ಸಹಕಾರ ಸಂಘಗಳ ಉಪ ನಿಬಂಧಕರ ವಿರುದ್ಧ ಮೈತ್ರಿ ಕಾರ್ಯಕರ್ತರ ಪ್ರತಿಭಟನೆ

| Published : Jan 24 2025, 12:49 AM IST

ಸಾರಾಂಶ

ಸಿಡಿಪಿಒ ಆಗಲೂ ಲಾಯಕ್ಕಿಲ್ಲದ ನಾಗಭೂಷಣ್ ಎಂಬ ಅಧಿಕಾರಿಯನ್ನು ಜಿಲ್ಲಾ ಉಸ್ತುವಾರಿ ಚಲುವರಾಯಸ್ವಾಮಿ ಅವರಿಗೆ ಬಕೆಟ್ ಹಿಡಿಯುತ್ತಾನೆ ಎಂಬ ಕಾರಣಕ್ಕೆ ಸರ್ಕಾರ ಆತನಿಗೆ ಪಾಂಡವಪುರ ತಾಲೂಕು ಸಹಕಾರ ಸಂಘಗಳ ಸಹಾಯಕ ನಿಬಂಧಕನನ್ನಾಗಿ ನೇಮಕ ಮಾಡಿದೆ. ಅಲ್ಲದೇ, ಮದ್ದೂರು ತಾಲೂಕು ಹಾಗೂ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರ ಅಧಿಕಾರ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಕಾಂಗ್ರೆಸ್ ನಾಯಕರ ಮಾತು ಕೇಳಿ ಉದ್ದೇಶ ಪೂರ್ವಕವಾಗಿ ಸಹಕಾರಿ ಸಂಘಗಳ ಸದಸ್ಯರನ್ನು ಅನರ್ಹ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಡೀಸಿ ಕಚೇರಿ ಎದುರು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಎರಡು ಪಕ್ಷಗಳ ಮುಖಂಡರು, ಕಾರ್ಯಕರ್ತರು, ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ್ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಅಧಿಕಾರಿಗಳ ಮೂಲಕ ವಿರೋಧ ಪಕ್ಷಗಳವರನ್ನು ಮಟ್ಟ ಹಾಕಲು ಜಿಲ್ಲಾ ಉಸ್ತುವಾರಿ ಸಚಿವರು ಮುಂದಾಗಿದ್ದಾರೆ. ಜಿಲ್ಲಾ ಸಹಕಾರ ಸಂಘದ ಸದಸ್ಯರನ್ನು ಸಂಘದ ಮೇಲಾಧಿಕಾರಿಗಳನ್ನು ಬಳಸಿಕೊಂಡು ಅನರ್ಹತೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಡಿಪಿಒ ಆಗಲೂ ಲಾಯಕ್ಕಿಲ್ಲದ ನಾಗಭೂಷಣ್ ಎಂಬ ಅಧಿಕಾರಿಯನ್ನು ಜಿಲ್ಲಾ ಉಸ್ತುವಾರಿ ಚಲುವರಾಯಸ್ವಾಮಿ ಅವರಿಗೆ ಬಕೆಟ್ ಹಿಡಿಯುತ್ತಾನೆ ಎಂಬ ಕಾರಣಕ್ಕೆ ಸರ್ಕಾರ ಆತನಿಗೆ ಪಾಂಡವಪುರ ತಾಲೂಕು ಸಹಕಾರ ಸಂಘಗಳ ಸಹಾಯಕ ನಿಬಂಧಕನನ್ನಾಗಿ ನೇಮಕ ಮಾಡಿದೆ. ಅಲ್ಲದೇ, ಮದ್ದೂರು ತಾಲೂಕು ಹಾಗೂ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರ ಅಧಿಕಾರ ನೀಡಲಾಗಿದೆ ಎಂದು ಛೇಡಿಸಿದರು.

ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ್, ಮುಂದೆಯೂ ಇದೇ ರೀತಿ ಕಾನೂನು ವಿರುದ್ಧವಾಗಿ ಕೆಲಸ ಮಾಡಿದರೆ ಮುಂದೆ ಕಸ ಹೊಡೆದುಕೊಂಡು ಬಿದ್ದಿರಬೇಕಾಗುತ್ತದೆ. ಅಧಿಕಾರದಲ್ಲಿ ಮುಂದುವರೆಯಬೇಕಾದರೆ ಕಾನೂನು ಬದ್ಧವಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ನಿಮ್ಮಂತಹ ಅಧಿಕಾರಿಗಳನ್ನು ಬಹಳ ಜನ ನೋಡಿದ್ದೀನಿ. ಐಎಎಸ್, ಐಪಿಎಸ್ ಅಧಿಕಾರಿಗಳ ಜೊತೆ ನಾನೂ ಕೆಲಸ ಮಾಡಿದ್ದೇನೆ. ವಿರೋಧಿಗಳಿಗೂ ನೋವು ಆಗದ ಹಾಗೆ ಕೆಲಸ ಮಾಡಿದ್ದೀವಿ. ತಾಲೂಕಿನ ಹುಲ್ಕೆರೆಕೊಪ್ಪಲು ಗ್ರಾಮದ ಡೈರಿ ಸಭೆ ನಡೆಸಲು ಕೋರಂ ಅಭಾವವಿದ್ದರೂ ಸಭೆ ನಡೆಸಲು ಹೋಗಿ ಒಬ್ಬ ಅಮಾಯಕ ಮಹಿಳೆ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾಳೆ, ನಿಮಗೆ ನಾಚಿಕೆ ಆಗಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

