ನಿರಾಶ್ರಿತರಿಗೆ ಆಶ್ರಯ ನಿವೇಶನ ಹಂಚಿಕೆ, ಬ್ಯಾಡಗಿಯಲ್ಲಿ ಧರಣಿ ಆರಂಭ

| Published : Oct 09 2025, 02:01 AM IST

ನಿರಾಶ್ರಿತರಿಗೆ ಆಶ್ರಯ ನಿವೇಶನ ಹಂಚಿಕೆ, ಬ್ಯಾಡಗಿಯಲ್ಲಿ ಧರಣಿ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಡಗಿ ಪಟ್ಟಣದಲ್ಲಿನ ಬಡ ನಿರಾಶ್ರಿತರಿಗೆ ಆಶ್ರಯ ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿ ಆಶ್ರಯ ಹೋರಾಟ ಸಮಿತಿ ಸದಸ್ಯರು ಪಟ್ಟಣದ ಪುರಸಭೆ ಎದುರು ಬುಧವಾರದಿಂದ ಅನಿರ್ದಿಷ್ಟಾವಧಿ ವರೆಗೆ ಹೋರಾಟ ಆರಂಭಿಸಿದರು.

ಬ್ಯಾಡಗಿ: ಪಟ್ಟಣದಲ್ಲಿನ ಬಡ ನಿರಾಶ್ರಿತರಿಗೆ ಆಶ್ರಯ ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿ ಆಶ್ರಯ ಹೋರಾಟ ಸಮಿತಿ ಸದಸ್ಯರು ಪಟ್ಟಣದ ಪುರಸಭೆ ಎದುರು ಬುಧವಾರದಿಂದ ಅನಿರ್ದಿಷ್ಟಾವಧಿ ವರೆಗೆ ಹೋರಾಟ ಆರಂಭಿಸಿದರು.

ಪಟ್ಟಣದ ಹಳೆಯ ಪುರಸಭೆಯಿಂದ ಬುಧವಾರ ಬೆಳಗ್ಗೆ ಜಯ ಕರ್ನಾಟಕ ಸಂಘಟನೆ ಹಾಗೂ ಅಖಿಲ ಕರ್ನಾಟಕ ಮಹಿಳಾ ಸಬಲೀಕರಣ ಹೋರಾಟ ಒಕ್ಕೂಟದ ಸಹಯೋಗದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಪ್ರತಿಭಟನಕಾರರು ಆನಂತರ ಪಟ್ಟಣದ ಹಂಸಬಾವಿ ರಸ್ತೆ ಮೂಲಕ ಪುರಸಭೆ ತಲುಪಿ ಧರಣಿ ಆರಂಭಿಸಿದರು.

ಈ ವೇಳೆ ಮಾತನಾಡಿದ ಆಶ್ರಯ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ, ಕಳೆದ 9 ವರ್ಷದಿಂದ ನಿವೇಶನ ಹಂಚಿಕೆ ಮಾಡುತ್ತೇನೆ ಎಂದು ಸುಳ್ಳು ಭರವಸೆ ನೀಡುತ್ತಾ ಪಟ್ಟಣದಲ್ಲಿ ನಿವೇಶನರಹಿತ ಬಡವರಿಗೆ ಎಲ್ಲ ಪಕ್ಷದ ಮುಖಂಡರು ಮೋಸ ಮಾಡಿದ್ದಾರೆ. ಕಳೆದ ಬಾರಿ ಹೋರಾಟ ಮಾಡಿದಾಗ ಆ. 15ರ ಒಳಗಾಗಿ ಕೊಡುತ್ತೇವೆ ಎಂದು ಪ್ರತಿಭಟನೆ ವಾಪಸ್ ಪಡೆಯುವಂತೆ ಮಾಡಿದ್ದ ಸ್ಥಳೀಯ ಶಾಸಕರು ಹಾಗೂ ಆಶ್ರಯ ಸಮಿತಿ ಅಧ್ಯಕ್ಷರು ಎಲ್ಲಿದ್ದೀರಿ? ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಕೂಡಲೇ ನಮಗೆ ನಿವೇಶನ ಒದಗಿಸುವಂತೆ ಆಗ್ರಹಿಸಿದರು.

ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ: ಫರೀದಾಬಾನು ನದಿಮುಲ್ಲಾ ಮಾತನಾಡಿ, ಬ್ಯಾಡಗಿಯಲ್ಲಿ ಬಡವರು ರಾಜಕಾರಣಿಗಳ ಹಗ್ಗಜಗ್ಗಾಟದಿಂದ ಬಡವರ ಬದುಕು ಬೀದಿಗೆ ಬಂದು ನಿಂತಿದೆ. ಜಮೀನು ಖರೀದಿ ಮಾಡಿ 10 ವರ್ಷವಾಗುತ್ತ ಬಂದಿದ್ದರೂ ಬಿಜೆಪಿ, ಕಾಂಗ್ರೆಸ್ ಜನಪ್ರತಿನಿಧಿಗಳು ಬಣ್ಣದ ಮಾತುಗಳಿಂದ ಸುಳ್ಳು ಭರವಸೆ ಕೊಟ್ಟಿದ್ದು ಬಿಟ್ಟರೆ ಮತ್ತೇನೂ ಮಾಡಿಲ್ಲ. ನಿವೇಶನಕ್ಕಾಗಿ ಇನ್ನೆಷ್ಟು ವರ್ಷ ಕಾಯಬೇಕು ಸ್ವಾಮಿ? ಬಡವರು ತಮ್ಮ ಹಕ್ಕು ಪಡೆಯಲು ನಿರಂತರವಾಗಿ ಹೋರಾಟ ಮಾಡಲೇಬೇಕಾ? ನಮ್ಮ ಹಕ್ಕು ನಮಗೆ ನೀಡದೆ ಇರುವ ನೀವೆಂತಹ ಜನಪ್ರತಿನಿಧಿಗಳು? ಹೆಸರಿಗೆ ಮಾತ್ರ ನಾವು ಬಡವರ ಪರ ಎಂದು ಹೇಳುವ ನೀವು ಸುಳ್ಳಿನ ಸರದಾರರು ಎಂದು ಆಕ್ರೋಶ ಹೊರ ಹಾಕಿದರು.

