ಸಾರಾಂಶ
ಯಳವಾರೆ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜಯಗಳಿಸಿದ ಎಲ್ಲಾ 12 ಸದಸ್ಯರಿಗೆ ಗ್ಯಾರಂಟಿ ಯೋಜನಾ ಸಮಿತಿ ತಾಲೂಕು ಅಧ್ಯಕ್ಷ ಧರ್ಮಶೇಖರ್ ಅಭಿನಂದನೆ ಸಲ್ಲಿಸಿದ್ದಾರೆ. ಯಳವಾರೆಯಲ್ಲಿ ಜೆಡಿಎಸ್‌ನ ಅಡಿಪಾಯವನ್ನು ನಾವು ಹಾಕಿದ್ದೇವೆ. ಆದರೆ ನಮ್ಮವರೇ ನಮ್ಮ ವಿರೋಧಿಗಳಾಗಿರುವುದರಿಂದ ಈ ಸೋಲು ಎದುರಾಗಿದೆ. ಜೆಡಿಎಸ್ ಹಣಬಲದಿಂದ ಗೆದ್ದಿದೆ. ಕಾಂಗ್ರೆಸ್ ಶಾಸಕರ ಬೆಂಬಲವಿಲ್ಲದೆ ನಾವು ಎರಡು ಸ್ಥಾನಗಳಲ್ಲಿ ಗೆದ್ದಿರುವುದು ನಮ್ಮ ಶಕ್ತಿಯ ಪ್ರತೀಕ, ಎಂದರು. ಸೊಸೈಟಿಯನ್ನು ನಿಷ್ಕಲ್ಮಶವಾಗಿ ಮುಂದಿನ ಹಾದಿಯಲ್ಲಿ ನಡೆಸಿ ರೈತರ ಹಿತಾಸಕ್ತಿಗೆ ಕೆಲಸ ಮಾಡುವ ನಿರೀಕ್ಷೆಯಿದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಯಳವಾರೆ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜಯಗಳಿಸಿದ ಎಲ್ಲಾ 12 ಸದಸ್ಯರಿಗೆ ಗ್ಯಾರಂಟಿ ಯೋಜನಾ ಸಮಿತಿ ತಾಲೂಕು ಅಧ್ಯಕ್ಷ ಧರ್ಮಶೇಖರ್ ಅಭಿನಂದನೆ ಸಲ್ಲಿಸಿದ್ದಾರೆ.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು 10 ಸ್ಥಾನಗಳಲ್ಲಿ ಜಯಗಳಿಸಿದ್ದು, ಕಾಂಗ್ರೆಸ್ ಪಕ್ಷವು ಎರಡು ಸ್ಥಾನಗಳನ್ನು ಗಿಟ್ಟಿಸಿಕೊಂಡಿದೆ ಎಂದು ತಿಳಿಸಿದರು. ಸೊಸೈಟಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.ಕಾಂಗ್ರೆಸ್ ಅಭ್ಯರ್ಥಿಗಳು ಅಲ್ಪ ಮತದಿಂದ ಸೋತಿರುವುದಕ್ಕೆ ಪಕ್ಷದ ಒಳಗಿರುವ ಹೊಂದಾಣಿಕೆಯ ಕೊರತೆಯೇ ಕಾರಣ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಈ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಯಳವಾರೆಯಲ್ಲಿ ಜೆಡಿಎಸ್‌ನ ಅಡಿಪಾಯವನ್ನು ನಾವು ಹಾಕಿದ್ದೇವೆ. ಆದರೆ ನಮ್ಮವರೇ ನಮ್ಮ ವಿರೋಧಿಗಳಾಗಿರುವುದರಿಂದ ಈ ಸೋಲು ಎದುರಾಗಿದೆ. ಜೆಡಿಎಸ್ ಹಣಬಲದಿಂದ ಗೆದ್ದಿದೆ. ಕಾಂಗ್ರೆಸ್ ಶಾಸಕರ ಬೆಂಬಲವಿಲ್ಲದೆ ನಾವು ಎರಡು ಸ್ಥಾನಗಳಲ್ಲಿ ಗೆದ್ದಿರುವುದು ನಮ್ಮ ಶಕ್ತಿಯ ಪ್ರತೀಕ, ಎಂದರು. ಸೊಸೈಟಿಯನ್ನು ನಿಷ್ಕಲ್ಮಶವಾಗಿ ಮುಂದಿನ ಹಾದಿಯಲ್ಲಿ ನಡೆಸಿ ರೈತರ ಹಿತಾಸಕ್ತಿಗೆ ಕೆಲಸ ಮಾಡುವ ನಿರೀಕ್ಷೆಯಿದೆ ಎಂದು ಹೇಳಿದರು.