ಪಾಂಡವಪುರ ತಾಲೂಕು ಕೆ.ಬೆಟ್ಟಹಳ್ಳಿ ಸಹಕಾರ ಸಂಘವು ಇಡೀ ಸಹಕಾರ ಕ್ಷೇತ್ರದಲ್ಲೇ ಬಹಳ ಪ್ರಸಿದ್ಧಿ ಪಡೆದಿದೆ. ಗುರುಸ್ವಾಮಿ ಅವರು 40 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಸರ್ಕಾರ ಸಹಕಾರ ರತ್ನ ಪ್ರಶಸಿ ನೀಡಿ ಗೌರವಿಸಿದೆ. ಅಂತಹ ಸೊಸೈಟಿಯನ್ನು ಚುನಾವಣೆ ಮಾಡದೆ ಸಹಕಾರ ಸಂಘವನ್ನು ಅನರ್ಹ ಮಾಡಿದ್ದಿರಿ ಎಂದು ಡಿಆರ್ ನಾಗಭೂಷಣ್ ಅವರನ್ನು ಪ್ರಶ್ನಿಸಿದರು.

ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆ:

ಜಿಲ್ಲಾ ಸಹಕಾರ ಸಂಘದ ಸದಸ್ಯರನ್ನು ಅನರ್ಹತೆ ಮಾಡುತ್ತಿರುವ ಬಗ್ಗೆ ಉಗ್ರ ಹೋರಾಟ ಮಾಡಲು ಜಾ.ದಳ ಮತ್ತು ಬಿಜೆಪಿ ನಾಯಕರು ತೀರ್ಮಾನಿಸಿದ್ದೆವು. ಆದರೆ, ಜಿಲ್ಲಾಧಿಕಾರಿ ಡಾ.ಕುಮಾರ, ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಎರಡು ಪಕ್ಷದ ಮುಖಂಡರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಮನವಿ ನೀಡುತ್ತಿದ್ದೇವೆ ಎಂದರು.

ಜಿಲ್ಲಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡದೇ ಇದ್ದರೆ ನಾಳೆಯಿಂದ ಜಿಲ್ಲೆಯಲ್ಲಿ ಆಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆ ಆಗಬೇಕಾಗುತ್ತದೆ. ಸರ್ಕಾರ ಬರುತ್ತವೆ, ಹೋಗುತ್ತವೆ. ಆದರೆ, ಜಿಲ್ಲಾಧಿಕಾರಿಗಳು ನ್ಯಾಯಯುತ ಹಾಗೂ ಕಾನೂನುಬದ್ಧವಾಗಿ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಆಗ್ರಹಿಸಿದರು.

ಏಕಪಕ್ಷೀಯ ಧೋರಣೆ:

ಕೆ.ಆರ್. ಪೇಟೆ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಮಾತನಾಡಿ, ಸಹಕಾರಿ ವ್ಯವಸ್ಥೆಯಲ್ಲಿ ಸಣ್ಣಪುಟ್ಣ ನ್ಯೂನತೆಗಳನ್ನು ಸರ್ಕಾರ ಅಧಿಕಾರಿಗಳನ್ನು ಬಳಸಿಕೊಂಡು ದೊಡ್ಡದು ಮಾಡಿ ಸದಸ್ಯತ್ವವನ್ನು ರದ್ದುಪಡಿಸುತ್ತಿದೆ. ಎಆರ್ ಹಾಗೂ ಡಿಆರ್ ಎರಡೂ ಅಧಿಕಾರವನ್ನು ನಾಗಭೂಷಣ್ ಅವರೇ ನಿರ್ವಹಿಸುತ್ತಿದ್ದಾರೆ ಎಂದು ದೂರಿದರು.

