ಕುಟುಂಬ ರಕ್ಷಣೆಗೆ ಎಚ್‌.ಡಿ.ದೇವೇಗೌಡರಿಂದ ಮೈತ್ರಿ ಅಸ್ತ್ರ: ಎಂಎಲ್‌ಸಿ ಎಲ್.ಹನುಮಂತಯ್ಯ

| Published : Apr 22 2024, 02:01 AM IST

ಕುಟುಂಬ ರಕ್ಷಣೆಗೆ ಎಚ್‌.ಡಿ.ದೇವೇಗೌಡರಿಂದ ಮೈತ್ರಿ ಅಸ್ತ್ರ: ಎಂಎಲ್‌ಸಿ ಎಲ್.ಹನುಮಂತಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆ ಬಳಿಕ ಜೆಡಿಎಸ್ ಮುಗಿದ ಅಧ್ಯಾಯವಾಗಲಿದೆ. ಆ ಪಕ್ಷದ ಅರ್ಧದಷ್ಟು ಶಾಸಕರು ಬಿಜೆಪಿಗೆ ಸೇರಿದರೆ, ಇನ್ನರ್ಧದಷ್ಟು ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಲ್.ಹನುಮಂತಯ್ಯ ತಿಳಿಸಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಚುನಾವಣೆ ಬಳಿಕ ಜೆಡಿಎಸ್ ಮುಗಿದ ಅಧ್ಯಾಯ । ಅನಿವಾರ್ಯವಾಗಿ ಬಿಜೆಪಿ ಜತೆ ಹೊಂದಾಣಿಕೆ

ಕನ್ನಡಪ್ರಭ ವಾರ್ತೆ ಹಾಸನ

ಲೋಕಸಭೆ ಚುನಾವಣೆ ಬಳಿಕ ಜೆಡಿಎಸ್ ಮುಗಿದ ಅಧ್ಯಾಯವಾಗಲಿದೆ. ಆ ಪಕ್ಷದ ಅರ್ಧದಷ್ಟು ಶಾಸಕರು ಬಿಜೆಪಿಗೆ ಸೇರಿದರೆ, ಇನ್ನರ್ಧದಷ್ಟು ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಲ್.ಹನುಮಂತಯ್ಯ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ‘ಜೆಡಿಎಸ್ ಪಕ್ಷದ ಅಸ್ತಿತ್ವಕ್ಕೆ ಕುತ್ತು ಬಂದಿರುವುದರಿಂದ ಅನಿವಾರ್ಯವಾಗಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ನಾನು ಗಮನಿಸಿದ ಹಾಗೆ ಜಾತ್ಯತೀತವಾಗಿ ಹೆಚ್ಚು ಹೋರಾಟ ನಡೆಸಿಕೊಂಡು ಬಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಮ್ಮ ಕುಟುಂಬದ ರಕ್ಷಣೆಗಾಗಿ ಕೊನೆಯ ಅಸ್ತ್ರವಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಚುನಾವಣೆ ಮುಗಿದ ಬಳಿಕ ಜೆಡಿಎಸ್ ಇರುವುದೇ ಇಲ್ಲ, ಬಿಜೆಪಿಯೊಂದಿಗೆ ವಿಲೀನವಾಗುತ್ತದೆ. ಆ ಪಕ್ಷದಲ್ಲಿ ಜಾತ್ಯತೀತ ತತ್ವಕ್ಕೆ ಬದ್ಧರಾಗಿರುವ ಶಾಸಕರು ಬಿಜೆಪಿಗೆ ಹೋಗಲಾರದೆ ನಮ್ಮ ಪಕ್ಷಕ್ಕೆ ಬರಲಿದ್ದಾರೆ. ಯಾರ್‍ಯಾರು ಬರುತ್ತಾರೆ ಎಂಬುದು ಚುನಾವಣೆ ಮುಗಿದ ಬಳಿಕ ಗೊತ್ತಾಗಲಿದೆ’ ಎಂದು ಹೇಳಿದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ವಾರ್ಷಿಕ ಒಂದು ಲಕ್ಷ ರು. ನೀಡುವ ಮಹಾಲಕ್ಷೀ ಯೋಜನೆ ಜಾರಿ ಮಾಡಿದರೆ, ಸರ್ಕಾರದ ಖಜಾನೆಯೇ ಖಾಲಿಯಾಗಲಿದೆ ಎಂದು ಬಿಜೆಪಿಯವರು ಸುಳ್ಳು ಹೇಳುವ ಮೂಲಕ ಜನರಿಗೆ ನೆರವಾಗುವ ಯೋಜನೆಗಳನ್ನು ನೀಡಲೇಬಾರದು ಎಂಬ ಭಾವನೆಯಲ್ಲಿದ್ದಾರೆ. ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವ ಮಹಾಲಕ್ಷೀ ಯೋಜನೆ ಬಡ ಜನರಿಗೆ ಪೂರಕವಾಗಿದ್ದು, ದೇಶದ ಆರ್ಥಿಕ ಪ್ರಗತಿಗೂ ನೆರವಾಗಲಿದೆ. ಆದರೆ, ಬಿಜೆಪಿ ಘೋಷಣೆ ಮಾಡಿರುವ ಪ್ರಣಾಳಿಕೆಯಲ್ಲಿ ಯಾವ ಯೋಜನೆ ಜನರಿಗೆ ಅನುಕೂಲವಾಗಲಿದೆ? ಮುಂದಿನ ಐದು ವರ್ಷದಲ್ಲಿ ಏನೇನು ಮಾಡುತ್ತೇವೆ ಎಂಬುದನ್ನೂ ಹೇಳಿಲ್ಲ. ಬಿಜೆಪಿಯವರದು ಅಸ್ಪಷ್ಟ ಪ್ರಣಾಳಿಕೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡವರಿಗೆ ಪೂರಕವಾದ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿ ಶಕ್ತಿ ತುಂಬುವ ಕೆಲಸ ಮಾಡಿದೆ. ಆದರೆ, ಕಳೆದ ೧೦ ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರ ಬಡವರ ಪರವಾಗಿ ಯಾವ ಕಾನೂನು ತಂದಿಲ್ಲ, ಕೆಲಸವನ್ನೂ ಮಾಡಿಲ್ಲ. ರೈತರು ಒಂದು ವರ್ಷ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರೂ ಬೆಂಬಲ ಬೆಲೆ ನಿಗದಿಗೊಳಿಸಿ ರೈತರ ಹಿತ ಕಾಪಾಡುವ ಕೆಲಸ ಮಾಡಿಲ್ಲ. ವಿದೇಶದಿಂದ ಕಪ್ಪು ಹಣ ತರುತ್ತೇವೆ ಎಂದು ಪ್ರಾರಂಭದಲ್ಲಿ ಹೇಳಿದರೂ ಅದು ಸಾಧ್ಯವಾಗಿಲ್ಲ. ಬಿಜೆಪಿ ಹತ್ತು ವರ್ಷದ ಅವಧಿಯಲ್ಲಿ ಶೇ.೧೧೪ ರಷ್ಟು ಭಾರತೀಯರ ಕಪ್ಪುಹಣ ಹೆಚ್ಚಾಗಿದೆ. ಇವರ ಅವಧಿಯಲ್ಲೇ ೩೮ ಉದ್ಯಮಿಗಳು ಬ್ಯಾಂಕ್‌ಗಳ ಸಾಲ ಕಟ್ಟಲಾಗದೆ ದೇಶ ಬಿಟ್ಟು ಓಡಿ ಹೋಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ವಿಕಿಸಿತ ಭಾರತದ ಬಗ್ಗೆ ಹೇಗೆ ಮಾತನಾಡುತ್ತಿದ್ದಾರೆ ಎಂದು ಅಣಕವಾಡಿದರು.