ಈ ವೇಳೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯಳವಾರೆ ನಾಗರಾಜ್ ಮಾತನಾಡಿ, ಗ್ರಾಮಕ್ಕೆ ಸೊಸೈಟಿ ತಂದು ಸ್ಥಾಪಿಸಿದವರನ್ನೇ ಇಂದು ಹೊರಗೆ ಹಾಕಲಾಗಿದೆ. 20 ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ನಮ್ಮಂತಹ ಹಳೆಯ ಕಾರ್ಯಕರ್ತರ ತ್ಯಾಗ ವ್ಯರ್ಥವಾಗಿದೆ. ಧರ್ಮೇಶ್ ಅವರ ಕುತಂತ್ರ ರಾಜಕಾರಣದಿಂದ ನಾವು ಸೋಲು ಕಂಡಿದ್ದೇವೆ, ಎಂದು ಆರೋಪಿಸಿದರು. ಧರ್ಮೇಶ್ ಅವರನ್ನು ನಾವು ಹಿಂದಿನ ಚುನಾವಣೆಯಲ್ಲಿ ಗೆಲ್ಲಿಸಿದ್ದೇವೆ. ಆದರೆ ಅವರು ಪಕ್ಷದ ನಿಷ್ಠೆಯನ್ನು ಮರೆತು ರಾತ್ರೋರಾತ್ರಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಸಂಪರ್ಕಕ್ಕೆ ಹೋಗಿ, ಸುಮಾರು 30 ಸಾವಿರಕ್ಕೂ ಹೆಚ್ಚು ಹಣ ನೀಡಿ ಸೊಸೈಟಿಯ ಎದುರು ಅವರ ಪರ ಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಿದರು. ಪಕ್ಷ ಎಂದರೆ ತಾಯಿಯಿದ್ದಂದೆ. ಪಕ್ಷಕ್ಕೆ ಮೋಸ ಮಾಡಿದರೆ ಅದು ತಾಯಿಗೆ ಮೋಸ ಮಾಡಿದಂತೆಯೇ. ಧರ್ಮೇಶ್ ಅನೇಕ ಅಕ್ರಮ ವ್ಯವಹಾರಗಳನ್ನು ನಡೆಸಿದ್ದರು. ಇದರ ಕುರಿತು ಶಾಸಕರಿಗೆ ಮಾಹಿತಿ ನೀಡಿದ್ದರೂ, ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಸತ್ಯ ಹೇಳಿದ ಕಾರಣಕ್ಕೆ ನಾವು ಇಂದು ಸೋಲನ್ನು ಅನುಭವಿಸುತ್ತಿದ್ದೇವೆ, ಈ ಸೋಲಿಗೆ ಶಾಸಕರು ಪ್ರತ್ಯಕ್ಷವಾಗಿ ಅಲ್ಲದಿದ್ದರು ಪರೋಕ್ಷವಾಗಿ ಅವರು ಕಾರಣರೇ ಎಂದು ವಿಷಾದ ವ್ಯಕ್ತಪಡಿಸಿದರು. ಧರ್ಮೇಶ್ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿಸಿ ಹಣ ಹಂಚಿ ನಮ್ಮ ಸೋಲಿಗೆ ಕಾರಣಕರ್ತರಾಗಿದ್ದಾರೆ, ಪಕ್ಷದ ಹಿತಕ್ಕಾಗಿ ದುಡಿಯುವವರೇ ಬದಿಗೊಂಡಿದ್ದಾರೆ. ಹಿಂದುಳಿದ ವರ್ಗದವರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ, ಎಂದು ಆಕ್ರೋಶ ವ್ಯಕ್ತಪಡಿಸಿದರು.ಒಟ್ಟು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 6 ಒಕ್ಕಲಿಗ ಗೌಡರು ಜಯಗಳಿಸಿದ್ದು, ಯಾದವ, ತಿಗಡ, ಲಿಂಗಾಯತ ಮತ್ತು ಗಂಗಾಮತಸ್ಥ ಸಮುದಾಯದ ಅಭ್ಯರ್ಥಿಗಳು ಸೋತಿದ್ದಾರೆ ಎಂದು ತಿಳಿಸಿದರು.ಈ ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಹಾರನಹಳ್ಳಿ ಹಿರಿಯಣ್ಣ, ಹಾಲಿ ಸದಸ್ಯ ಮಹೇಶ್ ಯರೇಹಳ್ಳಿ, ಮಲ್ಲೇಶ್ ರಂಗಾಪುರ ಹಾಗೂ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.