ಸಾರಾಂಶ
ಮುಂಡರಗಿ: ಪಟ್ಟಣದ ಗದಗ ರಸ್ತೆಯಲ್ಲಿರುವ ಅನ್ನದಾನೀಶ್ವರ ರುದ್ರಭೂಮಿಯಲ್ಲಿ ನಿತ್ಯ ಶೌಚಾಲಯಕ್ಕೆ ಹೋಗುತ್ತಿದ್ದು, ಅದನ್ನು ಅಭಿವೃದ್ಧಿಪಡಿಸಿ ಸುಂದರ ಉದ್ಯಾನವನ ನಿರ್ಮಾಣ ಹಾಗೂ ನೀರು ಮತ್ತು ಬೆಳಕಿನ ವ್ಯವಸ್ಥೆಗಾಗಿ ಬಜೆಟ್ ನಲ್ಲಿ ಹಣ ಮೀಸಲಿಡಬೇಕು ಎಂದು ವಿಶ್ರಾಂತ ಪ್ರಾ. ಎಸ್.ಬಿ.ಕರಿಭರಮಗೌಡ್ರ ಹೇಳಿದರು.
ಅವರು ಶುಕ್ರವಾರ ಪುರಸಭೆ ಸಭಾಭವನದಲ್ಲಿ ಜರುಗಿದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಪಟ್ಟಣದಲ್ಲಿರುವ ಅನೇಕ ಪುರಸಭೆ ಉದ್ಯಾನವನಗಳಿಗೆ ಗೇಟುಗಳಿಲ್ಲ, ಅನೇಕ ಉದ್ಯಾನವನಗಳಲ್ಲಿ ಜಾಲಿಕಂಟಿ ಬೆಳೆದು ನಿಂತಿವೆ. ಇನ್ನು ಕೆಲವು ಉದ್ಯಾನವನಗಳಲ್ಲಿ ನೀರಿನ ವ್ಯವಸ್ಥೆ ಇಲ್ಲ, ಆದ್ದರಿಂದ ಎಲ್ಲ ಉದ್ಯಾನವನಗಳ ಅಭಿವೃದ್ದಿಗಾಗಿ ಬಜೆಟ್ ನಲ್ಲಿ ಹಣ ಕಾಯ್ದಿರಿಸಬೇಕು ಎಂದು ಸಲಹೆ ನೀಡಿದರು.
ಅಂಬೇಡ್ಕರ್ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಅಡಿವೆಪ್ಪ ಛಲವಾದಿ ಮಾತನಾಡಿ, ಪುರಸಭೆ ಆವರಣದಲ್ಲಿರುವ ಗಾಂಧಿ ಭವನ ಅಭಿವೃದ್ಧಿಪಡಿಸಿ ಹೈಟೆಕ್ ಮಾಡಿದರೆ ಅದರಿಂದ ಪುರಸಭೆಗೆ ಆದಾಯ ಬರುತ್ತದೆ. ಅಲ್ಲದೇ ಬಸ್ ನಿಲ್ದಾಣವೂ ಸೇರಿದಂತೆ ಪಟ್ಟಣದ ವಿವಿಧೆಡೆಗಳಲ್ಲಿರುವ ವಿವಿಧ ಇಲಾಖೆಗಳ ಸರ್ಕಾರಿ ಮಳಿಗೆಗಳ ಕರವಸೂಲಾತಿ ಬಾಕಿ ಉಳಿದಿದ್ದು, ಕಡ್ಡಾಯವಾಗಿ ಎಲ್ಲವನ್ನೂ ವಸೂಲಿ ಮಾಡಿದರೆ ಪುರಸಭೆಗೆ ಹೆಚ್ಚಿನ ಆದಾಯ ಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ರೈತ ಹೋರಾಟಗಾರ ವಿಠಲ್ ಗಣಾಚಾರಿ ಮಾತನಾಡಿ, ಪಟ್ಟಣದಲ್ಲಿರುವ ಗಾಯತ್ರಿ ಸಮುದಾಯದ ಸ್ಮಶಾನಕ್ಕೆ ನೀರು, ಬೆಳಕು, ಗಿಡ ನೆಡುವುದು ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯ ಕಲ್ಪಿಸುವುದಕ್ಕಾಗಿ ಹಣ ಕಾಯ್ದಿರಿಸಬೇಕು. ಶಿರಹಟ್ಟಿ-ಮುಂಡರಗಿ ರಸ್ತೆಯಲ್ಲಿರುವ ಹಿರೇಹಳ್ಳದ ಸೇತುವ ಹತ್ತಿರ ಸಂಪೂರ್ಣವಾಗಿ ಸ್ವಚ್ಛತೆ ಮಾಡುವುದಕ್ಕಾಗಿ ಯೋಜನೆ ಹಣ ಮೀಸಲಿಡಬೇಕು ಎಂದರು.
ಉತ್ತರ ಕರ್ನಾಟಕ ಪ್ರದೇಶ ರೈತ ಸಂಘದ ಮುಖಂಡ ವಿ.ಎಸ್. ಗಟ್ಟಿ ಮಾತನಾಡಿ, ಪಟ್ಟಣದಲ್ಲಿ ಸಾರ್ವಜನಿಕ ಮೂತ್ರಾಲಯ ಮತ್ತು ಶೌಚಾಲಯಗಳ ಕೊರತೆ ಇದ್ದು, ಹೆಚ್ಚು ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಅವುಗಳನ್ನು ನಿರ್ಮಿಸಲು ಹಣ ಕಾಯ್ದಿರಿಸಬೇಕು. ಪಟ್ಟಣದ ಹಿರೇಹಳ್ಳ ಸಂಪೂರ್ಣವಾಗಿ ಗಲೀಜು ತುಂಬಿದ್ದು, ಅದರ ಸ್ವಚ್ಛತೆಗೆ ಮುಂದಾಗಬೇಕು.ಪಟ್ಟಣದ ಜನನಿಬಿಡ ಪ್ರದೇಶದಲ್ಲಿ ಸಿಸಿ ಕ್ಯಾಮೇರಾ ಅಳವಡಿಸುವುದಕ್ಕಾಗಿ ಹಣ ಮೀಸಲಿಡುವಂತೆ ಸಲಹೆ ನೀಡಿದರು.
ಬಸವರಾಜ ನವಲಗುಂದ, ನಿಂಗರಾಜ ಹಾಲಿನವರ ಸೇರಿದಂತೆ ಅನೇಕರು ತಮ್ಮ ಸಲಹೆ, ಸೂಚನೆ ನೀಡಿದರು. ತಮ್ಮೆಲ್ಲರ ಸಲಹೆ ಗಮನದಲ್ಲಿಟ್ಟುಕೊಂಡು ಆಡಳಿತ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರೊಂದಿಗೆ ಚರ್ಚಿಸಿ ತಾವು ಬಜೆಟ್ ತಯಾರಿಸುವುದಾಗಿ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ತಿಳಿಸಿದರು.ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ನಿರ್ಮಲಾ ನಾಗರಾಜ ಕೊರ್ಲಹಳ್ಳಿ, ಸದಸ್ಯ ನಾಗರಾಜ ಹೊಂಬಳಗಟ್ಟಿ, ಪುರಸಭೆ ಸಿಬ್ಬಂದಿ ಸೇರಿದಂತೆ ಅನೇಕ ಸಂಘ-ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.