ವಿಶೇಷಚೇತನರಿಗೆ ಶೇ.5 ಅನುದಾನ ಮೀಸಲಿಡಿ: ಆಯುಕ್ತ ದಾಸ್ ಸೂರ್ಯವಂಶಿ

| Published : Oct 22 2024, 12:09 AM IST

ವಿಶೇಷಚೇತನರಿಗೆ ಶೇ.5 ಅನುದಾನ ಮೀಸಲಿಡಿ: ಆಯುಕ್ತ ದಾಸ್ ಸೂರ್ಯವಂಶಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಜಾರಿಗೆ ತರುವ ವಿವಿಧ ಯೋಜನೆ ಮತ್ತು ಅನುದಾನಗಳಲ್ಲಿ ವಿಶೇಷಚೇತನರಿಗಾಗಿ ಶೇ.5ರಷ್ಟು ಅನುದಾನವನ್ನು ಕಡ್ಡಾಯವಾಗಿ ಮೀಸಲಿಡಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಆಯುಕ್ತ ದಾಸ್ ಸೂರ್ಯವಂಶಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ತುಮಕೂರಿನಲ್ಲಿ ವಿಕಲಚೇತನರ ಪುನರ್ವಸತಿ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಅಧಿಕಾರಿಗಳಿಗೆ ಸೂಚನೆ । ಪ್ರಗತಿ ಪರಿಶೀಲನಾ ಸಭೆಕನ್ನಡಪ್ರಭವಾರ್ತೆ ತುಮಕೂರು

ಸರ್ಕಾರ ಜಾರಿಗೆ ತರುವ ವಿವಿಧ ಯೋಜನೆ ಮತ್ತು ಅನುದಾನಗಳಲ್ಲಿ ವಿಶೇಷಚೇತನರಿಗಾಗಿ ಶೇ.5ರಷ್ಟು ಅನುದಾನವನ್ನು ಕಡ್ಡಾಯವಾಗಿ ಮೀಸಲಿಡಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಆಯುಕ್ತ ದಾಸ್ ಸೂರ್ಯವಂಶಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲೆಯ ವಿಕಲಚೇತನರ ಪುನರ್ವಸತಿ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಅನುದಾನದಲ್ಲಿ ಶೇ.5ರಷ್ಟು ವಿಶೇಷಚೇತನರಿಗಾಗಿ ಮೀಸಲಿಡಬೇಕು ಎಂದು ಸರ್ಕಾರದ ಆದೇಶವಿದ್ದರೂ ಸಹ ಕೆಲವು ಇಲಾಖೆಗಳಲ್ಲಿ ಆದೇಶವನ್ನು ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.ಜಿಲ್ಲೆಯಲ್ಲಿ 3554 ವಿಶೇಷಚೇತನ ವಿದ್ಯಾರ್ಥಿಗಳಿದ್ದು 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಎಲ್ಲಾ ಶಾಲೆಗಳಲ್ಲೂ ವಿಶೇಷಚೇತನ ಮಕ್ಕಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.ಅಂಧ ಮತ್ತು ವಿಕಲಚೇತನ ಮಕ್ಕಳಿಗಾಗಿ ಎಲ್ಲಾ ಶಾಲೆಗಳಲ್ಲೂ ರ್‍ಯಾಂಪ್ ಹಾಗೂ ಅಡೆ-ತಡೆ ರಹಿತ ಶೌಚಾಲಯಗಳನ್ನು ನಿರ್ಮಿಸಬೇಕು. ವಿಶೇಷಚೇತನ ಮಕ್ಕಳ ತರಗತಿಗಳನ್ನು ಕೆಳಮಹಡಿಯ ಕೊಠಡಿಗಳಲ್ಲಿ ನಡೆಸಬೇಕು.ಜಿಲ್ಲೆಯಲ್ಲಿರುವ ಎಲ್ಲಾ ವಸತಿ ಶಾಲೆಗಳಲ್ಲಿ ಶೇ.10ರಷ್ಟು ವಿಕಲಚೇತನ ಮಕ್ಕಳಿಗೆ ಪ್ರವೇಶಾತಿ ನೀಡಬೇಕು ಎಂದು ಉಪನಿರ್ದೇಶಕರಿಗೆ ಸಲಹೆ ನೀಡಿದರು. ಗ್ರಾಮ ಪಂಚಾಯಿತಿಗಳಲ್ಲಿ ವಿಕಲಚೇತನರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ವೈದ್ಯಕೀಯ ಹಾಗೂ ಪುನರ್ವಸತಿ ಸೌಲಭ್ಯಗಳಿಗೆ ಅನುದಾನ ಬಳಕೆಯಾಗುವಂತೆ ಕ್ರಿಯಾಯೋಜನೆ ತಯಾರಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಶೇಷಚೇತನರ ಸಂಜೀವಿನಿ ಸ್ವಸಹಾಯ ಸಂಘಗಳನ್ನು ಸ್ಥಾಪಿಸುವ ಮೂಲಕ ವಿಕಲಚೇತನರನ್ನು ಆರ್ಥಿಕವಾಗಿ ಸಬಲೀಕರರನ್ನಾಗಿಸಬೇಕು ಎಂದು ತಿಳಿಸಿದರು.

