ಸಾರಾಂಶ
ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿಕ್ಷೇತ್ರದ ಜನತೆಯ ಬೇಕುಬೇಡಗಳನ್ನು ಈಡೇರಿಸಲು ಒಬ್ಬ ಜನಪ್ರತಿನಿಧಿ, ಅಧಿಕಾರಿ ದೂರದೃಷ್ಟಿಯೊಂದಿಗೆ ಕೆಲಸ ಮಾಡಿದರೆ ಹೇಗೆಲ್ಲ ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ಇಂಡಿ ಮತಕ್ಷೇತ್ರ ಸಾಕ್ಷಿಯಾಗಿದೆ. ಭೀಕರ ಬರಗಾಲದಿಂದ, ಹಳ್ಳಕೊಳ್ಳ, ಕೆರೆ ಕಟ್ಟೆಗಳು ಸೇರಿ ಜಲಮೂಲಗಳು ಬತ್ತಿದ್ದರಿಂದ ದಾಹ ತೀರಿಸಿಕೊಳ್ಳಲು ನೀರು ಸಿಗದೆ ಜನರು ಕಂಗಾಲಾಗಿದ್ದರು. ಇಂದು ಮತಕ್ಷೇತ್ರದ ಹಳ್ಳ, ಕೆರೆ, ಕಾಲುವೆಗಳು ಭರ್ತಿಯಾಗಿವೆ.
2013ರಿಂದ ಇಲ್ಲಿಯವರೆಗೆ ಹಂತ ಹಂತವಾಗಿ ಟ್ಯಾಂಕರ್ ಮೂಲಕ ನೀರು ಒದಗಿಸುವುದನ್ನು ಕಡಿಮೆ ಮಾಡಲು ಬಹುಹಳ್ಳಿ ಕುಡಿಯುವ ನೀರಿನ ಯೋಜನೆ, ಕೆರೆ ತುಂಬುವ ಯೋಜನೆ, ಇಂಡಿ ಶಾಖಾ ಕಾಲುವೆಯ ಕೊನೆಯ ಹಂತದವರೆಗೆ ನೀರು ಹರಿಸಿದ್ದರಿಂದ ಪ್ರಸಕ್ತ ಬೇಸಿಗೆಯಲ್ಲಿ ಯಾವುದೇ ಗ್ರಾಮಕ್ಕೆ ಕುಡಿಯುವ ನೀರಿನ ತೊಂದರೆ ಕಾಣಲಿಲ್ಲ. ಜಲಮೂಲಗಳಿಗೆ ನೀರು ಬಂದು ಅಂತರ್ಜಲಮಟ್ಟ ಹೆಚ್ಚಾಗಿದೆ. ಬತ್ತಿದ ಬಾವಿ, ಬೋರ್‌ವೆಲ್‌ಗಳು ಮರುಜೀವ ಪಡೆದಿವೆ. ಮುಂಗಾರು ಪೂರ್ವ ಮಳೆಯಿಂದಾಗಿ ಬಿಸಿಲಿನಿಂದ ಬತ್ತಿದ್ದ ಹಳ್ಳ, ಕೆರೆಗಳು, ಬಾಂದಾರಗಳು ಈಗ ಕಂಗೊಳಿಸುತ್ತಿವೆ. ಇದೀಗ ಆಲಮಟ್ಟಿ ಡ್ಯಾಂನಿಂದ ಕಾಲುವೆಗೆ ಬಿಡಲಾಗಿರುವ ನೀರಿನಿಂದ ಇಂಡಿ, ಚಡಚಣ ತಾಲೂಕಿನ ಅರ್ಧದಷ್ಟು ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಹಳ್ಳ, ನದಿ, ಬಾಂದಾರ, ಕಾಲುವೆಗಳಿಗೆ ನೀರು ಹರಿದಿದ್ದು, ರೈತರು, ಸಾರ್ವಜನಿಕರು ಹರ್ಷಗೊಂಡಿದ್ದಾರೆ.ಆಲಮಟ್ಟಿ ಅಣೆಕಟ್ಟಿನಿಂದ ಬಿಟ್ಟಿರುವ ನೀರು ನಾರಾಯಣಪೂರ ಜಲಾಶಯ ಸೇರಿ, ಅಲ್ಲಿಂದ ಇಂಡಿ ಶಾಖಾ ಕಾಲುವೆಯ ಮೂಲಕ ಬಳಗಾನೂರ ಕೆರೆ, ಸಂಗೋಗಿ ಕೆರೆ ತುಂಬಿ, ನಾದ ದೊಡ್ಡಹಳ್ಳ, ಮಾರ್ಸನಹಳ್ಳಿ ಬಳಿಯ ಹಳ್ಳ, ಹತ್ತಳ್ಳಿ, ಹಾವಿನಾಳ, ಚಡಚಣ, ಅಗರಖೇಡ, ಹಿರೇಬೇವನೂರ, ಚಿಕ್ಕಬೇವನೂರ, ಮಿರಗಿ, ಗೋಳಸಾರ, ಹಲಸಂಗಿ ಹಳ್ಳ ಸೇರಿದಂತೆ ಹಲವು ಕಾಲುವೆಗಳ ಮೂಲಕ ಭೀಮಾನದಿಗೆ ಸೇರಿದೆ. ಕೆಬಿಜೆಎನ್ಎಲ್ ರಾಂಪೂರ ಅಧೀಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಅವರು ತಾವೊಬ್ಬ ಹಿರಿಯ ಅಧಿಕಾರಿ ಎಂದು ಮರೆತು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ರೈತರು, ಜಾನುವಾರು, ಸಾರ್ವಜನಿಕರ ಪರ ಕಾಳಜಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ.
