ಸಾರಾಂಶ
ಕನ್ನಡಪ್ರಭ ವಾರ್ತೆ ದೇವದುರ್ಗ
ಶಿಕ್ಷಣ ಪಡೆಯುವದರೊಂದಿಗೆ ಬುದ್ಧಿವಂತರು ಆದರೆ ಸಾಲದು, ಮಾನವೀಯ ಮೌಲ್ಯ ಜೀವನದಲ್ಲಿ ಅಳವಡಿಸಿಕೊಂಡು ಹೃದಯವಂತಿಕೆಯುಳ್ಳವರಾಗುವದು ಅತ್ಯಗತ್ಯ ಎಂದು ನಿವೃತ್ತ ಪ್ರಾಚಾರ್ಯ ಬಿ.ದೇವರೆಡ್ಡಿ ಹೇಳಿದರು.ತಾಲೂಕಿನ ಗಬ್ಬೂರಿನ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ 1997-98ನೇ ಸಾಲಿನ ಎಸ್ಎಸ್ಎಲ್‌ಸಿ ವಿದ್ಯಾರ್ಥಿ ಬಳಗದಿಂದ ಆಯೋಜಿಸಲಾದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಹಾಗೂ ಬೆಳ್ಳಿ ಸಂಭ್ರಮ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರಕ್ತ ಸಂಬಂಧಗಳೇ ದೂರಾಗುತ್ತಿರುವ ಸಂದರ್ಭದಲ್ಲಿ ವಿದ್ಯೆ ಕಲಿಸಿದ ಗುರುಗಳನ್ನು ಸ್ಮರಿಸಿಕೊಂಡು ಗೌರವಿಸುವದು ಶ್ಲಾಘನೀಯವಾಗಿದೆ. ಬದುಕಿನಲ್ಲಿ ಪರಿವರ್ತನೆ ಅಮೂಲ್ಯ ಬೆಲೆ ಇದೆ. ನಿಂತ ನೀರು ಮಲಿನವಾಗುತ್ತದೆ. ಹಾಲು ಪರಿವರ್ತನೆಗೊಳ್ಳದಿದ್ದರೆ ಮೊಸರು, ತುಪ್ಪ ದೊರಕುವುದಿಲ್ಲ. ಬೆಳೆಗಳ ಫಸಲು ಬರಲು ಕಳೆ ಹೇಗೆ ತೆಗೆಯುತ್ತೇವೆಯೋ ಅದೇ ರೀತಿ ಗುರುವೃಂದ ನಮ್ಮ ತಿದ್ದಿ ತೀಡಿ ಬದುಕು ರೂಪಗೊಳಿಸಿದ್ದಾರೆ ಎಂದರು.
ಜಿಲ್ಲೆಯ ಹಿರಿಯ ಸಾಹಿತಿ ಶಂಕರರಾವ್ ಉಭಾಳೆ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಿದ್ಯಾರ್ಥಿ ಬಳಗದ ಪ್ರತಿನಿಧಿ ಸಂಗಮೇಶ ಬೆಂಡೆಗಂಬಳಿ ವಹಿಸಿದ್ದರು. ಗಬ್ಬೂರಿನ ಬೂದಿಬಸವೇಶ್ವರ ಸಂಸ್ಥಾನ ಮಠದ ಬೂದಿಬಸವ ಶಿವಾಚಾರ್ಯ ಮಹಾಸ್ವಾಮೀಜಿ, ಪಂಚಾಕ್ಷರಿ ಮಹಾಸಂಸ್ಥಾನ ತೀರ್ಥ ಬೃಹನ್ಮಠ ಸುಲ್ತಾನಪುರದ ಶ್ರೀಗಳಾದ ಶಂಭು ಸೋಮನಾಥ ಶಿವಾಚಾರ್ಯ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢ ಶಾಲೆ ಎಸ್‌ಡಿಎಂಸಿ ಅಧ್ಯಕ್ಷೆ ಲಕ್ಷ್ಮೀ ಗುರುಬಸವ ಹುರಕಡ್ಲಿ, ಪ್ರೌಢ ಶಾಲಾ ಮುಖ್ಯಗುರು ಹೊನಕೇರಪ್ಪ, ಮುನ್ನೂರುವಾಡಿ ಮುಖ್ಯಗುರು ಶಿವುಕುಮಾರ ಬೂದಿನಾಳ, ಬಾಲಕರ ಶಾಲೆ ಮುಖ್ಯಗುರು ರಾಚಪ್ಪ ಬಳೆ, ಬಾಲಕಿಯರ ಶಾಲೆ ಮುಖ್ಯಗುರು ಶಿವಪ್ಪ ಹೂಗಾರ, ಪದ್ಮಾ ಟೀಚರ್, ನಿವೃತ್ತ ಶಿಕ್ಷಕಿ ಗಿರಿಜಮ್ಮ ಉಪಸ್ಥಿತರಿದ್ದರು.