ಈ ಅಧಿಕಾರಿ ಏಕಪಕ್ಷೀಯವಾಗಿ ಧೋರಣೆ ಮಾಡುತ್ತಿದ್ದು, ಅವರನ್ನು ಚುನಾವಣೆ ಮುಗಿಯುವವರೆಗೂ ವರ್ಗಾವಣೆ ಮಾಡುವಂತೆ ಜಿಲ್ಲಾಕಾರಿಗಳಲ್ಲಿ ಮನವಿ ಮಾಡಿದ್ದೆವು. ಆದರೆ, ಅದು ಆಗಿಲ್ಲ. 180 ದಿನ ಹಾಲು ಹಾಕದಿದ್ದರೆ ಅಧಿಕಾರದಲ್ಲಿ ಮುಂದುವರೆಯಲು ಆವಕಾಶ ಇಲ್ಲ ಎಂದು ಬೈಲಾದಲ್ಲಿದೆ. ಇದನ್ನು ಸಹಕಾರ ಸಂಘಗಳ ಅಧಿಕಾರಿಗಳು ಪ್ರತಿ ವರ್ಷನೂ ಪ್ರಶ್ನೆ ಮಾಡಬೇಕು. ಆದರೆ, ಯಾವ ಕೆಲಸನೂ ಮಾಡಿಲ್ಲ. ಈಗ ಸಹಾಯಕ ಉಪನಿಬಂಧಕರು ಯಾವುದೋ ಅರ್ಜಿ ತರಿಸಿಕೊಂಡು ಅರ್ಜಿ ಮುಖಾಂತರ ಇಂದು ನೋಟಿಸ್ ಕೊಟ್ಟು ನಾಳೆಗೇ ಅನರ್ಹ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್) ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್, ಮಾಜಿ ಶಾಸಕರಾದ ಡಾ.. ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಹಾಲಿ ಉಪಾಧ್ಯಕ್ಷ ಎಂ.ಎಸ್.ರಘುನಂದನ್, ನಿರ್ದೇಶಕಿ ರೂಪಾ, ಚಿಕ್ಕತಿಮ್ಮೇಗೌಡ, ಸಿ.ಟಿ.ಮಂಜುನಾಥ್, ಅರವಿಂದ್ , ಶ್ರೀಧರ್ ಸೇರಿದಂತೆ ಜಾ.ದಳ ಹಾಗೂ ಬಿಜೆಪಿಯ ನೂರಾರು ಮಂದಿ ಭಾಗವಹಿಸಿದ್ದರು.

ಅಧಿಕಾರಿಗಳ ಮೂಲಕ ವಿರೋಧಿಗಳ ದಮನಕ್ಕೆ ಯತ್ನ: ಪುಟ್ಟರಾಜು ಕಿಡಿ

ಮಂಡ್ಯ:

ಅಧಿಕಾರಿಗಳ ಮೂಲಕ ವಿರೋಧಿಗಳನ್ನು ದಮನ ಮಾಡಲು ಕಾಂಗ್ರೆಸ್ ಮತ್ತು ರಾಜ್ಯ ಸರ್ಕಾರ, ಮಂತ್ರಿಗಳು ಬೆಳಗಾವಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಪೂಜಿಸಿ ಆರಾಧಿಸುತ್ತಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಕಿಡಿಕಾರಿದರು.

ಸಹಕಾರ ಸಂಘಗಳ ಚುನಾವಣೆ ಹಿನ್ನೆಲೆಯಲ್ಲಿ ನಮ್ಮ-ನಿಮ್ಮ ನಡುವೆ ಒಂದು ರೀತಿ ಯುದ್ಧ ಪ್ರಾರಂಭವಾಗಿದೆ. ಈ ಯುದ್ಧದಲ್ಲಿ ಯಾವ ರೀತಿ ವಿರೋಧಿಗಳ ಕಾಲನ್ನು ಎಳೆಯಲು, ಮಣಿಸಲು ಒಳಗೊಳಗೆ ಕುತಂತ್ರ ನಡೆಸುತ್ತಿದ್ದಾರೆ. ಇದು ಸರಿಯಲ್ಲ ಎಂದರು.

ಯಾವುದೇ ಸವಾಲನ್ನು ತಾಕತ್ತಿದ್ದರೆ ನೇರವಾಗಿ ಎದುರಿಸಬೇಕು. ಸೋಲುವ ಭಯದಲ್ಲಿ ಅಧಿಕಾರಿಗಳನ್ನು ಏಕೆ ಬಲಿಪಶು ಮಾಡುತ್ತೀರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಹರಿಹಾಯ್ದರು.

ಸಹಕಾರ ಸಂಘದ ಚುನಾವಣೆಯಲ್ಲಿ ಮೇಲುಗೈ ಸಾಧಿಸಲಾಗದ ಭಯದಿಂದ ಕಾಂಗ್ರೆಸ್ ವಿಪಕ್ಷಗಳ ಬೆಂಬಲಿಗರನ್ನು ಹಣಿಯುವ ಪ್ರಯತ್ನ ಮಾಡುತ್ತಿದೆ. ಯುದ್ಧಕ್ಕೆ ಬಂದ ಮೇಲೆ ಯುದ್ಧ ಮಾಡಬೇಕೇ ಹೊರತು ವಿರೋಧಿಗಳನ್ನು ದಮನ ಮಾಡುವುದಲ್ಲ ಎಂದರು.