ಹಂಚಿಕೆದಾರರಿಗೆ ಬಾಕಿ ಕಟ್ಟಲು ಮತ್ತೆ ಅವಕಾಶ: ಕಾಲಾವಕಾಶ ನೀಡಿದ ಬಿಡಿಎ

| Published : Mar 20 2024, 01:23 AM IST / Updated: Mar 20 2024, 01:05 PM IST

ಹಂಚಿಕೆದಾರರಿಗೆ ಬಾಕಿ ಕಟ್ಟಲು ಮತ್ತೆ ಅವಕಾಶ: ಕಾಲಾವಕಾಶ ನೀಡಿದ ಬಿಡಿಎ
Share this Article
  • FB
  • TW
  • Linkdin
  • Email

ಸಾರಾಂಶ

ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ ಕಳೆದ ಆರೇಳು ವರ್ಷಗಳ ಹಿಂದೆ ನಿವೇಶನ ಹಂಚಿಕೆಯಾಗಿ ಹಣ ಪಾವತಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ ಗ್ರಾಹಕರಿಗೆ ಇದೀಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆ ನಿವೇಶನವನ್ನು ತಮ್ಮದಾಗಿಸಿಕೊಳ್ಳುವ ಮತ್ತೊಂದು ಅವಕಾಶ ಕಲ್ಪಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ ಕಳೆದ ಆರೇಳು ವರ್ಷಗಳ ಹಿಂದೆ ನಿವೇಶನ ಹಂಚಿಕೆಯಾಗಿ ಹಣ ಪಾವತಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ ಗ್ರಾಹಕರಿಗೆ ಇದೀಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆ ನಿವೇಶನವನ್ನು ತಮ್ಮದಾಗಿಸಿಕೊಳ್ಳುವ ಮತ್ತೊಂದು ಅವಕಾಶ ಕಲ್ಪಿಸಿದೆ.

ಕೆಂಪೇಗೌಡ ಬಡಾವಣೆಯಲ್ಲಿ 2018ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ರಡಿಯಲ್ಲಿ ಹಂಚಿಕೆಯಾದ ನಿವೇಶನಗಳ ಹಂಚಿಕೆದಾರರಿಗೆ ಕೋವಿಡ್‌ ಹಿನ್ನೆಲೆಯಲ್ಲಿ ನಿವೇಶನದ ಹಣವನ್ನು ಪಾವತಿಸಲು 2021ರ ನವೆಂಬರ್‌ವರೆಗೆ ಕಾಲಾವಕಾಶ ನೀಡಲಾಗಿತ್ತು. ನಿಗದಿತ ಅವಧಿಯಲ್ಲಿ ಹಣ ಪಾವತಿಸದ ಹಂಚಿಕೆದಾರರಿಗೆ ಬಾಕಿ ಹಣ ಪಾವತಿಸಲು ಒಂದು ವರ್ಷದ ಅವಧಿಗೆ ಕಾಲಾವಕಾಶ ವಿಸ್ತರಿಸಲು ಬಿಡಿಎ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಈ ನಡುವೆ 2016ನೇ ಸಾಲಿನಲ್ಲಿ ನಿವೇಶನ ಹಂಚಿಕೆ ಪಡೆದ ಹಲವರು ತಮಗೂ ಅವಕಾಶ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಜನತಾ ದರ್ಶನದ ಸಂದರ್ಭದಲ್ಲಿ ಮನವಿಗಳನ್ನು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ 2016 ಮತ್ತು 2018ರಲ್ಲಿ ಹಂಚಿಕೆಯಾಗಿರುವ ನಿವೇಶನದಾರರಿಗೆ ಹಣ ಪಾವತಿ ಮಾಡಲು ಮತ್ತೊಂದು ಅವಕಾಶವನ್ನು ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

90 ದಿನ ಕಾಲಾವಕಾಶ: 2016 ಮತ್ತು 2018ರಲ್ಲಿ ಬಿಡಿಎ ವತಿಯಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆಯಾದ ನಿವೇಶನದಾರರು ಆಗ ಪೂರ್ಣ ಹಣ ಪಾವತಿಸಲಾಗದೆ ಭಾಗಶಃ ಹಣ ಪಾವತಿಸಿರುವವರಿಗೆ ವಿಳಂಬವನ್ನು ಮನ್ನಾ ಮಾಡಿ ನಿವೇಶನಗಳನ್ನು ನೀಡಲಾಗುವುದು. 

ನಿಗದಿತ ಅವಧಿ ನಂತರ ಪೂರ್ಣ ನಿವೇಶನ ಮೌಲ್ಯವನ್ನು ಬಡ್ಡಿ ಸಹಿತ ಪಾವತಿಸಿರುವ ಹಂಚಿಕೆದಾರರಿಗೆ ನಿವೇಶನದ ಗುತ್ತಿಗೆ ಮತ್ತು ಮಾರಾಟ ಕರಾರು ಪತ್ರ ನೋಂದಣಿ ಮಾಡಿಕೊಡಲಾಗುವುದು. 

ನಿಗದಿತ ಅವಧಿಯ ನಂತರ ಪೂರ್ಣ ನಿವೇಶನ ಮೌಲ್ಯವನ್ನು ಪಾವತಿಸಿ, ಬಡ್ಡಿ ಪಾವತಿಸದೇ ಇರುವ ಪ್ರಕರಣಗಳಲ್ಲಿ ವಿಳಂಬದ ಅವಧಿಗೆ ಶೇ.12ರಷ್ಟು ಬಡ್ಡಿ ದರದಂತೆ ಪಾವತಿಸಲು 90 ದಿನಗಳ ಕಾಲಾವಕಾಶ ನೀಡಲಾಗುವುದು. ಪಾವತಿ ಮಾಡಿದ ಹಂಚಿಕೆದಾರರಿಗೆ ನಿವೇಶನಗಳನ್ನು ನೀಡುವುದಾಗಿ ಆದೇಶದಲ್ಲಿ ವಿವರಿಸಲಾಗಿದೆ.

1500 ಹಂಚಿಕೆದಾರಿಗೆ ಅನುಕೂಲ: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆಯಾದ ನಿವೇಶನಗಳಿಗೆ ಪೂರ್ಣ ಹಣ ಪಾವತಿಸದ 1,500 ಕ್ಕೂ ಹೆಚ್ಚು ಹಂಚಿಕೆದಾರರಿದ್ದಾರೆ. 

ಅವರಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಮತ್ತೊಂದು ಅವಕಾಶ ನೀಡಲಾಗಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. 

ಇದು ಕೇವಲ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಂಚಿಕೆದಾರರಿಗೆ ಮಾತ್ರವಲ್ಲ ಪ್ರತಿಯೊಬ್ಬ ಬಾಕಿದಾರರು ಇದರ ಲಾಭ ಪಡೆಯಬಹುದು ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.