‘ನಮ್ಮದು ಭ್ರಷ್ಟಾಚಾರ ರಹಿತ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿಯವರು ತಾವೇ ಅಂತಾರಾಷ್ಟ್ರೀಯ ಮಟ್ಟದ ಚುನಾವಣಾ ಬಾಂಡ್ ಹಗರಣ ನಡೆಸಿದ್ದಾರೆ. ಬಿಜೆಪಿ ಸರ್ಕಾರ ಐಟಿ, ಇಡಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡಿದೆ. ತಮ್ಮ ಹಗರಣ ಬಯಲಾಗುತ್ತದೆ ಎಂದು ಎಸ್‌ಬಿಐ ಬ್ಯಾಂಕ್‌ನಿಂದ ಸುಪ್ರೀಂ ಕೋರ್ಟ್‌ಗೆ ಸುಳ್ಳು ಹೇಳಿಸಿತು. ಕೋರ್ಟ್ ಬ್ಯಾಂಕ್‌ಗೆ ಚಾಟಿ ಬೀಸಿದ್ದರಿಂದ ಚುನಾವಣಾ ಬಾಂಡ್ ಮೊತ್ತವನ್ನು ಬಹಿರಂಗಪಡಿಸಿದೆ’ ಎಂದು ಹೇಳಿದರು.

ಕಾಂಗ್ರೆಸ್ ವಕ್ತಾರ ದೇವರಾಜೇಗೌಡ, ಕಾಂಗ್ರೆಸ್ ಮುಖಂಡ ಜಾವಗಲ್ ಮಂಜುನಾಥ್, ದಾರಸಕೊಪ್ಪಲು ರಘು ಮತ್ತಿತರರು ಹಾಜರಿದ್ದರು.

ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಎಂಎಲ್‌ಸಿ ಎಲ್‌.ಹನುಮಂತಯ್ಯ.