ಮಾತೃತ್ವ ರಜೆ ನಂತರವೂ ಸೇವೆಗೆ ಅವಕಾಶ: ನಷ್ಟ ಭರಿಸಲು ಹೈಕೋರ್ಟ್‌ ಸೂಚನೆ - ಹೈಕೋರ್ಟ್‌ ಮಹತ್ವದ ತೀರ್ಪು

| Published : Aug 09 2024, 12:47 AM IST / Updated: Aug 09 2024, 11:02 AM IST

ಮಾತೃತ್ವ ರಜೆ ನಂತರವೂ ಸೇವೆಗೆ ಅವಕಾಶ: ನಷ್ಟ ಭರಿಸಲು ಹೈಕೋರ್ಟ್‌ ಸೂಚನೆ - ಹೈಕೋರ್ಟ್‌ ಮಹತ್ವದ ತೀರ್ಪು
Share this Article
  • FB
  • TW
  • Linkdin
  • Email

ಸಾರಾಂಶ

ಗುತ್ತಿಗೆ ಆಧಾರದ ಮೇಲಿನ ಚಾಂದಬೀ ಅವರ ಮಾತೃತ್ವ ರಜೆ ಒಪ್ಪುವುದು, ರಜೆ ನಂತರ ಮತ್ತೆ ಸೇವೆಗೆ ಮುಂದುವರಿಸುವುದಲ್ಲದೇ ಅವರಿಗಾದ ನಷ್ಟ ಭರಿಸಲು ಹೈಕೋರ್ಟ್‌ ಸೂಚಿಸಿದೆ.

ಧಾರವಾಡ:  ಹೊರಗುತ್ತಿಗೆ ಮಹಿಳಾ ನೌಕರರ ರಜೆ ವಿಷಯದಲ್ಲಿ ಇಲ್ಲಿಯ ಹೈಕೋರ್ಟ್‌ ಏಕಸದಸ್ಯ ಪೀಠವು ಮಹತ್ವದ ತೀರ್ಪೊಂದನ್ನು ನೀಡಿದೆ.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮಾತೃತ್ವ ರಜೆ ನೀಡಬೇಕು. ಈ ರಜೆ ನಂತರ ಮತ್ತೆ ಅವರು ಸೇವೆಗೆ ಹಾಜರಾಗಬಹುದು ಎಂದು ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ಏಕಸದಸ್ಯ ಪೀಠವು ಆದೇಶಿಸಿದೆ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಚಾಂದಬೀ ಬಳಿಗಾರ ಎಂಬುವರು ತಮಗಾದ ಅನ್ಯಾಯ ಪ್ರಶ್ನಿಸಿ ಇಲ್ಲಿಯ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು. ಅವರು 2014ರಲ್ಲಿ ಹೂವಿನಹಡಗಲಿಯಲ್ಲಿ ರೈತ ಸಂಪರ್ಕ ಕೇಂದ್ರದ ಅಕೌಂಟೆಂಟ್ ಆಗಿ ಗುತ್ತಿಗೆ ನೌಕರಿ ಪಡೆದ್ದದರು. ಅಲ್ಲಿಂದ 2023ರ ವರೆಗೆ ಗುತ್ತಿಗೆ ಕಂಪನಿಯ ಆಧಾರದ ಮೇಲೆ ಹೊರಗುತ್ತಿಗೆ ಕೆಲಸ ನಿರ್ವಹಿಸುತ್ತಿದ್ದರು. ಚಾಂದಬೀ ಅವರು ಮಾತೃತ್ವ ರಜೆಗೆ ಅರ್ಜಿ ಕೊಟ್ಟು ಮನೆಗೆ ತೆರಳಿದ್ದರು. ಮಾತೃತ್ವ ರಜೆ ಮುಗಿಸಿ ಬಂದ ಮೇಲೆ ಅವರ ಸ್ಥಾನಕ್ಕೆ ಬೇರೆಯವರನ್ನು ಇಲಾಖೆ ನೇಮಕ ಮಾಡಿತ್ತು. ತಮ ಸೇವೆಗೆ ಅವಕಾಶ ಮಾಡಿಕೊಡಿ ಎಂದು ವಿಜಯನಗರ ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ಇದನ್ನು ಪ್ರಶ್ನಿಸಿ ಧಾರವಾಡ ಹೈಕೋರ್ಟ್‌ಗೆ ಚಾಂದಬೀ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಪೀಠವು ವಾದ-ಪ್ರತಿವಾದ ಆಲಿಸಿ, ಗುತ್ತಿಗೆ ಆಧಾರದ ಮೇಲಿನ ಚಾಂದಬೀ ಅವರ ಮಾತೃತ್ವ ರಜೆ ಒಪ್ಪುವುದು, ರಜೆ ನಂತರ ಮತ್ತೆ ಸೇವೆಗೆ ಮುಂದುವರಿಸುವುದಲ್ಲದೇ ಅವರಿಗಾದ ನಷ್ಟ ಭರಿಸಲು ಸೂಚನೆ ನೀಡಿದೆ.