ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಸಾರ್ವಜನಿಕ ಸೇವಾ ಸಮಿತಿಯಿಂದ ಪ್ರತಿ ವರ್ಷ ಸಿನಿಮಾ ನಟರು, ಕವಿಗಳು, ಸಾಹಿತಿಗಳು, ಕನ್ನಡ ಪರ ಹೋರಾಟಗಾರರನ್ನು ಕರೆಸಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವಂತಹ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಹೇಳಿದರು.ನಗರದ ವಿನೋಬನಗರದ 2ನೇ ಮುಖ್ಯ ರಸ್ತೆಯಲ್ಲಿ ಸಂಜೆ ಸಾರ್ವಜನಿಕ ಸೇವಾ ಸಮಿತಿಯಿಂದ ಆಯೋಜಿಸಿದ್ದ 26ನೇ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜಕುಮಾರ ರವರ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನಾಡಿನಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರೂ ಸಾಮರಸ್ಯದಿಂದ ಒಂದಾಗಿ ಬಾಳುತ್ತಿದ್ದಾರೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವಂತಹ ಕೆಲಸವನ್ನು ಮಾಡಬೇಕಾಗಿದೆ. ಈ ಹಿಂದೆ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹನೀಯರು, ದೇಶ ಭಕ್ತರು, ಮಹಾನ್ ದಾರ್ಶನಿಕರ ಸ್ಮರಿಸುವ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಮಾಡಬೇಕು ಎಂದರು.
ಮಹಾನಗರ ಪಾಲಿಕೆ ಮಹಾಪೌರರಾದ ಕೆ.ಚಮನ್‌ಸಾಬ್ ಮಾತನಾಡಿ, ಎಲ್ಲರೂ ಸೇರಿ ಆಚರಿಸುವಂತಹ ಹಬ್ಬ ಎಂದರೆ ಕನ್ನಡ ರಾಜ್ಯೋತ್ಸವ. ಎಲ್ಲ ಹಬ್ಬಗಳು ಕೂಡಾ ನಾವು ಬೇರೆ, ನೀವು ಬೇರೆ. ಆದರೆ ನಾವೆಲ್ಲರೂ ಒಂದೇ ಎಂದು ಹೇಳುವ ಹಬ್ಬ ಎಂದರೆ ಅದು ಕನ್ನಡ ರಾಜ್ಯೋತ್ಸವ ಮಾತ್ರ ಎಂದರು.ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಾದ ಖುಷಿ ಆರ್.ರಾಯ್ಕರ್, ಶ್ರೇಯಸ್ ಪ್ರಭು ಆಚಾರ್, ತಿಮ್ಮಕ್ಕ ವೆಂಕಟೇಶ, ಕಾರ್ತಿಕ ಸಿ.ಅಗಡಿ, ಪದ್ಮಶ್ರೀ ಅವರುಗಳನ್ನು ಸನ್ಮಾನಿಸಲಾಯಿತು.
ಸಾರ್ವಜನಿಕ ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯರಾದ ಎ.ನಾಗರಾಜ ಅಧ್ಯಕ್ಷತೆ ವಹಿಸಿದ್ದರು.ಉಪ ಮಹಾಪೌರ ಸೋಗಿ ಶಾಂತಕುಮಾರ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹುಲ್ಮನಿ ತಿಮ್ಮಣ್ಣ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಸವಿತಾ ಗಣೇಶ ಹುಲ್ಮನಿ, ಆಶಾ ಉಮೇಶ್, ಸುಧಾ ಇಟ್ಟಿಗುಡಿ, ಎಸ್.ಮಲ್ಲಿಕಾರ್ಜುನ್, ವಾರ್ಡಿನ ಎಚ್.ಸುರೇಶ, ಎಸ್.ರವಿ, ಸಿ.ಎ.ಸೋಮಶೇಖರ, ಎಂ.ರುದ್ರೇಶ, ಸತೀಶ ಶೆಟ್ಟಿ, ಯೋಗೀಶ, ವರ್ತಕ ಅಜ್ಮತ್‌ವುಲ್ಲಾ, ನಾಗರಾಜ ಕೆ.ರಾಯ್ಕರ್ ರಾಮಚಂದ್ರ ರಾಯ್ಕರ್ ಮತ್ತಿತರರಿದ್ದರು.
ಕಾರ್ಯಕ್ರಮದ ಬಳಿಕ ಭಾರತಿ ವಾಧ್ಯವೃಂದದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.