ಶಿಕ್ಷಣ ಜತೆಗೆ ಆತ್ಮರಕ್ಷಣೆ ಕಲೆಗಳೂ ಮುಖ್ಯ: ಶ್ರೀಪಾದ ಬಿಚ್ಚುಗತ್ತಿ

| Published : Feb 26 2024, 01:35 AM IST

ಸಾರಾಂಶ

ಶೈಕ್ಷಣಿಕ ಪ್ರಗತಿಯ ಜತೆಗೆ ಸ್ವಾವಲಂಬನೆ, ಆತ್ಮರಕ್ಷಣೆಗೆ ಪೂರಕ ಆಗುವಂತಹ ಚಟುವಟಿಕೆಗಳನ್ನು ಮಕ್ಕಳಿಗೆ ನೀಡುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ಮೂಡಿಸಬೇಕು. ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಪೂರಕವಾಗಿ ಶಿಕ್ಷಣ ದೊರಕಬೇಕು. ಆಗ ಮಾತ್ರ ಗುಣಾತ್ಮಕ ಶಿಕ್ಷಣಕ್ಕೆ ಅರ್ಥ ಮೂಡುತ್ತದೆ. ವಿಶೇಷವಾಗಿ ಹಳೇ ಸೊರಬ ಸರ್ಕಾರಿ ಪ್ರೌಢಶಾಲೆ ಗ್ರಾಮಾಂತರ ಪ್ರದೇಶಗಳ ಮಕ್ಕಳ ಅಂತರ್ಗತ ಮೌಲ್ಯಗಳನ್ನು ಗುರುತಿಸಿ, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದೆ ಎಂದು ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಸೊರಬದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ಶೈಕ್ಷಣಿಕ ಪ್ರಗತಿಯ ಜತೆಗೆ ಸ್ವಾವಲಂಬನೆ, ಆತ್ಮರಕ್ಷಣೆಗೆ ಪೂರಕ ಆಗುವಂತಹ ಚಟುವಟಿಕೆಗಳನ್ನು ಮಕ್ಕಳಿಗೆ ನೀಡುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ಮೂಡಿಸಬೇಕು ಎಂದು ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಹೇಳಿದರು. ತಾಲೂಕಿನ ಹಳೇ ಸೊರಬ ಗ್ರಾಮದಲ್ಲಿ ಶನಿವಾರ ಸರ್ಕಾರಿ ಪ್ರೌಢಶಾಲಾ ಹೆಣ್ಣುಮಕ್ಕಳು ಕರಾಟೆ ಕಲಿತು ಈಚೆಗೆ ಗಣರಾಜ್ಯೋತ್ಸವ ವೇಳೆ ಯಶಸ್ವಿಯಾಗಿ ಪ್ರದರ್ಶಿಸಿದ್ದರಿಂದ ಹೆಲ್ಪಿಂಗ್ ಹ್ಯಾಂಡ್ ಸಮೂಹ ವತಿಯಿಂದ ನೀಡಿದ ಕಿರುಕಾಣಿಕೆ ವಿತರಿಸಿ ಅವರು ಮಾತನಾಡಿದರು.

ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಪೂರಕವಾಗಿ ಶಿಕ್ಷಣ ದೊರಕಬೇಕು. ಆಗ ಮಾತ್ರ ಗುಣಾತ್ಮಕ ಶಿಕ್ಷಣಕ್ಕೆ ಅರ್ಥ ಮೂಡುತ್ತದೆ. ವಿಶೇಷವಾಗಿ ಹಳೇ ಸೊರಬ ಸರ್ಕಾರಿ ಪ್ರೌಢಶಾಲೆ ಗ್ರಾಮಾಂತರ ಪ್ರದೇಶಗಳ ಮಕ್ಕಳ ಅಂತರ್ಗತ ಮೌಲ್ಯಗಳನ್ನು ಗುರುತಿಸಿ, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದೆ. ಜತೆಗೆ ಮಾನವಿಕ ಮೌಲ್ಯವನ್ನು ಎತ್ತಿಹಿಡಿಯುವಲ್ಲಿ ಸಫಲವಾಗಿದೆ. ಹಲವಾರು ಒತ್ತಡಗಳನ್ನು ಎದುರಿಸುತ್ತಿರುವ ಸರ್ಕಾರಿ ಶಾಲೆಗಳ ಶಿಕ್ಷಕರು ದೊರೆತ ಅಲ್ಪಾವಧಿಯ ಸಮಯದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಟೊಂಕ ಕಟ್ಟಿರುವುದು ಶ್ಲಾಘನೀಯ ಎಂದರು.

