ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದೆ ಶಿಸ್ತಿನ ಜೀವನ ನಡೆಸಬೇಕು. ಶ್ರಮದಾನ ಮಾಡಿದರೆ ಸಾರ್ವಜನಿಕ ಜೀವನದಲ್ಲಿ ರಾಷ್ಟ್ರ ಸೇವೆ ಮಾಡಿದಂತೆ. ಪಾಲಕರು ಮಕ್ಕಳ ಸಾಮರ್ಥ್ಯ ಗುರುತಿಸಿ ಪ್ರೋತ್ಸಾಹ ನೀಡುವ ಮೂಲಕ ಕೆಟ್ಟದಾರಿಗೆ ಹೋಗದಂತೆ ಜಾಗ್ರತೆ ವಹಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ ಹಾಗೂ ಆಚಾರ, ವಿಚಾರಗಳನ್ನು ಅಳವಡಿಸಿಕೊಂಡರೆ ಬದುಕು ಪರಿಪೂರ್ಣವಾಗುತ್ತದೆ ಎಂದು ಕೋಡಿಮಠದ ಪೀಠಾಧ್ಯಕ್ಷ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ಚೌಡಸಮುದ್ರ ಗ್ರಾಮದಲ್ಲಿ ಕೆ.ಆರ್.ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ನಡೆದ ವಿಶೇಷ ವಾರ್ಷಿಕ ಶಿಬಿರದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಯಶಸ್ಸು ನಿಮ್ಮ ಪರಿಶ್ರಮದ ಮೇಲೆ ನಿಂತಿರುತ್ತದೆ. ಪ್ರಯತ್ನ ಇದ್ದರೆ ಫಲ ಪಡೆಯಬಹುದು. ಇಂದಿನ ಯುವಕರಿಗೆ ಅವರಲ್ಲಿರುವ ಶಕ್ತಿಯ ಬಗ್ಗೆ ಅರಿವೇ ಇರುವುದಿಲ್ಲ. ಅದನ್ನು ಗುರುತಿಸುವ ಉಪನ್ಯಾಸಕರು, ಪಾಲಕರು, ಗುರು ಹಿರಿಯರ ಮಾತನ್ನು ಪಾಲಿಸಬೇಕು ಎಂದರು.

ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದೆ ಶಿಸ್ತಿನ ಜೀವನ ನಡೆಸಬೇಕು. ಶ್ರಮದಾನ ಮಾಡಿದರೆ ಸಾರ್ವಜನಿಕ ಜೀವನದಲ್ಲಿ ರಾಷ್ಟ್ರ ಸೇವೆ ಮಾಡಿದಂತೆ. ಪಾಲಕರು ಮಕ್ಕಳ ಸಾಮರ್ಥ್ಯ ಗುರುತಿಸಿ ಪ್ರೋತ್ಸಾಹ ನೀಡುವ ಮೂಲಕ ಕೆಟ್ಟದಾರಿಗೆ ಹೋಗದಂತೆ ಜಾಗ್ರತೆ ವಹಿಸಬೇಕು ಎಂದರು.

ಯುವಜನತೆ ಕೆಟ್ಟ ಅಭ್ಯಾಸಗಳಿಂದ ದೂರವಿದ್ದು, ಮಹಾತ್ಮ ಗಾಂಧೀಜಿ ಅವರ ಕನಸಿನಂತೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳವಣಿಗೆ, ಸಾಮಾಜಿಕ ಜವಾಬ್ದಾರಿ, ವ್ಯಕ್ತಿತ್ವ ವಿಕಸನ ಸೇರಿದಂತೆ ಅನೇಕ ವಿಚಾರಗಳನ್ನು ಶಿಬಿರದ ಮೂಲಕ ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ತೆಂಡೇಕೆರೆ ಬಾಳೆಹೊನ್ನೂರು ರಂಭಾಪುರಿ ಶಾಖಾ ಮಠದ ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಗಳು ಮಾತನಾಡಿ, ಕನಸುಗಳನ್ನು ಹೊತ್ತು ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಪರಿಶ್ರಮದಿಂದ ಸಾಧನೆಗೈದು ಕಹಿ ನೆನಪುಗಳನ್ನು ಮರೆತು ಸಿಹಿ ನೆನಪುಗಳೊಂದಿಗೆ ತೆರಳಬೇಕು ಎಂದರು.

ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಉತ್ತಮ ಶಿಕ್ಷಣದ ಜೊತೆಗೆ ಇಂತಹ ಶಿಬಿರಗಳಲ್ಲಿ ಭಾಗವಹಿಸಿದರೆ ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಭಾಗದ ಸಮಸ್ಯೆಗಳನ್ನು ಅರಿತು ಇಲ್ಲಿಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಕೋಡಿಮಠ ಹಾಗೂ ತೆಂಡೇಕೆರೆ ಮಠದ ಶ್ರೀಗಳನ್ನು ಕಾಲೇಜು ಆಡಳಿತ ವರ್ಗ, ಗ್ರಾಮಸ್ಥರು ಪೂರ್ಣ ಕುಂಭ ಕಳಸ ಹಾಗೂ ಮಂಗಳವಾದ್ಯ ಸಹಿತ ಚಿನ್ನದ ಮಾದರಿ ರಥದ ಮೂಲಕ ಗ್ರಾಮದ ರಾಜ ಬೀದಿಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಈ ವೇಳೆ ತಾಪಂ ಮಾಜಿ ಸದಸ್ಯ ಸಾಸಲು ಈರಪ್ಪ, ಕಾಂಗ್ರೆಸ್ ಯುವ ಮುಖಂಡ ದೇವರಳ್ಳಿ ಮಹೇಂದ್ರ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಲಕ್ಷ್ಮೀಪುರ ಚಂದ್ರೇಗೌಡ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ದಿನೇಶ್, ನಾಗೇಶ್ ಬಾಬು, ಪ್ರಕಾಶ್, ನಿವೃತ್ತ ಶಿಕ್ಷಕ ಶಿವಪ್ಪ, ರಾಜಪ್ಪ, ಶಿವಪ್ಪ, ಚಂದ್ರು, ಗ್ರಾಮಸ್ಥರು ಉಪಸ್ಥಿತರಿದ್ದರು.