ಧಾರವಾಡ:
ಜಿಪಂ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ ಕುಲಕರ್ಣಿ ಅವರನ್ನು ಪಿತೂರಿಯಿಂದ ಸಿಲುಕಿಸಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಹಲವರನ್ನು ಬಂಧಿಸಿ ಬಿಡುಗಡೆಗೊಳಿಸಿದರು.ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಸೇರಿದಂತೆ 17 ಜನ ಆರೋಪಿಗಳು ದೋಷಿ ಎಂದು ತೀರ್ಪು ಪ್ರಕಟವಾಗುತ್ತಿದ್ದಂತೆ ಬೆಂಬಲಿಗರಲ್ಲಿ ಬೇಸರ ಮನೆ ಮಾಡಿತ್ತು. ಬೆಂಬಲಿಗರು ನಗರದ ಕಲಾಭವನದಿಂದ ಮೆರವಣಿಗೆ ನಡೆಸಿ ಜ್ಯುಬಲಿ ಸರ್ಕಲ್‌ಗೆ ಆಗಮಿಸಿದರು. ಈ ವೇಳೆ ಈ ಹತ್ಯೆ ಪ್ರಕರಣದಲ್ಲಿ ವಿನಯ್ ಅವರನ್ನು ಸಿಲುಕಿಸಲಾಗಿದೆ. ಅವರ ಪಾತ್ರವೇನಿಲ್ಲ. ರಾಜಕೀಯ ದುರುದ್ದೇಶದಿಂದ ಸಿಲುಕಿಸಿದಂತಾಗಿದೆ. ಬಿಜೆಪಿ ಮುಖಂಡರ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಪರಿಸ್ಥಿತಿ ಬಿಗುವಿನಿಂದ ಕೂಡಿತು. ಕೂಡಲೇ ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿ, ಕರೆದೊಯ್ದು ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಮುಖಂಡರು, ವಿನಯ ಕುಲಕರ್ಣಿ ಅವರ ಮೇಲೆ ನಿರಂತರವಾಗಿ ಅನ್ಯಾಯ ಆಗುತ್ತಿದೆ. ರಾಜಕೀಯ ಷಡ್ಯಂತ್ರ ಮತ್ತು ಕುತಂತ್ರದಿಂದಲೇ ಕೆಲ ಪಟ್ಟಭದ್ರ ಹಿತಾಶಕ್ತಿಗಳು ಅವರನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿಸಿದರು.ಯೋಗೇಶಗೌಡರ ಕೊಲೆ ಪ್ರಕರಣದಲ್ಲಿ ದೋಷಿಯಾದ ವಿನಯ ಕುಲಕರ್ಣಿ ವಿರುದ್ಧ ವ್ಯವಸ್ಥಿತ ಪಿತೂರಿ ನಡೆದಿದೆ. ಅರವಿಂದ ಕೇಜ್ರಿವಾಲ್ ಅವರಂತೆ ನಮ್ಮ ನಾಯಕರು ನಿರ್ದೋಷಿಯಾಗಿ ಹೊರಬರುತ್ತಾರೆ. ಅವರ ಬೆಂಬಲಕ್ಕೆ ತಾವಿರುವುದಾಗಿ ಹೇಳಿದರು. ಈ ವೇಳೆ ಈಶ್ವರ ಶಿವಳ್ಳಿ, ಪರಮೇಶ ಕಾಳೆ, ಆನಂದ ಸಿಂಗನಾಥ್, ಬಸವರಾಜ ಜಾಧವ, ಪ್ರವೀಣ ನರೇಂದ್ರ, ಶಶಿ ಕೋಲ್ಕಾರ, ಬಸು ಧಾರವಾಡ, ಕಾರ್ತಿಕ ನಾಯಕ, ಮಾಳು ಪಾಟೀಲ, ಗೌರಮ್ಮ ಬಲೋಗಿ, ಭೀಮಪ್ಪ ಕಾಸಾಯಿ ಮತ್ತು ಸೌರಭ ಕ್ಯಾತಣ್ಣವರ ಇದ್ದರು.