ಸಾರಾಂಶ
ರಂಗೂಪುರ ಶಿವಕುಮಾರ್
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹಾಗೂ ಜಿಲ್ಲಾಧಿಕಾರಿ ಟಿ.ಸಿ.ಶಿಲ್ಪನಾಗ್ ಕಾಳಜಿಯಿಂದಾಗಿ ತಾಲೂಕಿನ ಲಿಂಗತ್ವ ಅಲ್ಪಸಂಖ್ಯಾತರ ನಿವೇಶನಕ್ಕೆ 2 ಎಕರೆ ಜಮೀನನ್ನು ಜಿಲ್ಲಾಡಳಿತ ಮಂಜೂರು ಮಾಡಿದ್ದು, ಇದು ರಾಜ್ಯದಲ್ಲೇ ಮೊದಲು ನಿರ್ಧಾರ ಎನ್ನಲಾಗುತ್ತಿದೆ.ತಾಲೂಕಿನ ಚಿಕ್ಕತುಪ್ಪೂರು ಗ್ರಾಮದ ಸ.ನಂ.55ರಲ್ಲಿ 2 ಎಕರೆ ಜಮೀನು ಲಿಂಗತ್ವ ಅಲ್ಪಸಂಖ್ಯಾತರಿಗೆ ಆಶ್ರಯ ಯೋಜನೆಯಡಿ ನಿವೇಶನ ನಿರ್ಮಾಣದ ಉದ್ದೇಶಕ್ಕೆ ಮಂಜೂರಾಗಿದೆ. ಇಲ್ಲಿನ ತಹಸೀಲ್ದಾರ್ ಟಿ.ರಮೇಶ್ ಬಾಬು ಲಿಂಗತ್ವ ಅಲ್ಪಸಂಖ್ಯಾತರಿಗೆ ನಿವೇಶನ ಬೇಕು ಎಂಬ ಬಹುದಿನದ ಬೇಡಿಕೆಯಂತೆ ಚಿಕ್ಕತುಪ್ಪೂರು ಗ್ರಾಮದ ಸ.ನಂ.೫೫ ರಲ್ಲಿ ಸರ್ಕಾರದ ಜಮೀನಿದ್ದು ಆ ಜಾಗದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಆಶ್ರಯ ಯೋಜನೆಯಡಿ ನಿವೇಶನ ನಿರ್ಮಾಣದ ಉದ್ದೇಶಕ್ಕೆ ಸೂಕ್ತ ಜಾಗ ಎಂದು ಪ್ರಸ್ತಾವನೆ ಸಲ್ಲಿಸಿದ್ದರು.
ಸದರಿ ಜಾಗವನ್ನು ಲಿಂಗತ್ವ ಅಲ್ಪಸಂಖ್ಯಾತರಿಗೆ ಆಶ್ರಯ ಯೋಜನೆಯಡಿ ನಿವೇಶನ ನಿರ್ಮಾಣಕ್ಕಾಗಿ ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿ 1969 ರ ನಿಯಮ 20(1)(ಬಿ) ರೀತಿ ಮಂಜೂರು ಮಾಡಲು ದಾಖಲಾತಿಗಳೊಂದಿಗೆ ಜಿಲ್ಲಾಧಿಕಾರಿಗಳಿಗೆ 2024ರ ಅ.22 ರಂದು ಶಿಫಾರಸು ಮಾಡಿದ್ದರು.ತಹಸೀಲ್ದಾರ್ ಟಿ.ರಮೇಶ್ ಬಾಬು ಸಲ್ಲಿಸಿದ ವರದಿ, ದಾಖಲಾತಿ ಪರಿಶೀಲಿಸಿದ ಡೀಸಿ ಶಿಲ್ಪಾನಾಗ್ ಚಿಕ್ಕತುಪ್ಪೂರು ಗ್ರಾಮದ ಸ.ನಂ.55ರಲ್ಲಿ 2 ಎಕರೆ ಜಮೀನನ್ನು ಲಿಂಗತ್ವ ಅಲ್ಪಸಂಖ್ಯಾತರಿಗೆ ಆಶ್ರಯ ಯೋಜನೆಯಡಿ ನಿವೇಶನ ನಿರ್ಮಾಣದ ಉದ್ದೇಶಕ್ಕಾಗಿ ಗುಂಡ್ಲುಪೇಟೆ ತಾಪಂ ಇಒಗೆ ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿ 1969 ರ ನಿಯಮ 20(1)(ಬಿ) ಪ್ರಕಾರ ಜಮೀನು ಮಂಜೂರು ಮಾಡಿದ್ದು, ಕಂದಾಯ ದಾಖಲೆಗಳಲ್ಲಿ ಇಂಡೀಕರಿಸಲು ತಹಸೀಲ್ದಾರ್ ಟಿ.ರಮೇಶ್ ಬಾಬುಗೆ ಆದೇಶ ಹೊರಡಿಸಿದ್ದಾರೆ.
