ಓದಿನ ಜತೆಗೆ ಕ್ರೀಡೆಯೂ ಅತ್ಯವಶ್ಯಕ: ಡಾ.ವಿಶ್ವನಾಥ ನಡಕಟ್ಟಿ

| Published : Jan 20 2024, 02:01 AM IST

ಓದಿನ ಜತೆಗೆ ಕ್ರೀಡೆಯೂ ಅತ್ಯವಶ್ಯಕ: ಡಾ.ವಿಶ್ವನಾಥ ನಡಕಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ 2023-24ನೇ ಸಾಲಿನ ಅಕ್ಕಮಹಾದೇವಿ ಮಹಿಳಾ ವಿವಿಯ ಅಂತರ್ ಮಹಾವಿದ್ಯಾಲಯಗಳ ಏಕವಲಯ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಅಕ್ಕಮಹಾದೇವಿ ಮಹಿಳಾ ವಿವಿಯ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕ ಡಾ.ವಿಶ್ವನಾಥ ನಡಕಟ್ಟಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕ್ರೀಡಾ ವಿಭಾಗಕ್ಕೆ ಇಂದು ಎಲ್ಲ ರೀತಿಯ ಸೌಲಭ್ಯಗಳಿದ್ದರೂ ಕ್ರೀಡಾಪಟುಗಳು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುತ್ತಿಲ್ಲ. ಅಕ್ಕಮಹಾದೇವಿ ಮಹಿಳಾ ವಿವಿ ವ್ಯಾಪ್ತಿಯಲ್ಲಿ 140 ಕಾಲೇಜುಗಳಿದ್ದರೂ ಅಂತರ್ ಮಹಾವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಕೇವಲ 3 ಕಾಲೇಜುಗಳ ತಂಡಗಳು ಪಾಲ್ಗೊಂಡಿವೆ ಎಂದು ಅಕ್ಕಮಹಾದೇವಿ ಮಹಿಳಾ ವಿವಿಯ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕ ಡಾ.ವಿಶ್ವನಾಥ ನಡಕಟ್ಟಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ನಡೆದ 2023-24ನೇ ಸಾಲಿನ ಅಕ್ಕಮಹಾದೇವಿ ಮಹಿಳಾ ವಿವಿಯ ಅಂತರ್ ಮಹಾವಿದ್ಯಾಲಯಗಳ ಏಕವಲಯ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೊದಲು ಕ್ರೀಡೆಗಳಿಗೆ ಅಷ್ಟಾಗಿ ಸೌಕರ್ಯ, ಪ್ರೋತ್ಸಾಹವಿರುತ್ತಿಲ್ಲ. ಆದರೆ, ಕ್ರೀಡಾಪಟುಗಳ ಸಂಖ್ಯೆ ಹೆಚ್ಚಿರುತ್ತಿತ್ತು. ಸಾಮಗ್ರಿಗಳಿಗಾಗಿ ಕ್ರೀಡಾಪಟುಗಳು ಸಾಹಸ ಪಡುತ್ತಿದ್ದರು. ಇಂದು ಎಲ್ಲ ರೀತಿಯ ಸಾಮಗ್ರಿಗಳಿದ್ದರೂ ಆಟದತ್ತ ಲಕ್ಷ ವಹಿಸುವ ವಿದ್ಯಾರ್ಥಿಗಳ ಮನಸ್ಥಿತಿ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ವಿದ್ಯಾರ್ಥಿಗಳಿಗೆ ಓದಿನ ಜತೆಗೆ ಕ್ರೀಡೆಯೂ ಅತ್ಯಂತ ಅವಶ್ಯವಾಗಿದೆ. ಇದನ್ನು ಎಲ್ಲರೂ ಅರಿಯಬೇಕು ಎಂದರು.

