ಮೂಕ ಪ್ರೇಕ್ಷಕನಾಗಿ ಮತ ಹಾಕುತ್ತಾ ಬಂದಿರುವ ಕಾಡು ಗೊಲ್ಲ ಸಮುದಾಯಕ್ಕೆ ಚೇಳೂರು ಕ್ಷೇತ್ರ ಮಾತ್ರ ಅವಕಾಶ ಒದಗಿಸಿದೆ. ಸಿಕ್ಕಿದ ಈ ಸ್ಥಾನಕ್ಕೆ ಕಳೆದ 32 ವರ್ಷದಿಂದ ಬಿಜೆಪಿ ಸಂಘಟನೆ ಮಾಡಿರುವ ನನಗೆ ಪಕ್ಷ ಟಿಕೆಟ್ ನೀಡಿ ಗೆಲುವಿಗೆ ಅವಕಾಶ ಮಾಡಿಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಚೇಳೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಮೂರು ತಾಲೂಕು ಪಂಚಾಯಿತಿಗಳು ಬರುತ್ತಿದ್ದು, ಸುಮಾರು 12 ಸಾವಿರ ಗೊಲ್ಲ ಸಮುದಾಯದ ಮತದಾರರಿದ್ದಾರೆ. 26 ಗೊಲ್ಲರಹಟ್ಟಿಗಳನ್ನು ಹೊಂದಿರುವ ಈ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಗುಡ್ಡದಹಳ್ಳಿ ಡಿ.ಟಿ. ಬಸವರಾಜು ತಿಳಿಸಿದರು.ಪಟ್ಟಣದ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲೋಕಲ್ ಫೈಟ್ ಎನ್ನಿಸಿದ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಮೀಸಲಾತಿ ಈಗಾಗಲೇ ನಿಗದಿಯಾಗಿದೆ. ತಾಲೂಕಿನ ಚೇಳೂರು ಜಿಪಂ ಕ್ಷೇತ್ರ ಓಬಿಸಿ(ಎ) ಮೀಸಲು ನಿಗದಿಯಾಗಿದ್ದು, ಎನ್ ಡಿಎ ಮೈತ್ರಿ ಪಕ್ಷದ ಪ್ರಬಲ ಅಭ್ಯರ್ಥಿಯಾಗಿ ನಾನು ಆಕಾಂಕ್ಷಿಯಾಗಿದ್ದೇನೆ ಎಂದು ಗುಡ್ಡದಹಳ್ಳಿ ಬಸವರಾಜು ತಮ್ಮ ಅಭಿಲಾಷೆ ವ್ಯಕ್ತಪಡಿಸಿದರು.
ಮೂಕ ಪ್ರೇಕ್ಷಕನಾಗಿ ಮತ ಹಾಕುತ್ತಾ ಬಂದಿರುವ ಕಾಡು ಗೊಲ್ಲ ಸಮುದಾಯಕ್ಕೆ ಚೇಳೂರು ಕ್ಷೇತ್ರ ಮಾತ್ರ ಅವಕಾಶ ಒದಗಿಸಿದೆ. ಸಿಕ್ಕಿದ ಈ ಸ್ಥಾನಕ್ಕೆ ಕಳೆದ 32 ವರ್ಷದಿಂದ ಬಿಜೆಪಿ ಸಂಘಟನೆ ಮಾಡಿರುವ ನನಗೆ ಪಕ್ಷ ಟಿಕೆಟ್ ನೀಡಿ ಗೆಲುವಿಗೆ ಅವಕಾಶ ಮಾಡಿಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮೈತ್ರಿ ಪಕ್ಷದಲ್ಲಿ ಬಿಜೆಪಿ- ಜೆಡಿಎಸ್ ಪಕ್ಷಗಳ ಸ್ಥಳೀಯ ಅಭ್ಯರ್ಥಿಗಳಿಗೆ ಮಾನ್ಯತೆ ನೀಡಿ. ಹೊರಗಿನಿಂದ ಬರುವ ಅಭ್ಯರ್ಥಿಗಳು ನಂತರದಲ್ಲಿ ಮಾಯವಾಗುತ್ತಾರೆ. ನಾನು ಕೂಡ ಜಿ.ಎಸ್.ಬಸವರಾಜು ಅವರ ಹಿಂಬಾಲಕರಿಗೆ ಬಿಜೆಪಿ ಸಂಘಟನೆಗೆ ದುಡಿದಿದ್ದೇನೆ. ಹಿಂದುಳಿದ ವರ್ಗ ಮೀಸಲಾತಿ ಪೈಕಿ ಕಾಡು ಗೊಲ್ಲ ಸಮುದಾಯಕ್ಕೆ ಅವಕಾಶ ಸಿಕ್ಕಿರುವುದು ಈ ಚೇಳೂರು ಕ್ಷೇತ್ರದಲ್ಲಿ ಮಾತ್ರ. ಈ ನಿಟ್ಟಿನಲ್ಲಿ ಈ ಹಿಂದೆ ಕೂಡ ಟಿಕೆಟ್ ಆಕಾಂಕ್ಷಿಯಾಗಿ ಪ್ರಯತ್ನ ಮಾಡಿದ್ದೆ. ಈ ಬಾರಿ ನನ್ನ ಮೇಲೆ ಪಕ್ಷ ವಿಶ್ವಾಸ ಇಟ್ಟು ಟಿಕೆಟ್ ನೀಡುವ ಭರವಸೆ ಇದೆ ಎಂದರು.