ಮೀಸಲಾತಿ ಪ್ರಮಾಣವನ್ನು ಶೇ.3 ರಿಂದ ಶೇ.5ಕ್ಕೆ ಏರಿಕೆ ಮಾಡಲಾಗಿದ್ದು,ಎಲ್ಲಾ ಇಲಾಖೆಗಳಲ್ಲೂ ಮುಂಬರುವ ಯೋಜನೆಗಳಲ್ಲಿ ಈ ಮೀಸಲಾತಿ ಪ್ರಮಾಣವನ್ನು ಅನುಷ್ಠಾನಗೊಳಿಸುವಂತೆ ಈಗಾಗಲೇ ಎಲ್ಲಾ ಇಲಾಖೆಗಳಿಗೂ ಸೂಚಿಸಲಾಗಿದೆ. ಅಧಿಕಾರಿಗಳು ವ್ಯಾಪಕವಾಗಿ ಈ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡು ವಿಕಲಚೇತನ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಮಾಡಬೇಕು ಎಂದು ತಿಳಿಸಲಾಗಿದೆ ಎಂದರಲ್ಲದೆ, ಜಿಲ್ಲಾಸ್ಪತ್ರೆಯಲ್ಲಿ ವಿಕಲಚೇತನರ ಚಿಕಿತ್ಸೆಗಾಗಿ ಪ್ರತ್ಯೇಕ ಚಿಕಿತ್ಸಾ ಕೊಠಡಿ ತೆರೆಯಲಾಗಿದೆ ಎಂದು ತಿಳಿಸಿದರು. ಜಿಲ್ಲೆಯ ವಿಕಲಚೇತನರಿಗೆ ಸರ್ಕಾರದ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಒದಗಿಸಲು 320 ಗ್ರಾಮೀಣ ಪುನರರ್ವಸತಿ ಕಾರ್ಯಕರ್ತರನ್ನು ನೇಮಿಸಲಾಗಿದೆ. ವಿಕಲಚೇತನ ಮತ್ತು ಅಶಕ್ತ ವೃದ್ಧರನ್ನು ಆರೈಕೆ ಮಾಡುವವರಿಗೆ ಪ್ರತಿ ತಿಂಗಳು 1000 ಪಿಂಚಣಿ ನೀಡುವ ವಿಶೇಷ ಯೋಜನೆಯನ್ನು ಜಾರಿಯಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ,ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ, ಜಿಲ್ಲಾ ಕಾರ್ಯಕ್ರಮ ನಿರೂಪಣಾಧಿಕಾರಿ ದಿನೇಶ್, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಿಲ್ಪ ಎಂ.ದೊಡ್ಮನಿ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.