ಕ್ರಸ್ಟ್ ಗೇಟ್ ಬದಲಾಯಿಸಲು ಮುಂದಾಗಿರುವ ತುಂಗಭದ್ರಾ ಬೋರ್ಡ್ ಅದಕ್ಕೆ ಅಂಟಿಕೊಂಡೇ ಆಪರೇಟ್ ಮಾಡಲು ಇರುವ ಚೈನ್ ಬದಲಾಯಿಸುವದನ್ನು ಟೆಂಡರ್ ನಲ್ಲಿ ಕೈಬಿಟ್ಟಿತು.
ಸೋಮರಡ್ಡಿ ಅಳವಂಡಿ ಕೊಪ್ಪಳ
ಎಮ್ಮೆ ತಂದು ಮಡಿಕೆಗೆ ಶಾಣ್ಯಾತನಾ ಮಾಡಿದರು ಅನ್ನುವಂಗೆ ಆಗಿದೆ ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ.ತುಂಗಭದ್ರಾ ಬೋರ್ಡ್ ಮಾಡಿದ ಸಣ್ಣತನದಿಂದ ಈಗ ಸಮಸ್ಯೆ ಎದುರಾಗಿದ್ದು, ತಜ್ಞರ ಸಮಿತಿ ಚೈನ್ ಸಹ ಬದಲಾಯಿಸಿ, ನೂತನ ಚೈನ್ ಅಳವಡಿಸುವಂತೆ ಸೂಚಿಸಿದ್ದರಿಂದ ಚೈನ್ ಅಳವಡಿಸುವುದಕ್ಕೂ ಮುಂದಾಗಿದೆ.
ಆಗಿದ್ದೇನು:ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಿತ್ತು ದೊಡ್ಡ ಅನಾಹುತವೇ ನಡೆಯುವಂತಹದ್ದನ್ನು ತಜ್ಞರ ಸಮಿತಿ ನೀರು ಇರುವಾಗಲೇ ಸ್ಟಾಪ್ ಲಾಗ್ ಅಳವಡಿಸಿ, ದುರಂತ ತಪ್ಪಿಸಿದ್ದರು. ಇದಾದ ನಂತರ 33 ಕ್ರಸ್ಟ್ ಗೇಟ್ ಗಳಲ್ಲಿ ಶೇ.50 ಕ್ಕೂ ಅಧಿಕ ಸವೆದಿವೆ. ಅದರಲ್ಲೂ ಅರ್ಧದಷ್ಟು ಶೇ.60-70 ರಷ್ಟು ಸವೆದಿವೆ ಎಂದು ತಜ್ಞರು ವರದಿ ಸಲ್ಲಿಸಿದ್ದರು. ಮೊದಲು ಗಂಭೀರವಾಗಿ ಹಾನಿಯಾಗಿರುವ ಕ್ರಸ್ಟ್ ಗೇಟ್ ಮಾತ್ರ ಬದಲಾಯಿಸಿ, ನಂತರ ಉಳಿದವುಗಳನ್ನು ಹಂತಹಂತವಾಗಿ ಬಲಾಯಿಸಲು ಬೋರ್ಡ್ ಮುಂದಾಯಿತು. ಆದರೆ, ಇದು ಮತ್ತೊಂದು ಅನಾಹುತಕ್ಕೆ ಕಾರಣವಾಗುತ್ತದೆ. ಹೀಗಾಗಿ, ಅಷ್ಟು ಕ್ರಸ್ಟ್ ಗೇಟ್ ಬದಲಾಯಿಸುವಂತೆ ತಜ್ಞರು ಶಿಫಾರಸ್ಸು ಮಾಡಿದ್ದರಿಂದ ಅದರಂತೆ ಅಷ್ಟು ಕ್ರಸ್ಟ್ ಗೇಟ್ ಬಲಾಯಿಸುವ ಕಾರ್ಯ ಪ್ರಾರಂಭಿಸಲಾಗಿದೆ.ಕ್ರಸ್ಟ್ ಗೇಟ್ ಬದಲಾಯಿಸಲು ಮುಂದಾಗಿರುವ ತುಂಗಭದ್ರಾ ಬೋರ್ಡ್ ಅದಕ್ಕೆ ಅಂಟಿಕೊಂಡೇ ಆಪರೇಟ್ ಮಾಡಲು ಇರುವ ಚೈನ್ ಬದಲಾಯಿಸುವದನ್ನು ಟೆಂಡರ್ ನಲ್ಲಿ ಕೈಬಿಟ್ಟಿತು. ಕ್ರಸ್ಟ್ ಗೇಟ್ ಅಳವಡಿಸಲು ₹41 ಕೋಟಿ ಟೆಂಡರ್ ಕರೆದರೂ ಚೈನ್ ಬದಲಾಯಿಸುವ ಗೋಜಿಗೆ ಹೋಗಲಿಲ್ಲ. ಕೇವಲ ಐದಾರು ಕೋಟಿ ಉಳಿಸಲು ಹಳೆಯ ಚೈನ್ ಬಳಕೆ ಮಾಡಿದರಾಯಿತು ಎನ್ನುವ ಸಣ್ಣತನ ಪ್ರದರ್ಶನ ಮಾಡಿತು. ಆದರೆ, ಈಗ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯ ನಡೆದ ವೇಳೆಯಲ್ಲಿ ಹಳೆಯ ಚೈನ್ ಮೂಲಕ ಆಪರೇಟ್ ಮಾಡುವ ಸಂದರ್ಭ ಅವುಗಳು ಸಹ ಸವೆದಿವೆ ಎನ್ನುವುದನ್ನು ತಜ್ಞರ ಸಮಿತಿ ತುಂಗಭದ್ರಾ ಬೋರ್ಡ್ ಗಮನಕ್ಕೆ ತಂದಿತು. ಈಗ ತುಂಗಭದ್ರಾ ಬೋರ್ಡ್ ಎಚ್ಚೆತ್ತುಕೊಂಡು ಚೈನ್ ಸಹ ಬದಲಾಯಿಸಿ ನೂತನ ಚೈನ್ ಅಳವಡಿಸಲು ಮುಂದಾಗಿದೆ.
