ಸೆಪ್ಟೆಂಬರ್‌ 27ರ ವರೆಗೆ ಪೆಂಡಾಲ್‌ ಗಣಪನ ದರ್ಶನಕ್ಕೆ ಅವಕಾಶ: ಡಾ.ಎಚ್.ನಾಗರಾಜು

| Published : Sep 11 2024, 01:02 AM IST

ಸೆಪ್ಟೆಂಬರ್‌ 27ರ ವರೆಗೆ ಪೆಂಡಾಲ್‌ ಗಣಪನ ದರ್ಶನಕ್ಕೆ ಅವಕಾಶ: ಡಾ.ಎಚ್.ನಾಗರಾಜು
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಪೆಂಡಾಲ್‌ ಗಣಪತಿ ಸೇವಾ ಸಮಿತಿ ನಡೆಸಿಕೊಂಡು ಬರುತ್ತಿರುವ ಗಣೇಶೋತ್ಸವವು ಈ ವರ್ಷಕ್ಕೆ ೭೦ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ವರ್ಷವೂ ಕೂಡ ವಿಜೃಂಭಣೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಆಚರಿಸಲಾಗುತ್ತಿದೆ ಎಂದು ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಡಾ.ಎಚ್.ನಾಗರಾಜು ತಿಳಿಸಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮೈಸೂರು ದಸರಾ ಮಾದರಿ ಗಣಪತಿ ಉತ್ಸವಕ್ಕೆ ಸಿದ್ಧತೆ । ಗಣಪತಿ ಸೇವಾ ಸಂಸ್ಥೆಯಿಂದ ಉಚಿತ ರಕ್ತದಾನ ಶಿಬಿರ

ಕನ್ನಡಪ್ರಭ ವಾರ್ತೆ ಹಾಸನ

ನಗರದ ಪೆಂಡಾಲ್‌ ಗಣಪತಿ ಸೇವಾ ಸಮಿತಿ ನಡೆಸಿಕೊಂಡು ಬರುತ್ತಿರುವ ಗಣೇಶೋತ್ಸವವು ಈ ವರ್ಷಕ್ಕೆ ೭೦ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ವರ್ಷವೂ ಕೂಡ ವಿಜೃಂಭಣೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಆಚರಿಸಲಾಗುತ್ತಿದೆ ಎಂದು ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಡಾ.ಎಚ್.ನಾಗರಾಜು ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಸೆ.೭ರಂದು ಶನಿವಾರ ಪ್ರಾರಂಭವಾಗಿ ಸೆ.೨೭ರ ಶುಕ್ರವಾರದವರೆಗೆ ಶ್ರದ್ಧಾ ಭಕ್ತಿಯಿಂದ ಬೆಳಗಿನಿಂದ ಸಂಜೆಯವರೆಗೆ ಧಾರ್ಮಿಕ ವಿಧಿಗಳನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಲಾಗಿದೆ. ಪ್ರತಿದಿನ ಮಧ್ಯಾಹ್ನ ೧೨.೩೦ಕ್ಕೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪ್ರತಿನಿತ್ಯ ನಡೆಯುವ ಬೆಳಗಿನ ಪೂಜೆ ಮತ್ತು ಪ್ರಸಾದ ಸೇವೆಗಾಗಿ ೫೦೦೦ ರು. ನಿಗದಿಪಡಿಸಲಾಗಿದೆ. ಪ್ರತಿದಿನ ಕಡೆ ಪಕ್ಷ ೫ ಕುಟುಂಬಗಳು ಭಾಗವಹಿಸಲು ಅವಕಾಶವಿದ್ದು, ಅವರ ಹೆಸರುಗಳನ್ನು ಪ್ರಕಟಿಸಲಾಗುವುದು. ಸಂಜೆ ೬ರಿಂದ ೭ ಮತ್ತು ೭ರಿಂದ ರಾತ್ರಿ ೯.೩೦ರವರೆಗೆ ೨ ಭಾಗಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಲಾಗುವುದು. ವಿದ್ಯಾರ್ಥಿಗಳ ಕಾರ್ಯಕ್ರಮಗಳಿಗೆ ಆದ್ಯತೆಯನ್ನು ಕೊಡಲಾಗುವುದು. ಇಲ್ಲಿ ಏರ್ಪಾಡಾಗುವ ಸಂಗೀತ, ನೃತ್ಯ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಕ್ತರು ಅಪೇಕ್ಷೆ ಪಟ್ಟಲ್ಲಿ ಕಾರ್ಯಕ್ರಮಗಳನ್ನು ಪ್ರಾಯೋಜಿಸಬಹುದು. ಕಾರ್ಯಕ್ರಮವನ್ನು ಪ್ರಾಯೋಜಿಸಲು ಇಚ್ಛಿಸುವವರು ಕಲಾವಿದರಿಗೆ ಪೂರ್ಣ ಸಂಭಾವನೆಯನ್ನು ಭರಿಸಬೇಕು. ಪ್ರಾಯೋಜಕರ ಹೆಸರನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.

