ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಮೈತ್ರಿ ಹೀಗೆಯೇ ಮುಂದುವರಿಯಲಿದೆ. ಈ ಮೈತ್ರಿ ಮುಂದುವರಿಸಲು ದೇವೇಗೌಡರು, ಕುಮಾರಸ್ವಾಮಿ ಆಸಕ್ತಿ ಹೊಂದಿದ್ದಾರೆ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಬಾಗಲಕೋಟೆ ಜಿಲ್ಲೆ ಬಾದಾಮಿಯ ವೀರಪುಲಿಕೇಶಿ ಮೈದಾನದಲ್ಲಿ ಗುರುವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಮತಕ್ಷೇತ್ರ ಸಿದ್ದರಾಮಯ್ಯ ಸ್ಪರ್ಧೆಯ ಕಾರಣ ಇಡೀ ರಾಜ್ಯದ ಗಮನ ಸೆಳೆದಿತ್ತು. ಚಾಮುಂಡಿಯಲ್ಲಿ ಜನ ಅವರ ಪರ ಇಲ್ಲ ಎಂಬುದು ಗೊತ್ತಾಗಿ ಬಾದಾಮಿ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದರು. ಇಲ್ಲಿಯೂ ಅವರು ಗೆದ್ದಿದ್ದು ದೊಡ್ಡ ಅಂತರದಿಂದಲ್ಲ. ಇಬ್ಬರು ಬಲಿಷ್ಠರ ಪೈಪೋಟಿಯ ಮಧ್ಯೆ ಶ್ರೀರಾಮುಲು ಅಲ್ಪಮತಗಳ ಅಂತರದಲ್ಲಿ ಸೋಲನ್ನು ಅಭವಿಸಿದರು. ಸಿದ್ದರಾಮಯ್ಯ ನಿಮ್ಮೆಲ್ಲರ ಆಶೀರ್ವಾದದಿಂದ ಗೆದ್ದರು. ಆದರೆ, ಜನರ ನಿರೀಕ್ಷೆಯಂತೆ ಕೆಲಸ ಮಾಡಲಿಲ್ಲ. ಪುನರ್ಜನ್ಮ ನೀಡಿದ ಕ್ಷೇತ್ರಕ್ಕೆ ಏನೂ ಮಾಡಲಿಲ್ಲ ಎಂದು ಆರೋಪಿಸಿದರು.ರಾಜ್ಯದಲ್ಲಿ ಶಾಸಕರು ಅನುದಾನ ಪಡೆಯಲು ಸಿಎಂ ಅವರನ್ನು ಭೇಟಿ ಮಾಡುವ ಬದಲು ಸುರ್ಜೇವಾಲಾ ಅವರನ್ನು ಭೇಟಿ ಮಾಡ್ತೀವಿ ಅಂತಿದ್ದಾರೆ. ಅಂದರೆ, ಸರ್ಕಾರ ಯಾವ ರೀತಿ ನಡೆಯುತ್ತಿದೆ ಎಂಬುದಕ್ಕೆ ಇದು ಸಣ್ಣ ಉದಾಹರಣೆ. ಸಿದ್ದರಾಮಯ್ಯ ಸಾಂವಿಧಾನಿಕ ಹುದ್ದೆ ಅಲಂಕರಿಸಿ ಕುಳಿತಿದ್ದರೂ, ಸೂಪರ್ ಸಿಎಂ ಸುರ್ಜೇವಾಲಾ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ದೂರಿದರು.
ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು, ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯಿಸಿ, ಸಿಎಂ ಸ್ಥಾನದಿಂದ ಯಾರು ಕೆಳಗಿಳಿಯುತ್ತಾರೆ?, ಯಾರು ಕೆಳಗಿಳಿಸುತ್ತಾರೆ?, ಕೆಪಿಸಿಸಿ ಅಧ್ಯಕ್ಷರ ಕುರ್ಚಿ ಮೇಲೆ ಯಾರು ಕಣ್ಣಿಟ್ಟಿದ್ದಾರೆ? ಎಂಬುದೆಲ್ಲಾ ನಮಗೆ ಬೇಕಿಲ್ಲದ ವಿಚಾರ. ಮಾತೆತ್ತಿದರೆ ಗ್ಯಾರಂಟಿ ಅಂತಾರೆ. ಆದರೆ, ಇದುವರೆಗೂ ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿಲ್ಲ ಎಂದು ಆರೋಪಿಸಿದರು.ಡಿಕೆಶಿ ಸಿಎಂ ಆಗಬೇಕು ಎಂಬುದಾಗಿ ಕೆಲ ಸ್ವಾಮೀಜಿಗಳು ಡಿಕೆಶಿ ಪರ ಬ್ಯಾಟಿಂಗ್ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಧಾರ್ಮಿಕ ಗುರುಗಳು ಒಂದಷ್ಟು ಸಂದರ್ಭದಲ್ಲಿ, ತಮ್ಮ ಸಮುದಾಯದ ನಾಯಕರಿಗೆ ಅವಕಾಶ ಸಿಗಲಿ ಎನ್ನುವ ಉದ್ದೇಶಕ್ಕೆ ಭಾವನೆ ವ್ಯಕ್ತಪಡಿಸಿದ್ದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು.ನವೆಂಬರ್‌ನಲ್ಲಿ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ನಾನು ಅದರ ಬಗ್ಗೆ ಹೆಚ್ಚು ಮಾತನಾಡಲ್ಲ. ಏಕೆಂದರೆ ಸರ್ಕಾರಕ್ಕೆ ರಾಜ್ಯದ ಜನತೆ ಸಂಪೂರ್ಣ ಬಹುಮತದ ಆಶೀರ್ವಾದ ಮಾಡಿದ್ದಾರೆ. ವಾಮಮಾರ್ಗ ಮೂಲಕ ಸರ್ಕಾರ ರಚನೆಯ ಪ್ರಶ್ನೆಯೇ ಇಲ್ಲ. ನಾವು ವಿಪಕ್ಷದ ಸ್ಥಾನದಲ್ಲಿ ಕುಳಿತಿದ್ದೇವೆ, ಇನ್ನೂ ಮೂರು ವರ್ಷ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.