ವಸತಿ ಸಚಿವರು ಸ್ಥಳಕ್ಕೆ ಬರಲಿ: ಜಯ ಕರ್ನಾಟಕ ಸಂಘಟನೆ ತಾಲೂಕಾಧ್ಯಕ್ಷ ವಿನಾಯಕ ಕಂಬಳಿ ಮಾತನಾಡಿ, 20 ವರ್ಷದಿಂದ ಬ್ಯಾಡಗಿ ಪಟ್ಟಣ ದಲ್ಲಿನ ಬಡ ನಿರ್ಗತಿಕರಿಗೆ ಸರ್ಕಾರ ಒಂದಿಂಚೂ ಜಾಗ ನೀಡಿಲ್ಲ. 20 ವರ್ಷದಲ್ಲಿ ಯಾರೂ ಬಡವರು ನಿಮ್ಮ ಕಣ್ಣಿಗೆ ಕಂಡಿಲ್ಲವೇ? ಖರೀದಿ ಮಾಡಿದ ಜಾಗದಲ್ಲಿ 400 ನಿವೇಶನ ಮಂಜೂರು ಮಾಡಲು ನಿಮಗೇ ಹತ್ತು ವರ್ಷವಾದರೂ ಆಗಿಲ್ಲ ಎಂದರೆ ಇನ್ನೂ ಹೊಸ ಜಾಗ ಖರೀದಿ ಮಾಡಿ ಅರ್ಜಿ ಸಲ್ಲಿಸಿದ 2 ಸಾವಿರ ಜನರಿಗೆ ಬಡವರಿಗೆ ನೀಡುವುದು ಕನಸಿನ ಮಾತು. ಇನ್ನು ಮುಂದೆ ನಿಮ್ಮ ಸುಳ್ಳು ಭರವಸೆ ನಾವು ನಂಬುವುದಿಲ್ಲ. ವಸತಿ ಸಚಿವ ಜಮೀರ ಅಹಮದ್‌ ಖಾನ್‌ ಬಂದು ನಿವೇಶನ ಹಂಚಿಕೆ ಮಾಡುವವರೆಗೂ ನಾವಿಲ್ಲಂದ ಕದಲಲ್ಲ ಎಂದು ಪಟ್ಟು ಹಿಡಿದರು.

ಅಖಿಲ ಕರ್ನಾಟಕ ಮಹಿಳಾ ಸಬಲೀಕರಣ ಹೋರಾಟ ಒಕ್ಕೂಟದ ಗದಗ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮನಾಥ, ಪಾಂಡುರಂಗ ಸುತಾರ, ಮಹೇಶ ಗಿರಣಿ, ಬಾಷಾಸಾಬ್, ಪ್ರದೀಪ ಜಾಧವ, ಸಂಜೀವ ಮಡಿವಾಳರ, ಹೈದರಲಿ ಬೆಂಗಳೂರ, ಗೀತಾ ಮಡಿವಾಳರ, ಅನ್ನಪೂರ್ಣಾ ಎಸ್.ಎಚ್., ಮಂಜುಳಾ ಬಂಡಿವಡ್ಡರ, ಕರಬಸಮ್ಮ ಮಡಿವಾಳರ, ಗೌರಮ್ಮ ಹರಿಜನ, ಷಹನಾಜ್ ಮೇಡ್ಲೇರಿ, ಜರೀನಾ ಮುಲ್ಲಾ, ಐಶ್ವರ್ಯಾ ಮಡಿವಾಳರ, ಜಾರವ್ವ ಕರಿಯಣ್ಣನವರ, ಮಾತೇಂಗವ್ವ ಕೋಡಮ್ಮನವರ, ಪ್ರೇಮಲತಾ ಹುಗ್ಗಿ, ರುಕ್ಮಿಣಿ ಭಾಗವಹಿಸಿದ್ದರು.ಧರಣಿ ಮುಂದುವರಿಕೆ: ಪ್ರತಿಭಟನಕಾರರ ಬಳಿ ಬಂದು ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ, ಶೇ. 90ರಷ್ಟು ಕಾರ್ಯ ಮುಗಿದಿದ್ದು, ಈ ತಿಂಗಳ ಕೊನೆಯಲ್ಲಿ ನಿವೇಶನ ಹಂಚಿಕೆ ಮಾಡುತ್ತೇವೆ ಎಂದು ಸಮಜಾಯಿಸಿ ನೀಡಲು ಮುಂದಾದರು. ಆದರೆ ಪ್ರತಿಭಟನಕಾರರು, ನೀವು ಹಕ್ಕುಪತ್ರ ಕೊಟ್ಟಾಗ ಇಲ್ಲಿಂದ ಮೇಲೆ ಏಳುತ್ತೇವೆ ಎಂದು ಪಟ್ಟು ಹಿಡಿದ ಪರಿಣಾಮ ಧರಣಿ ಎರಡನೇ ದಿನಕ್ಕೆ ಮುಂದುವರಿದಿದೆ.