ಅಳ್ನಾವರದಲ್ಲಿ ಎಲ್ಲೆ ಮೀರಿದ ಬಡ್ಡಿ ಮಾಫಿಯಾ!

| Published : Aug 29 2024, 12:46 AM IST

ಸಾರಾಂಶ

ಗ್ರಾಮೀಣ ಪ್ರದೇಶಗಳಲ್ಲಿ ಸಂಘಗಳ ಮೂಲಕ ಅನಧಿಕೃತವಾಗಿ ಬಡ್ಡಿ ವ್ಯವಹಾರ ಮಾಡಿದರೆ, ಇನ್ನೂ ಕೆಲವು ಸಂಸ್ಥೆಗಳು ಸಾಲದ ಹೆಸರಿನಲ್ಲಿ ಜನರ ರಕ್ತವನ್ನೇ ಹೀರುತ್ತಿವೆ. ಅದರಲ್ಲೂ ಪಟ್ಟಣಗಳಲ್ಲಿ ಇತ್ತೀಚೆಗೆ ಹುಟ್ಟಿಕೊಂಡಿರುವ ಬೇರೆ ರಾಜ್ಯದ ಸ್ಮಾಲ್‌ ಫೈನಾನ್ಸ್‌ಗಳು ಸಾಲಗಾರರಿಗೆ ಇಲ್ಲಸಲ್ಲದ ಆಮಿಷ ಒಡ್ಡಿ ಮನೆ, ಹೊಲಗಳನ್ನು ಅಡವಿಟ್ಟುಕೊಂಡು ಸಾಲ ನೀಡುತ್ತಿವೆ.

ಶಶಿಕುಮಾರ ಪತಂಗೆ

ಅಳ್ನಾವರ:

ಬರೀ ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಬಡ್ಡಿ ದಂಧೆಯು ಇದೀಗ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿದ್ದು ಅದರಲ್ಲೂ ಅಳ್ನಾವರ ಅಂತಹ ಪಟ್ಟಣದಲ್ಲಿ ಎಲ್ಲೆ ಮೀರಿದೆ. ಮೀಟರ್‌ ಬಡ್ಡಿ ದಂಧೆಯು ಇಲ್ಲಿಯ ಜನರನ್ನು ತೊಂದರೆಯಲ್ಲಿ ನೂಕುತ್ತಿದೆ.

ಗ್ರಾಮೀಣ ಭಾಗದ ಮಹಿಳೆಯರ ಅಭಿವೃದ್ಧಿಗಾಗಿ ಸರ್ಕಾರ ಮಹಿಳಾ ಸಂಘಗಳನ್ನು ರಚಿಸಿ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ಮೂಲಕ ಸಾಲವನ್ನು ನೀಡಿ ಸ್ವಉದ್ಯೋಗಕ್ಕೆ ಅವಕಾಶ ನೀಡುತ್ತಿದೆ. ಆದರೆ, ಕೆಲವು ಸಂಘಗಳು ಈ ಮೂಲ ಉದ್ದೇಶವನ್ನು ಮರೆತು ಸಾಲ ಕೊಡುವುದನ್ನು ಪಟ್ಟಣದಲ್ಲಿ ದಂಧೆಯನ್ನಾಗಿ ಪರಿವರ್ತಿಸಿಕೊಂಡಿವೆ. ನೂರಕ್ಕೆ ಶೇ. 3ರಂತೆ ಸಾಲ ನೀಡುತ್ತಿವೆ. ಸಾಲ ಪಡೆದ ವ್ಯಕ್ತಿ ಪ್ರತಿ ತಿಂಗಳು ಇಲ್ಲಿ ಬಡ್ಡಿ ಕಟ್ಟಲೇಬೇಕು. ಸಮಯ ತಪ್ಪದರೆ ಸಾಲ ಪಡೆದ ವ್ಯಕ್ತಿ ಚಕ್ರ ಬಡ್ಡಿಯನ್ನು ಬರಿಸಬೇಕಾಗುತ್ತದೆ.

ಸ್ಮಾಲ್‌ ಫೈನಾನ್ಸ್‌ ಹಾವಳಿ:

