ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ರು. ಬಿಡುಗಡೆ ಮಾಡುವಂತೆ ಆಗ್ರಹಿಸಿ ಸಚಿವ ಡಿ.ಸುಧಾಕರ್ ನೇತೃತ್ವದ ಜನಪ್ರತಿನಿಧಿಗಳು ಸೋಮವಾರ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರಾ ಮೇಲ್ದಂಡೆ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ, ಮುಂಬರುವ 2026-27ನೇ ಸಾಲಿನ ಆಯವ್ಯಯದಲ್ಲಿ 5,000 ಕೋಟಿ ಅನುದಾನ ಮೀಸಲಿಡುವಂತೆ ಹಾಗೂ ಚಿತ್ರದುರ್ಗ ತಾಲೂಕು ಗೋನೂರು ಅಕ್ವಾಡೆಕ್ಟ್ ವರೆಗೆ ಭದ್ರಾ ನೀರು ಹರಿಸುವ ಸಲುವಾಗಿ ಬಾಕಿ ಕಾಮಗಾರಿಗಾಗಿ ತುರ್ತಾಗಿ 300 ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹಾಗೂ ಜಿಲ್ಲೆಯ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಹಕ್ಕೊತ್ತಾಯ ಮಂಡಿಸಿದ್ದಾರೆ.ಭದ್ರಾ ಮೇಲ್ದಂಡೆ ಯೋಜನೆಯ ಪರಿಷ್ಕೃತ ಅಂದಾಜು ಮೊತ್ತವು 21,167.93 ಕೋಟಿಗಳಾಗಿದ್ದು, ಇಲ್ಲಿಯವರೆಗೆ ಸುಮಾರು 11,409.55 ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ಯೋಜನೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಇನ್ನೂ ಸುಮಾರು
10,000 ಕೋಟಿಗಳ ಅನುದಾನದ ಅವಶ್ಯಕತೆಯಿದೆ. ಮಧ್ಯ ಕರ್ನಾಟಕದ ರೈತರು ಕಳೆದ ಐದು ದಶಕಗಳಿಂದ ನೀರಾವರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಮಳೆಯ ಅಭಾವದಿಂದಾಗಿ ಕೃಷಿ ಚಟುವಟಿಕೆ ಕುಂಠಿತಗೊಂಡು ಜನರು ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ. ಈ ಯೋಜನೆಯಿಂದ ಕೃಷಿ ಇಳುವರಿ 3 ರಿಂದ 4 ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಜಿಲ್ಲಾ ವ್ಯಾಪ್ತಿಯ ಮತ್ತು ಎಲ್ಲ ತಾಲ್ಲೂಕಿನ ರೈತ ಸಂಘಟನೆಗಳು ಭದ್ರಾ ಮೇಲ್ದಂಡೆ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಪ್ರತಿಭಟನೆ ಕೈಗೊಳ್ಳುತ್ತಿದ್ದಾರೆ. ಬರುವ ಬಜೆಟ್‌ನಲ್ಲಿ ಆದ್ಯತೆ ಮೇರೆಗೆ 5,000 ಕೋಟಿ ಹಂಚಿಕೆ ಮಾಡುವಂತೆ ಕೋರಿದ್ದಾರೆ.ಬಾಕಿ ಇರುವ ಕಾಮಗಾರಿ ಅನುದಾನ ಬಿಡುಗಡೆ ವಿಳಂಬವಾಗುತ್ತಿರುವ ಕಾರಣಗಳಿಂದಾಗಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಬರದ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಈಗಾಗಲೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಈ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಪ್ರಾಯೋಗಿಕವಾಗಿ ನೀರು ಹರಿಸಲು ತುರ್ತಾಗಿ 300 ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ. ಶಾಸಕರಾದ ಟಿ.ರಘುಮೂರ್ತಿ ಬಿ.ಜಿ. ಗೋವಿಂದಪ್ಪ, ಎನ್.ವೈ.ಗೋಪಾಲಕೃಷ್ಣ, ಕೆ.ಸಿ.ವೀರೇಂದ್ರ ಪಪ್ಪಿ ಈ ವೇಳೆ ಉಪಸ್ಥಿತರಿದ್ದರು.