ಜೆಡಿಎಸ್ ಜತೆ ಮೈತ್ರಿ ಮಾತುಕತೆ ಜನವರಿ ಬಳಿಕ ಮುಂದುವರಿಯುತ್ತೆ
KannadaprabhaNewsNetwork | Published : Nov 04 2023, 12:30 AM IST
ಜೆಡಿಎಸ್ ಜತೆ ಮೈತ್ರಿ ಮಾತುಕತೆ ಜನವರಿ ಬಳಿಕ ಮುಂದುವರಿಯುತ್ತೆ
ಸಾರಾಂಶ
ಜೆಡಿಎಸ್ ಪಕ್ಷ ಎನ್‌ಡಿಎ ಮೈತ್ರಿಕೂಟ ಸೇರಿದ್ದು, ಜನವರಿ ಬಳಿಕ ಮಾತುಕತೆಗಳು ಮುಂದುವರಿಯಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಸ್ಪಷ್ಟಪಡಿಸಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ಜೆಡಿಎಸ್ ಪಕ್ಷ ಎನ್‌ಡಿಎ ಮೈತ್ರಿಕೂಟ ಸೇರಿದ್ದು, ಜನವರಿ ಬಳಿಕ ಮಾತುಕತೆಗಳು ಮುಂದುವರಿಯಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಸ್ಪಷ್ಟಪಡಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯ ನಡೆಯಲಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಹೊಂದಾಣಿಕೆ ಸ್ಥಾನ ಹಂಚಿಕೆ ಬಗ್ಗೆ ಕೇಂದ್ರ ನಾಯಕರು ನಿರ್ಧರಿಸಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ 6 ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದು, ಜನವರಿ ಬಳಿಕ ಜೆಡಿಎಸ್ ಜತೆ ಮಾತುಕತೆ ಬಳಿಕ ಸ್ಪಷ್ಟತೆ ಸಿಗಲಿದೆ ಎಂದರು. ಲೋಕಸಭಾ ಚುನಾವಣೆ ದೃಷ್ಟಿಯಿಂದ ಪಕ್ಷವನ್ನು ಮತ್ತೆ ಸಂಘಟನೆ ಮಾಡುತ್ತಿದ್ದು, ಜನವರಿ ನಂತರ ಮತ್ತಷ್ಟು ವೇಗ ದೊರೆಯಲಿದೆ. ಸಮೀಕ್ಷೆ ನಡೆಸಿ ಟಿಕೆಟ್ ಹಂಚಿಕೆ ಮಾಡಲಿದ್ದು, ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದರು. ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಎಚ್.ಡಿ. ಕುಮಾರಸ್ವಾಮಿ ನೇಮಕ ಕುರಿತು ಉತ್ತರಿಸಲು ನಿರಾಕರಿಸಿದರು. ಒಂದು ಕಡೆ ವಿದ್ಯುತ್ ಕ್ಷಾಮ ಪ್ರಾರಂಭ ಆಗುತ್ತಿದೆ. ಇನ್ನೊಂದು ಕಡೆ ನೀರಿಲ್ಲ, ಇದರ ಪರಿಣಾಮ ರೈತ ಸಂಕಷ್ಟಕ್ಕೆ ಸಿಲುಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಪಕ್ಷದಿಂದ ಬರ ಅಧ್ಯಯನ ಮಾಡುತ್ತಿದ್ದೇವೆ ಎಂದು ಹೇಳಿದರು. ಕಾಂಗ್ರೆಸ್ಸಿಗೆ ತಿರುಗೇಟು: ಕಾಂಗ್ರೆಸ್‌ನಲ್ಲಿ ಈಗ ಮೂರು ಬಣಗಳಾಗಿದ್ದು, ದಿನದಿಂದ ದಿನಕ್ಕೆ ಕಾಂಗ್ರೆಸ್ ಒಳಜಗಳ ಹೆಚ್ಚುತ್ತಲೇ ಇದೆ. ಒಳಜಗಳದಿಂದ ಈ ಸರಕಾರ ಬಿದ್ದು ಹೋಗುತ್ತದೆ ಎಂದು ಹೇಳಿದರು. ಪ್ರತಿಪಕ್ಷ ಸ್ಥಾನಕ್ಕೆ ಸೂಕ್ತ ಸಮಯದಲ್ಲಿ ನಾಯಕನನ್ನು ಮಾಡಲಾಗುತ್ತಿದೆ. ಈ ಹಿಂದೆಯೂ ಕಾಂಗ್ರೆಸ್ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಿರಲಿಲ್ಲ ಎಂದು ತಿರುಗೇಟು ನೀಡಿದರು. ಬರ ಪರಿಹಾರ ಘೋಷಣೆಗೆ ಕೇಂದ್ರ ಸರಕಾರಕ್ಕೆ ತನ್ನದೇ ಆದ ಮಾರ್ಗಸೂಚಿಗಳಿವೆ. ಎನ್‌ಡಿಆರ್‌ಎಫ್ ಅನುದಾನವನ್ನು ಎಲ್ಲ ಸಮಯಗಳಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈಗಾಗಲೇ ಕೇಂದ್ರ ತಂಡ ಅಧ್ಯಯನ ಮಾಡಿ ವರದಿ ಸಲ್ಲಿಸಿದೆ. ಇದರ ಜತೆಗೆ ರಾಜ್ಯ ಸರಕಾರದಿಂದಲೂ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದೆಲ್ಲವನ್ನೂ ನೋಡಿಕೊಂಡು ಕೇಂದ್ರ ಅನುದಾನ ಬಿಡುಗಡೆ ಮಾಡಲಿದೆ ಎಂದರು.