ಪ್ರಬಲ ಆಕಾಂಕ್ಷಿಯಾಗಿ ನನಗೆ ಟಿಕೆಟ್ ನೀಡಿದಲ್ಲಿ ಚೇಳೂರು ಕ್ಷೇತ್ರ ಗೆಲ್ಲುವ ಜೊತೆಗೆ ಇಲ್ಲಿನ ಮೂರು ತಾಲೂಕು ಪಂಚಾಯಿತಿ ಕ್ಷೇತ್ರ ಸಹ ಮೈತ್ರಿ ಪಕ್ಷದ ತೆಕ್ಕೆಗೆ ತರುತ್ತೇನೆ. ಈ ಜೊತೆಗೆ ಉಳಿದ ಐದು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿನ ಗೊಲ್ಲ ಸಮುದಾಯದ ಮತಗಳನ್ನು ಮೈತ್ರಿ ಪಕ್ಷದತ್ತ ತರುವ ಕೆಲಸ ಮಾಡುತ್ತೇನೆ. ಚೇಳೂರು ಜಿಪಂ ಕ್ಷೇತ್ರದಲ್ಲಿ 12 ಸಾವಿರ ಮತಗಳನ್ನು ಹೊಂದಿರುವ ಕಾಡು ಗೊಲ್ಲರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಮೈತ್ರಿ ಪಕ್ಷದ ಮುಖಂಡರಲ್ಲಿ ಮನವಿ ಮಾಡಿದದರು.ಮೂರು ದಶಕದ ಪಕ್ಷ ಸಂಘಟನೆ, ಎಲ್ಲಾ ಚುನಾವಣೆಯಲ್ಲಿ ಪ್ರಾಮಾಣಿಕ ಪರಿಶ್ರಮ, ಎಲ್ಲಾ ವರ್ಗದ ಸಮುದಾಯದ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿ ಹಾಗೂ ಸ್ಥಳೀಯ ಎಂಬ ಮಾನದಂಡ ಎಲ್ಲದಕ್ಕೂ ಅರ್ಹತೆ ಇರುವ ಕಾರಣ ನನಗೆ ಟಿಕೆಟ್ ನೀಡಿ ಎಂದು ಮನವಿ ಮಾಡಿದ ಅವರು, ಬಡ ಸಮುದಾಯ ಕಾಡುಗೊಲ್ಲರು ಈಗಾಗಲೇ ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದ ವರ್ಗವಾಗಿದೆ. ರಾಜಕೀಯ ಪ್ರಾತಿನಿಧ್ಯ ಮೈತ್ರಿ ಪಕ್ಷದಿಂದ ದೊರೆಯಲಿ ಎಂದು ಆಶಿಸಿದರು.
ಮುಖಂಡರಾದ ಸಣ್ಣತಿಮ್ಮಯ್ಯ, ಆನಂದ್, ಶಿವರಾಜು, ಹಾಲೇಗೌಡ, ಶ್ರೀನಿವಾಸ್, ಪ್ರಶಾಂತ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.