ಬೇಗ ವಸತಿ ನಿರ್ಮಿಸಲಿ: ತಾಲೂಕಿನ ಲಿಂಗತ್ವ ಅಲ್ಪಸಂಖ್ಯಾತರಿಗೆ ಆಶ್ರಯ ಯೋಜನೆಯಡಿ ನಿವೇಶನ ನೀಡಲು ತಾಲೂಕು ಆಡಳಿತದ ಪ್ರಸ್ತಾವನೆಗೆ ಜಿಲ್ಲಾಡಳಿತ ಮುದ್ರೆ ಒತ್ತಿದ್ದು, ತಾಲೂಕು ಆಡಳಿತ ಆದಷ್ಟು ಬೇಗ ವಸತಿ ನಿರ್ಮಿಸಿ ಹೊಸ ಬಡಾವಣೆಯಾಗಲಿ ಎಂಬುದು ಸಾರ್ವಜನಿಕರ ಕಳಕಳಿಯಾಗಿದೆ.ತಾಲೂಕಿನ ಲಿಂಗತ್ವ ಅಲ್ಪಸಂಖ್ಯಾತರಿಗೆ ಆಶ್ರಯ ಯೋಜನೆಯಡಿ ೨ ಎಕರೆ ಜಮೀನು ಚಿಕ್ಕತುಪ್ಪೂರು ಬಳಿ ಮಂಜೂರಾಗಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ನಿವೇಶನದ ಜೊತೆಗೆ ಮನೆ ಕಟ್ಟಿಸಿ ಕೊಡಲು ಪ್ರಯತ್ನಿಸುವೆ. ಜಾಗ ಮಂಜೂರಾತಿಗೆ ತಹಸೀಲ್ದಾರ್ ಕಾಳಜಿಯೂ ಇದೆ.
ಎಚ್.ಎಂ.ಗಣೇಶ್ ಪ್ರಸಾದ್ ಶಾಸಕಶಾಸಕರು, ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಚಿಕ್ಕತುಪ್ಪೂರು ಬಳಿ ಸ.ನಂ.55ರಲ್ಲಿ 2 ಎಕರೆ ಭೂಮಿಯನ್ನು ಲಿಂಗತ್ವ ಅಲ್ಪಸಂಖ್ಯಾತರಿಗೆ ಆಶ್ರಯ ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿ ಜಮೀನು ಮಂಜೂರು ಮಾಡಿದ್ದಾರೆ.ಟಿ.ರಮೇಶ್ ಬಾಬು ತಹಸೀಲ್ದಾರ್
ಷರತ್ತುಗಳೇನು?1. ಮಂಜೂರು ಮಾಡಿರುವ ಜಮೀನನ್ನು ಕಾಯ್ದಿರಿಸಿದ ಉದ್ದೇಶಕ್ಕೆ ಮಾತ್ರ ಉಪಯೋಗಿಸಬೇಕು
2. ಪ್ರಸ್ತಾಪಿತ ಜಮೀನನ್ನು ಆಶ್ರಯ ಯೋಜನೆಯಡಿ ಮನೆ ನಿರ್ಮಾಣ ಉದ್ದೇಶಕ್ಕಾಗಿ ಮಂಜೂರು ಮಾಡುತ್ತಿರುವುದರಿಂದ ಅರ್ಹ ಫಲಾನುಭವಿಯನ್ನು ನಿಯಮಾನುಸಾರ ಆಯ್ಕೆ ಮಾಡಿದ ನಂತರ ಫಲಾನುಭವಿ ಪಟ್ಟಿಯನ್ನು ತಹಸೀಲ್ದಾರ್ ಮುಖಾಂತರ ರವಾನಿಸಿ ಜಿಲ್ಲಾಧಿಕಾರಿ ಅನುಮೋದನೆ ಪಡೆಯಬೇಕು. ಇಲ್ಲವಾದರಲ್ಲಿ ಜಮೀನು ಮಂಜೂರಾತಿಯನ್ನು ರದ್ದುಪಡಿಸಲಾಗುವುದು3. ಕಾಯ್ದಿರಿಸಿದ ಜಮೀನನ್ನು ಲಿಂಗತ್ವ ಅಲ್ಪ ಸಂಖ್ಯಾತಗರಿಗೆ ಆಶ್ರಯ ಯೋಜನೆಗಾಗಿ ಎಂದು ನಾಮಫಲಕ ಅಳವಡಿಸಬೇಕು
4. ಲಿಂಗತ್ವ ಅಲ್ಪಸಂಖ್ಯಾತರಿಗೆ ಆಶ್ರಯ ಯೋಜನೆಗಾಗಿ ಮಂಜೂರು ಮಾಡಿರುವ ಜಮೀನನ್ನು ಸಂಬಂಧಿಸಿದ ಪಂಚಾಯಿತಿಗೆ ಹಸ್ತಾಂತರಿಸಬೇಕು ಎಂಬ ಷರತ್ತಿನೊಂದಿಗೆ ಒಟ್ಟು 12 ಷರತ್ತು ವಿಧಿಸಿ ಭೂ ಮಂಜೂರು ಮಾಡಲಾಗಿದೆ.