ಸಾರಾಂಶ
ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಒಂದೇ ಆಶ್ರಯ ಮನೆ ಇಬ್ಬರಿಗೆ ಹಂಚಿಕೆ..!
ಇದು ಇಲ್ಲಿನ ತಾರಿಹಾಳದಲ್ಲಿನ ರಾಮನಗರ ಆಶ್ರಯ ಬಡಾವಣೆಯ ಪರಿಸ್ಥಿತಿ. ಹೌದು, ಇಲ್ಲಿನ ಮೂಲಫಲಾನುಭವಿಗಳು ವಾಸಿಸುತ್ತಿಲ್ಲ. ಬದಲಿಗೆ ಬೇರೆ ಬೇರೆ ಕುಟುಂಬಗಳೇ ವಾಸವಾಗಿವೆ. ಇದೀಗ ಮೂಲಫಲಾನುಭವಿಗಳು ನಮಗೆ ಮನೆಗಳನ್ನು ಕೊಡಿಸಿ ಎಂದು ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ದುಂಬಾಲು ಬಿದ್ದಿದ್ದಾರೆ. ಈ ಕಾರಣದಿಂದ ಮಹಾನಗರ ಪಾಲಿಕೆಯೂ ಸಮೀಕ್ಷೆ ಕೈಗೊಂಡಿದೆ.ಏನಾಗಿದೆ?
ತಾರಿಹಾಳದಲ್ಲಿ ರಾಮನಗರ ಎಂಬ ಬಡಾವಣೆ ಮಾಡಲಾಗಿದೆ. 2004ರಲ್ಲಿ ಇಲ್ಲಿ ಸುಮಾರು 1000ಕ್ಕೂ ಅಧಿಕ ಆಶ್ರಯ ಮನೆಗಳನ್ನು ನೀಡಿದೆ. ಆಗಲೇ ಎಲ್ಲ ಫಲಾನುಭವಿಗಳಿಗೆ ಕರಾರು ಪತ್ರ ನೀಡಿದೆ. 2007ಕ್ಕೆ ಮನೆಗಳನ್ನು ಹಸ್ತಾಂತರ ಕೂಡ ಮಾಡಲಾಗಿದೆ. ಹಸ್ತಾಂತರವನ್ನೇನೋ ಮಾಡಿದರು. ಆದರೆ ಕುಡಿಯುವ ನೀರು, ವಿದ್ಯುತ್, ರಸ್ತೆ ಸೇರಿದಂತೆ ಯಾವ ಮೂಲಸೌಲಭ್ಯಗಳೇ ಇರಲಿಲ್ಲ. ಹೀಗಾಗಿ ಫಲಾನುಭವಿಗಳು ಆಶ್ರಯ ಮನೆಗಳಿಗೆ ಹೋಗುವ ಗೋಜಿಗೆ ಹೋಗಲಿಲ್ಲ. ಮುಂದೆ ಕೆಲವರು 2015ರ ನಂತರ ಮನೆಗಳಿಗೆ ಶಿಫ್ಟ್ ಆದರು. ಮತ್ತೆ ಹಲವರು ಕೆಲ ದಿನ ಆಶ್ರಯ ಮನೆಯಲ್ಲಿ ಉಳಿದು ಮೂಲಸೌಲಭ್ಯ ಇಲ್ಲದ ಕಾರಣ ಬೇರೆ ಬೇರೆ ಕಡೆ ಸ್ಥಳಾಂತರ ಹೊಂದಿದರು. ಕೆಲವರಂತೂ ಅಲ್ಲಿಗೆ ಹೋಗಲೇ ಇಲ್ಲ.ಈ ನಡುವೆ ಮನೆಗಳು ಇಲ್ಲದ ಕುಟುಂಬಗಳು ತಮಗೂ ಆಶ್ರಯ ಮನೆಗಳನ್ನು ನೀಡಿ ಎಂದು ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತಕ್ಕೆ ದುಂಬಾಲು ಬಿದ್ದಿದ್ದರು. ಆಗ ಯಾರ್‍ಯಾರು ಮನೆಗಳಲ್ಲಿ ಇಲ್ಲವೋ ಆ ಮನೆಗಳನ್ನು ಇವರಿಗೆ ಕೊಟ್ಟು ಮಂಜೂರಾತಿ ಪತ್ರ ಕೊಡಲಾಗಿದೆಯಂತೆ. ಹೀಗಾಗಿ ಅವರು ಆಶ್ರಯ ಮನೆಗಳಲ್ಲಿ ವಾಸವಾಗಿದ್ದಾರಂತೆ.