ಗ್ರಾಮೀಣ ಪ್ರದೇಶಗಳಲ್ಲಿ ಸಂಘಗಳ ಮೂಲಕ ಅನಧಿಕೃತವಾಗಿ ಬಡ್ಡಿ ವ್ಯವಹಾರ ಮಾಡಿದರೆ, ಇನ್ನೂ ಕೆಲವು ಸಂಸ್ಥೆಗಳು ಸಾಲದ ಹೆಸರಿನಲ್ಲಿ ಜನರ ರಕ್ತವನ್ನೇ ಹೀರುತ್ತಿವೆ. ಅದರಲ್ಲೂ ಪಟ್ಟಣಗಳಲ್ಲಿ ಇತ್ತೀಚೆಗೆ ಹುಟ್ಟಿಕೊಂಡಿರುವ ಬೇರೆ ರಾಜ್ಯದ ಸ್ಮಾಲ್‌ ಫೈನಾನ್ಸ್‌ಗಳು ಸಾಲಗಾರರಿಗೆ ಇಲ್ಲಸಲ್ಲದ ಆಮಿಷ ಒಡ್ಡಿ ಮನೆ, ಹೊಲಗಳನ್ನು ಅಡವಿಟ್ಟುಕೊಂಡು ಸಾಲ ನೀಡುತ್ತಿವೆ. ಈ ಬ್ಯಾಂಕ್‌ಗಳು ಸಾಲ ಪಡೆಯುವ ಜನರನ್ನು ಹುಡುಕಿ ಕರೆದುಕೊಂಡು ಬರುವುದಕ್ಕಾಗಿಯೇ ಎಡ್ಮೂರು ಹಳ್ಳಿಗಳಿಗೆ ಒಬ್ಬರಂತೆ ಎಜೆಂಟರ್‌ನ್ನು ನೇಮಿಸಿದ್ದಾರೆ. ಸಾಲ ಮರುಪಾವತಿಯಲ್ಲಿ ಎರಡು ಕಂತುಗಳು ವಿಳಂಬವಾದರೂ ಸಾಲ ಪಡೆದವನ ಮನೆಗೆ ಬೆಳಗ್ಗೆ 6ಕ್ಕೆ ನಾಲ್ಕಾರು ಜನರು ವಸೂಲಿಗಾರರು ಹಾಜರು. ಇನ್ನು, ಮೂರು ಕಂತು ತಪ್ಪಿದರೆ ನೇರವಾಗಿ ಮನೆಯನ್ನೇ ಮಾರಾಟಕ್ಕೆ ಇಡುತ್ತಾರೆ ಈ ದುರುಳರು. ಈ ಅವಸ್ಥೆಯಿಂದ ಬೇಸತ್ತು ಸಾಲಗಾಗರರು ಊರು ಬಿಟ್ಟು ಗೋವಾ, ಮಹಾರಾಷ್ಟ್ರಗಳಿಗೆ ಓಡಿ ಹೋಗಿರುವ ಉದಾಹರಣೆಗಳು ಪಟ್ಟಣದಲ್ಲಿವೆ.

ಗ್ರಾಮೀಣ ಭಾಗದಲ್ಲಿ ಪ್ರತಿ ತಿಂಗಳು ಇವರಿಗೆ ಕಂತಿನ ಹಣ ತುಂಬಲು ಎತ್ತುಗಳು, ಮೇಕೆ, ಜಾನುವಾರು, ಮನೆಯಲ್ಲಿದ್ದ ಧಾನ್ಯಗಳನ್ನು ಮಾರಾಟ ಮಾಡಿ ಸಾಲ ತುಂಬಿರುವ ಅನೇಕ ಘಟನೆಗಳು ಸಾಕ್ಷಿಯಾಗಿವೆ. ಇನ್ನೂ ಕೆಲವರು ಅಸಲಿಗಿಂತ ಹೆಚ್ಚು ಹಣ ತುಂಬಿದರೂ ಸಾಲ ತೀರದೆ ಮನೆಗಳುನ್ನು ಸೀಜ್ ಮಾಡಿರುವ ಹಲವು ಉದಾಹರಣಗಳಿವೆ. ದುರಂತದ ಸಂಗತಿ ಏನೆಂದರೆ, ಈ ಬಗ್ಗೆ ಎಲ್ಲಿಯೂ ಪ್ರಕರಣಗಳು ದಾಖಲಾಗಿಲ್ಲ.

ತಾಲೂಕಿನ ಪಟ್ಟಣ ಸೇರಿದಂತೆ ಕೆಲ ಭಾಗದಲ್ಲಿ ವಸ್ತುಗಳನ್ನು ಅಡವಿಟ್ಟುಕೊಂಡು ನೂರಕ್ಕೆ ಶೇ.5, 10ರಂತೆ ಸಾಲ ಕೊಡುವವರು ಹೆಚ್ಚಾಗಿದ್ದು, ಅನೇಕರು ಇವರ ಬಳಿ ಸಾಲ ಪಡೆದು ಬಡ್ಡಿ ತುಂಬದೆ ತಮ್ಮ ಹೆಸರಿನಲ್ಲಿರುವ ಆಸ್ತಿ, ವಸ್ತುಗಳನ್ನು ಮಾರಿಕೊಂಡಿದ್ದಾರೆ. ಹೆಚ್ಚಿನದಾಗಿ ಕಾರ್ಮಿಕರು ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಜಿಲ್ಲಾ ಉಸ್ತವಾರಿ ಸಚಿವರು ಈ ಬಡ್ಡಿ ದಂಧೆಗೆ ಕಡಿವಾಣ ಹಾಕಬೇಕು ಎಂಬುದು ಜನರ ಆಶಯ.