ಕ್ರೀಡಾಕೂಟದ ಆಯೋಜಕ, ಸಹ ಪ್ರಾಧ್ಯಾಪಕ ಡಾ.ರಾಜಶೇಖರ ಬೆನಕನಹಳ್ಳಿ ಮಾತನಾಡಿ, ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ಕ್ರೀಡಾಪಟುಗಳು ತಮ್ಮ ಸಹಪಾಠಿಗಳಿಗೆ ಕ್ರೀಡೆಯ ಕುರಿತು ಅನುಭವ ಹಂಚಿಕೊಂಡು ಅವರಿಗೂ ಕ್ರೀಡೆಗಳಲ್ಲಿ ಆಸಕ್ತಿ ಮೂಡುವಂತೆ ಮಾಡಬೇಕು. ಈ ವರ್ಷ ಮೂರು ಕಾಲೇಜುಗಳ ತಂಡಗಳು ಕೂಟದಲ್ಲಿ ಪಾಲ್ಗೊಂಡಿವೆ. ಮುಂದಿನ ವರ್ಷ ಅಕ್ಕಮಹಾದೇವಿ ಮಹಿಳಾ ವಿವಿ ಕ್ರೀಡಾಕೂಟದಲ್ಲಿ ಕನಿಷ್ಠ 30 ತಂಡಗಳಾದರೂ ಭಾಗವಹಿಸಬೇಕು. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಮಾನಸಿಕ, ದೈಹಿಕ ಶ್ರಮತೆ ಹೆಚ್ಚುತ್ತದೆ. ಉದ್ಯೋಗದಲ್ಲಿಯೂ ಮೀಸಲಾತಿ ಸಿಗಲಿದೆ ಎಂದರು.

ಅಧ್ಯಕ್ಷತೆ ಪ್ರಾಚಾರ್ಯ ಡಾ. ಆರ್.ಎಸ್.ಕಲ್ಲೂರಮಠ ವಹಿಸಿದ್ದರು. ಕ್ರೀಡಾಕೂಟದಲ್ಲಿ ಅಖಿಲ ಭಾರತ ಅಂತರ್ ವಿವಿಗಳ ಕ್ರೀಡಾಕೂಟಕ್ಕೆ ಉತ್ತಮ ಪ್ರದರ್ಶನ ತೋರಿದ 8 ಜನ ಆಟಗಾರರನ್ನು ಅಕ್ಕಮಹಾದೇವಿ ಮಹಿಳಾ ವಿವಿ ತಂಡಕ್ಕೆ ಆಯ್ಕೆ ಮಾಡಲಾಯಿತು.

ಬಾಲ್ ಬ್ಯಾಡ್ಮಿಂಟನ್ ಅಂತಾರಾಷ್ಟ್ರೀಯ ಕ್ರೀಡಾಪಟು ಎಚ್.ಎಂ.ಪ್ರಶಾಂತಕುಮಾರ, ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಆಟಗಾರ, ಈರಣ್ಣ ಅವಟಿ ಅವರನ್ನು ಸನ್ಮಾನಿಸಲಾಯಿತು.

ಬಾಗಲಕೋಟೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಸುನೀಲ ನಡಕಟ್ಟಿ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಡಾ.ಸವಿತಾ ಅಣ್ಣೆಂಪ್ಪನವರ, ಆಯ್ಕೆ ಸಮಿತಿ ಸದಸ್ಯ ಮಂಜಪ್ಪ ಬಿ, ಶ್ರೀಧರ ಜೋಶಿ, ಗೋಪಾಲ ಲಮಾಣಿ, ಡಾ.ಭಾರತಿ ಹೊಸಟಿ, ಪ್ರೊ.ಎಂ.ಆರ್. ಜೋಶಿ, ಡಾ.ಸಿ.ಎಸ್.ಆನುರ, ಪ್ರೊ.ಲಕ್ಷ್ಮೀ ಮೋರೆ, ಪ್ರೊ. ಪಿ.ಬಿ. ಬಿರಾದಾರ ಇದ್ದರು.