ಈಗ ವಾಸವಾಗಿರುವವರು ತಮಗೂ ಜಿಲ್ಲಾಡಳಿತದಿಂದ ಮಂಜೂರಾತಿ ದೊರೆತಿದೆ. ಹೀಗಾಗಿ, ನಾವು ವಾಸವಾಗಿದ್ದೇವೆ ಎಂದು ಹೇಳುತ್ತಿದ್ದಾರೆ. ಮೂಲ ಫಲಾನುಭವಿಗಳು ಇದೀಗ ತಮಗೆ ಮೊದಲೇ ಮಂಜೂರಾಗಿದೆ. ಅದಕ್ಕೆ ಅಗತ್ಯವಿರುವ ಹಣವನ್ನು ಪಾವತಿಸಿದ್ದೇವೆ. ನಮಗೆ ಆಶ್ರಯ ಮನೆ ಕೊಡಿಸಿ ಎಂದು ಇದೀಗ ಬೆನ್ನು ಬಿದ್ದಿದ್ದಾರೆ.ಸಚಿವರಿಗೆ ಮನವಿ:
ಮೂಲ ಫಲಾನುಭವಿಗಳು ಅಂದರೆ 2007ರಲ್ಲಿ ಮಂಜೂರಾತಿ ಪಡೆದವರು ಇದೀಗ ತಮಗೆ ಮನೆಗಳನ್ನು ಕೊಡಿಸಿ ಎಂದು ದುಂಬಾಲು ಬಿದ್ದಿದ್ದಾರೆ. ಕೆಲವರಂತೂ ತಮಗೆ ಮಂಜೂರಾದ ಮನೆಗಳಲ್ಲಿ ಬೇರೆಯವರು ವಾಸವಾಗಿದ್ದಾರೆ. ನಮಗೆ ಮನೆ ಬಿಡಿಸಿ ಎಂದು ಪೊಲೀಸ್ ಕಂಪ್ಲೇಟ್ ಕೂಡ ಕೊಟ್ಟಿದ್ದಾರೆ. ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಸೇರಿದಂತೆ ಹಲವರಿಗೆ ಮನವಿ ಪತ್ರ ಕೊಟ್ಟಿದ್ದಾರೆ.ಸಮೀಕ್ಷೆ:
ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೂ ಎಲ್ಲ ಸಹಾಯಕ ಆಯುಕ್ತರನ್ನು ನಿಯೋಜಿಸಿ ಒಂದೇ ದಿನದಲ್ಲಿ ಸಮೀಕ್ಷೆಯನ್ನು ಮಾಡಿಸಿದೆ. ಮೂಲ ಫಲಾನುಭವಿಗಳು ಯಾರು? ಈಗ ಯಾರು ಅಲ್ಲಿ ವಾಸವಾಗಿದ್ದಾರೆ? ಈಗ ವಾಸವಾಗಿರುವವರಿಗೆ ಮಂಜೂರಾತಿ ಸಿಕ್ಕಿದೆಯಾ? ಸಿಕ್ಕಿದ್ದರೆ ಯಾವಾಗ ಸಿಕ್ಕಿದೆ? ಯಾವಾಗಿಂದ ವಾಸವಾಗಿದ್ದಾರೆ? ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸಮೀಕ್ಷೆ ಪೂರ್ಣಗೊಂಡಿದೆಯತೆ. ಇನ್ನೇನಿದ್ದರೂ ವರದಿ ಬಂದ ಮೇಲೆಯೇ ಮೂಲಫಲಾನುಭವಿಗಳು ಯಾರು? ವಾಸವಾಗಿರುವವರು ಯಾರು ಎಂಬುದು ಗೊತ್ತಾಗಲಿದೆ. ತದನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಡಳಿತ ವರ್ಗ ತಿಳಿಸುತ್ತದೆ.ಒಟ್ಟಿನಲ್ಲಿ ಆಶ್ರಯ ಮನೆಗಳನ್ನು ಮಾಡಿ ಬಿಟ್ಟರೆ ಸಾಲದು. ಅವುಗಳಿಗೆ ಮೂಲಸೌಲಭ್ಯ ಕಲ್ಪಿಸಿ ಫಲಾನುಭವಿಗಳು ವಾಸವಾಗಿರುವಂತೆ ನೋಡಿಕೊಳ್ಳಬೇಕು ಎಂಬುದು ಸಾರ್ವಜನಿಕ ವಲಯದ ಆಗ್ರಹ.
ರಾಮನಗರ ಆಶ್ರಯ ಬಡಾವಣೆಯಲ್ಲಿ 1000ಕ್ಕೂ ಅಧಿಕ ಮನೆಗಳಿವೆ. ಮೂಲಫಲಾನುಭವಿಗಳು ಬಿಟ್ಟು ಬೇರೆಯವರು ವಾಸವಾಗಿದ್ದಾರೆ ಎಂಬ ದೂರುಗಳು ಬಂದಿವೆ. ಹೀಗಾಗಿ ಯಾರ್‍ಯಾರು ವಾಸವಾಗಿದ್ದಾರೆ. ಮೂಲ ಫಲಾನುಭವಿಗಳು ಯಾರು ಎಂಬುದನ್ನು ಪತ್ತೆ ಹಚ್ಚಲು ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ವರದಿ ಬಂದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯಕ್ತ ಡಾ.ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.ರಾಮನಗರದಲ್ಲಿ ನಮ್ಮ ಕುಟುಂಬಕ್ಕೆ 2007ರಲ್ಲೇ ಆಶ್ರಯ ಮನೆ ಮಂಜೂರಾಗಿತ್ತು. ಆದರೆ, ಮೂಲಸೌಲಭ್ಯ ಇರಲಿಲ್ಲ. ಜತೆಗೆ ತಾವೂ ಬೇರೆ ಊರಿಗೆ ಕೆಲಸಕ್ಕೆ ಹೋದ ಕಾರಣ ಅಲ್ಲಿ ವಾಸವಾಗಿರಲಿಲ್ಲ. ಆ ಮನೆಯ ವಂತಿಕೆ ಹಣ, ಟ್ಯಾಕ್ಸ್ ಎಲ್ಲವನ್ನು ಪಾವತಿಸಿದ್ದೇವೆ. ಆದರೆ ಅಲ್ಲೀಗ ಬೇರೆ ಕುಟುಂಬ ವಾಸವಾಗಿದೆ. ನಮ್ಮ ಮನೆ ನಮಗೆ ಕೊಡಿಸಬೇಕು ಎಂಬುದು ನಮ್ಮ ಬೇಡಿಕೆ ಎನ್ನುತ್ತಾರೆ ಮೂಲಫಲಾನುಭವಿ ವಿಶ್ವೇಶ್ವರ ಸಿರಿವಾಳ.