ಹೆಲ್ಪಿಂಗ್ ಹ್ಯಾಂಡ್‌ನ ಮಧುಕೇಶ್ವರ ಆರ್. ಮಾತನಾಡಿ, ಕರಾಟೆ ಕಲಿಯುವುದರಿಂದ ಜೀವ ರಕ್ಷಣೆಯ ಜತೆಗೆ ಇತರರನ್ನೂ ರಕ್ಷಿಸಬಹುದು. ಶಾಲೆ ಮಕ್ಕಳು ತಮಗೆ ಸಿಕ್ಕ ಕಡಿಮೆ ಅವಧಿಯಲ್ಲಿ ಅಪ್ರತಿಮ ಸಾಧನೆ ಮೆರೆದಿದ್ದು ಸಂತಸದ ವಿಷಯ. ಇದಕ್ಕೆ ಶಾಲಾ ಶಿಕ್ಷಕರು ಸಹ ಕಾರಣರಾಗಿದ್ದಾರೆ. ಕರಾಟೆ ಶಿಕ್ಷಕ ಕರಾಟೆ ಕಲಿಸಿದ ಶಿಯಾನ್ ಪಂಚಪ್ಪ ಗುರುಗಳು ಸ್ತುತ್ಯಾರ್ಹ ಎಂದರು.

ಈ ಸಂದರ್ಭದಲ್ಲಿ ಮಕ್ಕಳಿಗೆ ಪೆನ್ನು, ಪುಸ್ತಕ ವಿತರಿಸಲಾಯಿತು. ಮುಖ್ಯಶಿಕ್ಷಕ ವಿ.ಓಂಕಾರಪ್ಪ, ಕೆ.ಸುಜಾತ, ಡಿ.ಕಲಾವತಿ, ಎಚ್.ಆರ್. ರಮೇಶ್, ಡಿ.ಎಸ್. ಜಯಶ್ರೀ, ಎಸ್.ಪಿ. ಶೋಭಾ, ಎಲ್.ಎನ್. ಶಿಲ್ಪ, ಡಿ.ಶೋಭಾ, ಕೆ.ಆರ್. ಚಂದ್ರಕಲಾ, ವಿ. ಲಕ್ಷ್ಮೀ, ಆರ್.ಪ್ರೇಮ, ಪಿ.ಗೋಪಾಲ್, ಸುಜಾತ ಭಂಡಾರಿ , ಕಲಾಧರೆ, ಶ್ರೀನಿವಾಸಮೂರ್ತಿ, ಉಮೇಶ್ ರಾಥೋಡ, ಸತ್ಯನಾರಾಯಣ ಹಾಗೂ ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ಹಾಜರಿದ್ದರು.

- - -

-೨೫ಕೆಪಿಸೊರಬ-೦೨:

ಸೊರಬ ತಾಲೂಕಿನ ಹಳೇ ಸೊರಬ ಗ್ರಾಮದ ಸರ್ಕಾರಿ ಪ್ರೌಢಶಾಲಾ ಹೆಣ್ಣುಮಕ್ಕಳು ಕರಾಟೆ ಕಲಿತು, ಗಣರಾಜ್ಯೋತ್ಸವ ವೇಳೆ ಯಶಸ್ವಿಯಾಗಿ ಪ್ರದರ್ಶಿಸಿದ ಹಿನ್ನೆಲೆ ಹೆಲ್ಪಿಂಗ್ ಹ್ಯಾಂಡ್ ಸಮೂಹದ ವತಿಯಿಂದ ಅವರಿಗೆ ನೆನಪಿನ ಕಾಣಿಕೆ ನೀಡಲಾಯಿತು.