ಹಲವು ವರ್ಷಗಳಿಂದ ಮಳೆ ಇಲ್ಲದೆ ನಾದ, ಮಾರ್ಸನಹಳ್ಳಿ, ಹಲಸಂಗಿ ಬಳಿಯ ಹಳ್ಳ ನೀರು ತುಂಬಿ ಹರಿದಿಲ್ಲ. ಇಂದು ಇಂಡಿ ಶಾಖಾ ಕಾಲುವೆಯ ಮೂಲಕ ಹರಿದ ನೀರು ಹಳ್ಳದ ಮೂಲಕ ಭೀಮಾನದಿ ಸೇರಿದೆ. ಮಳೆಗಾಲದಲ್ಲಿ ಹರಿಯದ ಹಳ್ಳಗಳು ಇಂದು ಕಾಲುವೆ ಮೂಲಕ ಹರಿಸಿದ ನೀರಿನಿಂದ ನೀರು ಕಂಡಿವೆ. ಹೊರ್ತಿ ಭಾಗದ ಮೇಲಿರುವ ಗ್ರಾಮಗಳಲ್ಲಿ ಕೆರೆಗಳನ್ನು ತುಂಬಿಸಿದ್ದರಿಂದ ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿಲ್ಲ.---------
ಕೋಟ್ ೧)ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಕುಡಿಯುವ ನೀರಿಗೆ ಮೊದಲ ಪ್ರಾಶಸ್ತ್ರ ನೀಡಿದ್ದರಿಂದ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ, ಕೆರೆಗಳನ್ನು ತುಂಬಿಸುವುದಕ್ಕೆ ಮೊದಲ ಆದ್ಯತೆ ನೀಡಿ ಕಾಲುವೆ ಮೂಲಕ ನೀರು ಹರಿಸಲಾಗಿದೆ. ಕುಡಿಯುವ ನೀರಿನ ತೊಂದರೆ ಇರುವ ಹಾಗೂ ಕಾಲುವೆ ಮೂಲಕ ನೀರು ಹೋಗದಿರುವ ಗ್ರಾಮಗಳ ವ್ಯಾಪ್ತಿಯ ಹಳ್ಳಗಳಿಗೆ ಇಂಡಿ ಶಾಖಾ ಕಾಲುವೆ ಮೂಲಕ ನೀರು ಹರಿಸಲಾಗಿದೆ. ಹಳ್ಳಕೊಳ್ಳಗಲ್ಲಿನ ಬಾಂದಾರಗಳಲ್ಲಿ ನೀರು ನಿಂತಿದೆ.
ಮನೋಜಕುಮಾರ ಗಡಬಳ್ಳಿ, ಅಧಿಕ್ಷಕ ಅಭಿಯಂತರರು, ಕೆಬಿಜೆಎನ್ಕೊಟ್ 2)
ನಾದ ಹಳ್ಳದ ದಂಡೆಯ ಮೇಲಿರುವ ಗ್ರಾಮಗಳಲ್ಲಿ ಅಂತರ್ಜಲಮಟ್ಟ ಕುಸಿದಿದ್ದರಿಂದ ನೀರಿನ ಸಮಸ್ಯೆ ತಲೆದೋರಿತ್ತು. ಪ್ರಾಣಿ, ಪಕ್ಷಿಗಳು ನೀರಿಗಾಗಿ ಪರಿತಪಿಸುತ್ತಿದ್ದವು. ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದರಿಂದ, ನಾದ ಹಳ್ಳಕ್ಕೆ ಕಾಲುವೆ ಮೂಲಕ ನೀರು ಹರಿಸಿದ್ದಾರೆ. ಇಂದು ಹಳ್ಳದ ದಂಡೆಯಲ್ಲಿನ ಬಾವಿ, ಬೋರ್‌ವೆಲ್‌ಗಳಿಗೆ ನೀರು ಬಂದು ಅಂತರ್ಜಲ ಮಟ್ಟ ಹೆಚ್ಚಿದೆ. ಜಾನುವಾರುಗಳಿಗೂ ನೀರಿನ ಅನುಕೂಲವಾಗಿದೆ.ಚಂದಣ್ಣ ಆಲಮೇಲ, ಮಿರಗಿ ಪಿಕೆಪಿಎಸ್ ಅಧ್ಯಕ್ಷ