಮಿತಿಯಿಂದ ಕೂಡಲೇ ಸಭೆ ಕರೆದು, ಸರ್ವೇ ಮಾಡಿ ಅರ್ಹ ರೈತರಿಗೆ ಭೂಮಿಯನ್ನು ಹಂಚಿಕೆ ಮಾಡಿ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.ಮನವಿ ಸ್ವೀಕರಿಸಿದ ತಹಸೀಲ್ದಾರ್ ಡಾ. ಡಿ.ಎಸ್. ಹೂಗಾರ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ, ಉಪಾಧ್ಯಕ್ಷ ಹನುಮೇಶ ಹುಡೇದ, ಬಸವರಾಜ ಕುರುವಿನಕೊಪ್ಪ, ಮಂಜುನಾಥ ಬಡಿಗೇರ, ಬಸವರಾಜ ಹಡಪದ, ವಿರೂಪಾಕ್ಷ ಲಕ್ಕಪ್ಪನವರು, ಮಾದೇವಪ್ಪ ಲಕ್ಕಪ್ಪನವರು, ನಾಗಪ್ಪ ಕಲ್ಲೂರು, ಮೈಲಾರಿ ಮಠಗೊಂಡ್ಲಿ ಇದ್ದರು.