ಕ್ರೀಡೆಯಿಂದ ದೈಹಿಕ ಸಾಮರ್ಥ್ಯದ ಜೊತೆಗೆ ಆರೋಗ್ಯವೂ ವೃದ್ಧಿ: ನಿರ್ಮಲಾನಂದನಾಥ ಸ್ವಾಮೀಜಿ

| Published : Mar 20 2024, 01:19 AM IST

ಕ್ರೀಡೆಯಿಂದ ದೈಹಿಕ ಸಾಮರ್ಥ್ಯದ ಜೊತೆಗೆ ಆರೋಗ್ಯವೂ ವೃದ್ಧಿ: ನಿರ್ಮಲಾನಂದನಾಥ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕ ಆಟೋಟಗಳ ಜೊತೆಗೆ ನಮ್ಮ ಮೂಲ ಜನಪದದ ಆಟಗಳನ್ನು ಪ್ರೋತ್ಸಾಹಿಸಿ ಆಡಿಸಬೇಕೆಂಬ ಉದ್ದೇಶದಿಂದ ಈ ಬಾರಿಯ ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಲಗೋರಿ ಮತ್ತು ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ದೇಶಿಯ ಆಟಗಳಾದ ಕುಂಟೆಬಿಲ್ಲೆ, ಗೋಲಿ ಮತ್ತು ಚಿನ್ನಿದಾಂಡು ಆಟಗಳಿಗೂ ಆದ್ಯತೆ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಮ್ಯಾರಥಾನ್‌ ಓಟ, ಲಗೋರಿ ಮತ್ತು ರಂಗೋಲಿ ಸ್ಪರ್ಧೆಗೆ ಶ್ರೀಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಶ್ರೀಗಳು ಮಂಗಳವಾರ ಬೆಳಿಗ್ಗೆ ಶ್ರೀಕ್ಷೇತ್ರದ ರಥದ ಬೀದಿಯಲ್ಲಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶ್ರೀಗಳು, ದೇಶಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಂದ ಮನುಷ್ಯನ ದೈಹಿಕ ಸಾಮರ್ಥ್ಯ ಸದೃಢಗೊಳಿಸಿಕೊಳ್ಳುವ ಜೊತೆಗೆ ಆರೋಗ್ಯವನ್ನೂ ಸಹ ಉತ್ತಮವಾಗಿಟ್ಟುಕೊಳ್ಳಬಹುದು ಎಂದರು.

ಆಧುನಿಕ ಆಟೋಟಗಳ ಜೊತೆಗೆ ನಮ್ಮ ಮೂಲ ಜನಪದದ ಆಟಗಳನ್ನು ಪ್ರೋತ್ಸಾಹಿಸಿ ಆಡಿಸಬೇಕೆಂಬ ಉದ್ದೇಶದಿಂದ ಈ ಬಾರಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಲಗೋರಿ ಮತ್ತು ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ದೇಶಿಯ ಆಟಗಳಾದ ಕುಂಟೆಬಿಲ್ಲೆ, ಗೋಲಿ ಮತ್ತು ಚಿನ್ನಿದಾಂಡು ಆಟಗಳಿಗೂ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಗ್ರೀಕ್‌ ದೇಶದ ಒಬ್ಬ ಸಾಧಕ ತನ್ನ ಗೆಲುವನ್ನು ಒಂದು ಥೀಮ್ ಗೆಲುವಾಗಿ ಸಂಭ್ರಮಿಸಲು ಆಯ್ಕೆ ಮಾಡಿಕೊಂಡಂತಹ ಸಂದರ್ಭ 60 ಕಿ.ಮೀ ದೂರದ ಓಟದ ಪ್ರಾರಂಭ ಅನ್ವರ್ಥವಾಗಿ ಮ್ಯಾರಥಾನ್‌ ಎಂದು ಪ್ರಸಿದ್ಧಿಯಾಗಿ ಅಂತಾರಾಷ್ಟ್ರೀಯ ಓಟವಾಗಿ ಪರಿವರ್ತನೆಯಾಗಿದೆ ಎಂದು ತಿಳಿಸಿದರು.

ಮ್ಯಾರಥಾನ್‌ ಓಟದಲ್ಲಿ ಪಾಲ್ಗೊಂಡಿದ್ದ ಸ್ಪರ್ಧಾಳುಗಳು ಸತತ 20 ನಿಮಿಷ ಓಡಿ ಬಂದಿದ್ದರೂ ಅವರ ಮುಖದಲ್ಲಿ ಚೈತನ್ಯ ಶಕ್ತಿ ಕುಂದಿಲ್ಲ. ಹಾಗಾಗಿ ಜೀವನದಲ್ಲಿ ಹೀಗೇ ಓಡುತ್ತಲೇ ಇರಬೇಕು.ಆಗ ಮಾತ್ರ ಏನಾದರೊಂದು ಸಾಧನೆ ಮಾಡಬಹುದು ಎಂದು ಹೇಳಿದರು.

ಈ ವೇಳೆ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಶ್ರೀಮಠದ ಚೈತನ್ಯನಾಥ ಸ್ವಾಮೀಜಿ, ಬ್ರಹ್ಮಚಾರಿ ಸಾಯಿಕೀರ್ತಿ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ. ಶಿವರಾಮು, ಲಗೋರಿ ಸಂಸ್ಥಾಪಕ ದೊಡ್ಡಣ್ಣ ಬರೆಮೇಲು, ಬೆಳ್ಳೂರು ಪೊಲೀಸ್‌ ಠಾಣೆ ಪಿಎಸ್‌ಐ ಬಸವರಾಜ ಚಿಂಚೋಳಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ಎನ್. ಪರಮಶಿವಯ್ಯ ಸೇರಿದಂತೆ ಕ್ರೀಡಾಪಟುಗಳು ಮತ್ತು ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.

ಇಂದು ಕೃಷಿ ಉಪನ್ಯಾಸ ಮಾಲಿಕೆ:

ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.20 ರಂದು ಬೆಳಗ್ಗೆ 10ಕ್ಕೆ ಕೃಷಿ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ನಡೆಯಲಿದೆ. ಸಂಜೆ 6ಕ್ಕೆ ಸರ್ವಾಲಂಕೃತ ಶ್ರೀ ಮಲ್ಲಿಕಾರ್ಜುನಸ್ವಾಮಿ ಉತ್ಸವ ನಡೆಯಲಿದೆ.