ಸಾರಾಂಶ
ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮಕ್ಕೆ ಬಾಲಕಿಯರ ಪ್ರೌಢಶಾಲೆ ಮಂಜೂರು ಮಾಡುವಂತೆ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ ದೋಟಿಹಾಳ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ದೋಟಿಹಾಳ ಗ್ರಾಮವು ಗ್ರಾಪಂ ಕೇಂದ್ರಸ್ಥಾನವಾಗಿದ್ದು, ತಾಲೂಕಿನಲ್ಲಿ ಅಭಿವೃದ್ಧಿಯತ್ತ ಸಾಗುತ್ತಿರುವ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವರೆಗೂ ಶಿಕ್ಷಣ ದೊರೆಯುತ್ತಿದೆ. ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು 725 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅದರಲ್ಲಿ 375 ವಿದ್ಯಾರ್ಥಿನಿಯರು ಇದ್ದಾರೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 55 ವಿದ್ಯಾರ್ಥಿನಿಯರು ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಗ್ರಾಮದ ಶಾಲಾ-ಕಾಲೇಜುಗಳಿಗೆ ಸುಮಾರು ಹತ್ತು ಗ್ರಾಮಗಳ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಈ ಗ್ರಾಮಕ್ಕೆ ಒಂದು ಬಾಲಕಿಯರ ಪ್ರೌಢಶಾಲೆಯ ಅವಶ್ಯಕತೆಯಿದೆ ಎಂದು ಮನವಿಯಲ್ಲಿ ಅವರು ವಿವರಿಸಿದ್ದಾರೆ.ಪ್ರತಿಭಟನೆ: 2015-16ನೇ ಸಾಲಿನಲ್ಲಿ ಬಾಲಕಿಯರಿಗಾಗಿ ಪ್ರತ್ಯೇಕ ಪ್ರೌಢಶಾಲೆ ಬೇಕು ಎಂದು ಶಾಲೆಯ ಮುಂದೆ ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರತಿಭಟನೆ ನಡೆಸಿದ್ದರು. ಆದರೆ ಈ ವರೆಗೂ ಶಾಲೆ ಮಂಜೂರಾಗಿಲ್ಲ. ಇಂದಿಗೂ ಶೇ. 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರೇ ಗ್ರಾಮದಲ್ಲಿ ಕಲಿಯುತ್ತಿದ್ದಾರೆ.
ಪ್ರಸ್ತುತ ಪ್ರೌಢಶಾಲೆಯ ಕಟ್ಟಡವು ದೋಟಿಹಾಳ ಗ್ರಾಮದಿಂದ ಸುಮಾರು 1 ಕಿಮೀ ದೂರದಲ್ಲಿ ಇರುವುದರಿಂದ ಕೆಲವೊಮ್ಮೆ ಸಂಜೆ ವಿಶೇಷವಾದ ತರಗತಿ ಮುಗಿದ ಆನಂತರ ಕತ್ತಲಾಗುವುದರಿಂದ ವಾಪಸ್ ಮನೆಗೆ ಹೋಗಲು ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಕೆಲವರು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.ದೋಟಿಹಾಳ ಗ್ರಾಮದ ಮಧ್ಯಭಾಗದಲ್ಲಿ ಹಳೆಯ ಪ್ರೌಢಶಾಲೆಯ ಸುಮಾರು 14 ಕೊಠಡಿಗಳು ಖಾಲಿಯಿದೆ. ಅದನ್ನು ಉಪಯೋಗಿಸದೇ ಇರುವುದರಿಂದ ಶಿಥಿಲಗೊಳ್ಳುತ್ತಿವೆ. ದೋಟಿಹಾಳ ಗ್ರಾಮಕ್ಕೆ ಬಾಲಕಿಯರ ಪ್ರೌಢಶಾಲೆ ಮಂಜೂರು ಮಾಡಿದರೆ ಈ ಕೊಠಡಿಗಳ ಉಪಯೋಗ ಮಾಡಿಕೊಳ್ಳಲು ಸಾಧ್ಯ. ಜತೆಗೆ ವಿದ್ಯಾರ್ಥಿನಿಯರಿಗೂ ಅನುಕೂಲ. ಇಲ್ಲಿ ಬಾಲಕಿಯರಿಗಾಗಿ ಶೌಚಾಲಯದ ವ್ಯವಸ್ಥೆ ಇರುವುದರಿಂದ ಸರ್ಕಾರಕ್ಕೆ ಹೆಚ್ಚಿನ ಹೊರೆ ಆಗುವುದಿಲ್ಲ. ಈಗಿನ ಪ್ರೌಢಶಾಲೆ ವಿಭಾಗದಲ್ಲಿ ಕೆಲಸ ನಿರ್ವಹಿಸುವ ಶಿಕ್ಷಕರನ್ನು ಬಾಲಕಿಯರ ಪ್ರೌಢಶಾಲೆಗೆ ನಿಯೋಜನೆ ಮಾಡಬಹುದಾಗಿದೆ. ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಲಕಿಯರು ಶಿಕ್ಷಣ ಪಡೆಯುತ್ತಿದ್ದಾರೆ. ಈ ಗ್ರಾಮಕ್ಕೆ ಒಂದು ಬಾಲಕಿಯರ ಪ್ರೌಢಶಾಲೆ ಅವಶ್ಯಕತೆ ಇದೆ. ಈ ಕಾರಣದಿಂದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ. ಶಾಲೆಗೆ ಬೇಕಾದ ಕಟ್ಟಡಗಳು, ಶಿಕ್ಷಕರ ಸಂಪನ್ಮೂಲವೂ ಇದೆ. ಈ ಕುರಿತು ಮನವರಿಕೆ ಮಾಡಲಾಗಿದೆ. ಸಚಿವರು ಮಂಜೂರು ಮಾಡುವ ಭರವಸೆ ನೀಡಿದ್ದಾರೆ ಎಂದು ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ ದೋಟಿಹಾಳ ಹೇಳಿದರು.