ಸಾರಾಂಶ
ನೈಋತ್ಯ ಪದವೀಧರ ಕ್ಷೇತ್ರಕ್ಕೆ ನಡೆದ 6 ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಆಯ್ಕೆಯಾಗುತ್ತಿದ್ದಾರೆ. ಅದೇ ರೀತಿ ಶಿಕ್ಷಕರ ಕ್ಷೇತ್ರದಲ್ಲಿ 4 ಬಾರಿ ಬಿಜೆಪಿ, ಎರಡು ಬಾರಿ ಇತರೆ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದರು.
ಶಿವಮೊಗ್ಗ : ನೈಋತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಜೂ.3ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿ ವಿಶೇಷ ಸಿದ್ಧತೆಗಳು ನಡೆದಿವೆ ಎಂದು ಬಿಜೆಪಿ ಪ್ರಕೋಷ್ಠದ ರಾಜ್ಯ ಸಂಚಾಲಕ ಎಸ್.ದತ್ತಾತ್ರಿ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ವೈಶಿಷ್ಟ್ಯ ಪೂರ್ಣ ಪಕ್ಷವಾಗಿದ್ದು, ಕಾರ್ಯಕರ್ತರ ಶಕ್ತಿ ಹಾಗೂ ಆಧಾರದ ಮೇಲಿದೆ ಎಂದರು.ಇದುವರೆಗೂ ನಡೆದ ನೈಋತ್ಯ ಪದವೀಧರ ಕ್ಷೇತ್ರಕ್ಕೆ ನಡೆದ 6 ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಆಯ್ಕೆಯಾಗುತ್ತಿದ್ದಾರೆ. ಅದೇ ರೀತಿ ಶಿಕ್ಷಕರ ಕ್ಷೇತ್ರದಲ್ಲಿ 4 ಬಾರಿ ಬಿಜೆಪಿ, ಎರಡು ಬಾರಿ ಇತರೆ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದರು. ಮೈತ್ರಿಯಿಂದಾಗಿ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಲಾಗಿದೆ. ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಾರೆ. ಅವರು ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಗಳಿಸಿರುವುದರಿಂದ ಅವರಿಗೆ ಟಿಕೆಟ್ ನೀಡಲಾಗಿದೆ ಎಂದರು.
ಪದವೀಧರ ಕ್ಷೇತ್ರದಲ್ಲಿ ಈ ಬಾರಿ 85090 ಮತದಾರರಿದ್ದಾರೆ. 20ಮತದಾರರಿಗೊಬ್ಬರಂತೆ ಪಕ್ಷದ ಘಟನಾಯಕರನ್ನು ನೇಮಕ ಮಾಡಿದ್ದು, ಅವರು ಪ್ರತಿ ಮತದಾರರನ್ನು ಭೇಟಿ ಮಾಡಿ ಮತದಾನ ಮಾಡುವಂತೆ ಮನವಿ ಮಾಡಿಕೊಳ್ಳಲಿದ್ದಾರೆ. ಮತದಾನದಂದು ಮತ ಕೇಂದ್ರಕ್ಕೆ ಬರುವಂತೆ ನೋಡಿಕೊಳ್ಳಲಿದ್ದಾರೆ ಎಂದರು.
ಜೂ.1ರಂದು ಬಿಎಸ್‌ವೈ ಪ್ರವಾಸ: ನೈಋತ್ಯ ಕ್ಷೇತ್ರ ವ್ಯಾಪ್ತಿಗೆ 5 ಜಿಲ್ಲೆಗಳು ಬರಲಿದ್ದು, ಕ್ಷೇತ್ರದಲ್ಲಿ 14 ಬಿಜೆಪಿ ಶಾಸಕರು, 2 ಎಂಎಲ್‍ಸಿಗಳು ಅದೇ ರೀತಿ ಕಾಂಗ್ರೆಸ್‍ನಲ್ಲಿ 15 ಶಾಸಕರಿದ್ದಾರೆ ಎಂದ ಅವರು, ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು, ಮೇ 26,27,28 ರಂದು ಕ್ಷೇತ್ರದಲ್ಲಿ ಪ್ರವಾಸ ಮಾಡಲಿದ್ದು, ಅದೇ ರೀತಿ ಜೂ.1ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪ್ರವಾಸ ಮಾಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಋಷಿಕೇಶ್ ಪೈ, ರತ್ನಾಕರ್ ಶೆಣೈ, ಸುರೇಖಾ ಮುರಳೀಧರ್, ಬಿ.ಆರ್. ಮಧುಸೂದನ್, ಪದ್ಮಿನಿರಾವ್, ಸುದೀಂಧ್ರ ಕಟ್ಟೆ, ಸುಬ್ರಹ್ಮಣ್ಯ, ಪ್ರಕಾಶ್, ರಾಘವೇಂದ್ರಾಚಾರ್, ಕೆ.ವಿ.ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ರಘುಪತಿ ಭಟ್‌ರಿಗೆ ಪಕ್ಷ ಎಲ್ಲವೂ ಕೊಟ್ಟಿದೆ
ಚುನಾವಣೆಯಲ್ಲಿ ಕಾರ್ಯತಂತ್ರ ಚಟುವಟಿಕೆ ನಡೆಯಲಿದೆ. ಡಾ. ಧನಂಜಯ ಸರ್ಜಿ, 15 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಅದೇ ರೀತಿ ಮೈತ್ರಿ ಅಭ್ಯರ್ಥಿ ಜೆಡಿಎಸ್‍ನ ಬೋಜೇಗೌಡರು ಕೂಡ ಗೆಲುವು ಖಚಿತ ಎಂದರು. ನೈಋತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ಟರಿಗೆ ಪಕ್ಷ ಎಲ್ಲವನ್ನು ಕೊಟ್ಟಿದೆ. ಮೂರು ಬಾರಿ ಶಾಸಕರನ್ನಾಗಿ ಮಾಡಿದೆ. ಉಡುಪಿ ಜಿಲ್ಲಾಧ್ಯಕ್ಷರಾಗಿದ್ದರು. ಹೀಗಾಗಿ ಈ ಬಾರಿ ರಘುಪತಿ ಭಟ್ಟರು ನಿವೃತ್ತಿಯಾಗಬೇಕು ಎಂದು ಎಸ್.ದತ್ತಾತ್ರಿ ಉತ್ತರಿಸಿದರು.