ಸಾರಾಂಶ
ಈ ಬಾರಿ ಸಹಕಾರ ಸಂಘಗಳ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಗೆ ಹೆಚ್ಚು ಒಲವು ಸಿಕ್ಕಿ ಅಭೂತ ಪೂರ್ವ ಗೆಲುವು ಲಭಿಸಿದೆ. ಮುಂಬರುವ ತಾಪಂ ಹಾಗೂ ಜಿಪಂ ಚುನಾವಣೆಗಳಿಗೆ ದಿಕ್ಸೂಚಿ ಯಾಗಲಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಪೀಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ - ಉಪಾಧ್ಯಕ್ಷರಾಗಿ ಜೆಡಿಎಸ್- ಬಿಜೆಪಿ ಮೈತ್ರಿ ಬೆಂಬಲಿತ ಸಿ.ಎಂ.ಕುಮಾರ್ ಗೌಡ ಹಾಗೂ ಶಂಭುಗೌಡ ಅವಿರೋಧವಾಗಿ ಆಯ್ಕೆಯಾದರು.ಸಂಘದ 12 ಮಂದಿ ನಿರ್ದೇಶಕರಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಪಕ್ಷದ 10 ಮಂದಿ ಹಾಗೂ ಕಾಂಗ್ರೆಸ್ ಬೆಂಬಲಿತ 2 ಮಂದಿ ಆಯ್ಕೆಯಾಗಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾದಿಗೆ ಮೈತ್ರಿ ಬೆಂಬಲಿತ ನಿರ್ದೇಶಕರಾದ ಸಿ.ಎಂ.ಕುಮಾರ್‌ಗೌಡ ಹಾಗೂ ಶಂಭುಗೌಡ ನಾಮಪತ್ರ ಸಲ್ಲಿಸಿದ್ದರು. ಈ ಇಬ್ಬರೂ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸಿಡಿಒ ಪಾರ್ವತಮ್ಮ ಅವಿರೋಧ ಎಂದು ಘೋಷಿಸಿದರು.
ನೂತನ ಅಧ್ಯಕ್ಷ ಸಿ.ಎಂ. ಕುಮಾರ್‌ಗೌಡ ಮಾತನಾಡಿ, ಸಹಕಾರ ಸಂಘದ ಷೇರುದಾರರು ಹಾಗೂ ನಿರ್ದೇಶಕರು ಹಾಗೂ ಜೆಡಿಎಸ್- ಬಿಜೆಪಿ ಪಕ್ಷದ ಮೈತ್ರಿ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ರೈತರಿಗೆ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತೇನೆ ಎಂದರು.ಕೃಷಿ ಪತ್ತಿನ ಸಹಕಾರ ಸಂಘವನ್ನು ಕೇಂದ್ರ ಸರ್ಕಾರ ವಿವಿಧೋದ್ದೇಶ ಸಹಕಾರ ಸಂಘವಾಗಿ ಪರಿವರ್ತಿಸಿದೆ. ಇದರಿಂದ ಪೆಟ್ರೋಲ್ ಬಂಕ್, ಪ್ರಾವಿಜನ್ ಸ್ಟೋರ್, ಇ- ಸ್ಟಾಂಪ್ ತೆರೆಯುವುದು ಸೇರಿದಂತೆ ಮಹಿಳೆಯರಿಗೆ ಸಾಕಷ್ಟು ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಪೀಹಳ್ಳಿ ರಮೇಶ್ ಮಾತನಾಡಿ, ಈ ಬಾರಿ ಸಹಕಾರ ಸಂಘಗಳ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಗೆ ಹೆಚ್ಚು ಒಲವು ಸಿಕ್ಕಿ ಅಭೂತ ಪೂರ್ವ ಗೆಲುವು ಲಭಿಸಿದೆ. ಮುಂಬರುವ ತಾಪಂ ಹಾಗೂ ಜಿಪಂ ಚುನಾವಣೆಗಳಿಗೆ ದಿಕ್ಸೂಚಿ ಯಾಗಲಿದೆ ಎಂದು ಹೇಳಿದರು.ಜಿಪಂ ಮಾಜಿ ಸದಸ್ಯ ಅರಕೆರೆ ಮರೀಗೌಡ ಮಾತನಾಡಿ, ಮೈತ್ರಿಯಿಂದ ಒಗ್ಗಟ್ಟಿನಲ್ಲಿ ಬಲವಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮುಖಂಡ ಟಿ.ಎಂ.ದೇವೇಗೌಡ, ಸಂಘದ ನೂತನ ನಿರ್ದೇಶಕರಾದ ಬೋರೇಗೌಡ, ಕೆ.ಜೆ. ನಟೇಶ್ ಚಂದ್ರ, ಶ್ರೀಕಂಠೇಗೌಡ, ರಮೇಶ್, ಭಾಗ್ಯಮ್ಮ, ರೇಣುಕಾ, ಲಿಂಗಾಚಾರಿ, ಮುತ್ತಯ್ಯ ಸೇರಿದಂತೆ ಅರುಣ್, ಪಿ.ಎನ್ ನಿಂಗೇಗೌಡ, ವಕೀಲ ಪ್ರವೀಣ್, ಚಂದ್ರು, ಚಿಕ್ಕಾರೋಹಳ್ಳಿ ಮರೀಗೌಡ ಸೇರಿದಂತೆ ಇತರರು ಇದ್ದರು.