ಸೆ.೧೫ರ ಭಾನುವಾರ ಬೆಳಿಗ್ಗೆ ಶತರುದ್ರಾಭಿಷೇಕ ನೆರವೇರುವುದು. ೨೨ರ ಭಾನುವಾರ ‘ಶ್ರೀ ಮಹಾಗಣಪತಿ ಹೋಮ’ ನೆರವೇರಿಸಲಾಗುವುದು. ೨೮ರಂದು ಶನಿವಾರ ಬೆಳಿಗ್ಗೆ ೯.೩೦ ರಿಂದ ಹಾಸನ ನಗರದ ಪ್ರಮುಖ ಬೀದಿಗಳಲ್ಲಿ ನಡೆಯುವ ಸ್ವರ್ಣಗೌರಿ ಸಹಿತ ಶ್ರೀ ಮಹಾಗಣಪತಿಯವರ ವಿದ್ಯುತ್ ದೀಪಾಲಂಕಾರ ಸಹಿತ ಪುಷ್ಪ ಮಂಟಪೋತ್ಸವದ ಮೆರವಣಿಗೆ ನಡೆಯಲಿದೆ. ಅಂದು ಪ್ರಮುಖವಾಗಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಆದ ಹಿನ್ನೆಲೆಯಲ್ಲಿ ರಾಮನ ವಿಗ್ರಹವನ್ನೂ ಮೆರವಣಿಗೆಯಲ್ಲಿ ಇಡಲಾಗುವುದು. 25ರಿಂದ 30 ಕಲಾ ತಂಡಗಳು ಭಾಗವಹಿಸಲಿದೆ ಎಂದರು.

ಮೈಸೂರು ದಸರಾ ರೀತಿಯಲ್ಲಿ ಸಾಂಸ್ಕೃತಿಕ ಕಲಾ ತಂಡಗಳು ಸುಮಾರು ೫ ಕಿ.ಮೀ. ಪ್ರಮುಖ ರಾಜ ಬೀದಿಗಳಲ್ಲಿ ಮೆರವಣಿಗೆ ಸಾಗಲಿದೆ. ಸ್ಥಳೀಯರಿಗೆ ಹೆಚ್ಚಿನ ಅವಕಾಶ ಕೊಡಲಾಗಿದೆ. ಅಂದು ಸಂಜೆ ೭.೩೦ಕ್ಕೆ ದೇವಿಗೆರೆಯಲ್ಲಿ ತೆಪ್ಪದಲ್ಲಿ ಗಣಪತಿ ವಿಸರ್ಜನೆ ಆಗಲಿದೆ. ಇದಾದ ನಂತರ ಅ.೧ರಂದು ಮಂಗಳವಾರ ೧೨.೩೦ಕ್ಕೆ ಮಹಾಗಣಪತಿ ಮಹೋತ್ಸವದ ಅಂಗವಾಗಿ ಪ್ರಸಾದ ರೂಪದ ಅನ್ನ ಸಂತರ್ಪಣೆಯನ್ನು ನಡೆಸಲಾಗುವುದು. ಸುಮಾರು ೧೦ ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ ಎಂದರು.

ಪ್ರಮುಖವಾಗಿ ಸೆ.೨೬ರಂದು ಹಾಸ್ಯನಟ ಮತ್ತು ಮಿಮಿಕ್ರಿ ಗೋಪಿ ತಂಡ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸೆ.೧೬ ರಂದು ಜೀ ಕನ್ನಡ ಟಿವಿಯ ಸರಿಗಮಪ ಕಾರ್ಯಕ್ರಮ ರೀತಿ ಹಾಸನದಲ್ಲಿ ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೧೨ ಗಂಟೆಯವರೆಗೂ ಸಂಗೀತ ಕಾರ್ಯಕ್ರಮ ನಡೆಸಲಾಗುವುದು. ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗೆಲುವು ಪಡೆದವರಿಗೆ ಆಕರ್ಷಕ ಬಹುಮಾನ ವಿತರಣೆ ಮಾಡಲಾಗುವುದು. ಸೆ.೨೧ರ ಶನಿವಾರ ಗಣಪತಿ ಸೇವಾ ಸಂಸ್ಥೆಯಿಂದ ಉಚಿತವಾಗಿ ರಕ್ತದಾನ ಶಿಬಿರ ಮಾಡಲಾಗುತ್ತಿದೆ. ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಂದು ಸಕ್ಕರೆ ಕಾಯಿಲೆ ಇತರೆ ಪರೀಕ್ಷೆಯನ್ನು ಕೂಡ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಗಣಪತಿ ಸೇವಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಚನ್ನವೀರಪ್ಪ, ಶ್ರೀ ಗಣಪತಿ ಸೇವಾ ಸಂಸ್ಥೆಯ ಧರ್ಮದರ್ಶಿ ಎಚ್.ಎಂ.ಸುರೇಶ್ ಕುಮಾರ್‌, ಲಲಾಟ್ ಮೂರ್ತಿ, ಎಂ.ಕೆ. ಕಮಲ್ ಕುಮಾರ್‌ ಇತರರು ಇದ್ದರು.