ಇದಕ್ಕಾಗಿ ಪ್ರತ್ಯೇಕ ₹5.8 ಕೋಟಿ ಟೆಂಡರ್ ಕರೆಯಲಾಗಿದ್ದು, ಹಳೆ ಮಾದರಿಯ ಚೈನ್ ಇರುವುದರಿಂದ ಇವುಗಳ ನಿರ್ಮಾಣವೂ ಇಲ್ಲವಾಗಿದೆ. ಹೀಗಾಗಿ, ಅದೇ ಮಾದರಿಯಲ್ಲಿಯೇ ನಿರ್ಮಾಣಕ್ಕೆ ಚೆನ್ನೈ ಮೂಲದ ಕಂಪನಿಗೆ ನೀಡಲಾಗಿದೆ. ಹೀಗಾಗಿ, ಈಗ 66 ಚೈನ್ ಹೊಸದಾಗಿ ಅಳವಡಿಸಲು ಮುಂದಾಗಿದೆ.ಈಗಾಗಲೇ 33 ಕ್ರಸ್ಟ್ ಗೇಟ್ ಪೈಕಿ 18 ಕ್ರಸ್ಟ್ ಗೇಟ್ ಅಳವಡಿಸಿದ್ದು, ಮಾರ್ಚ್ ಅಂತ್ಯದ ವೇಳೆಗೆ 21 ಕ್ರಸ್ಟ್ ಗೇಟ್ ಅಳವಡಿಸಲಾಗುತ್ತದೆ. ಉಳಿದ ಕ್ರಸ್ಟ್ ಗೇಟ್ ಅಳವಡಿಸಲು ಟೆಂಡರ್ ನಿಯಮದ ಪ್ರಕಾರ ಮೇ ಅಂತ್ಯದವರೆಗೂ ಸಮಯವಕಾಶವಿದೆಯಾದರೂ ಅಷ್ಟರೊಳಗಾಗಿಯೇ ಅಳವಡಿಸಿ ಅದರೊಟ್ಟಿಗೆ ಹೊಸ ಚೈನ್ ಅಳವಡಿಸುವ ಕಾರ್ಯ ಆಗಬೇಕಾಗಿದೆ. ಇದನ್ನೇ ಮೊದಲೇ ಮಾಡಿದ್ದರೆ ಕ್ರಸ್ಟ್ ಗೇಟ್ ಅಳವಡಿಸುವ ವೇಳೆಯಲ್ಲಿಯೇ ಚೈನ್ ಅಳವಡಿಸುವ ಕಾರ್ಯವೂ ಒಟ್ಟೊಟ್ಟಿಗೆ ಆಗುತ್ತಿತ್ತು ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಎಂಜನಿಯರ್.
ಪೂರ್ವ ಮುಂಗಾರು ಅಬ್ಬರಿಸದಿರಲಿ:ಈಗ ತುಂಗಭದ್ರಾ ಕ್ರಸ್ಟ್ ಗೇಟ್ ಬದಲಾಯಿಸುತ್ತಿರುವ ಎಂಜನಿಯರ್ ಪ್ರಾರ್ಥನೆ ಮಾಡುತ್ತಿರುವುದು ಒಂದೇ, ಅದುವೇ ಪೂರ್ವ ಮುಂಗಾರು ಅಬ್ಬರಿಸದಿರಲಿ ಎಂದು. ಮೇ ಅಂತ್ಯದವರೆಗೂ ಮಳೆ ಅಲ್ಪಪ್ರಮಾಣದಲ್ಲಿ ಆದರೆ ಸಮಸ್ಯೆಯಾಗುವುದಿಲ್ಲ, ಆದರೆ, ಪ್ರವಾಹ ಬರುವಂತೆ ಆಗದಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.ಕ್ರಸ್ಟ್ ಗೇಟ್ ಅಳವಡಿಸುವ ವೇಳೆಯಲ್ಲಿ ಚೈನ್ ಅಳವಡಿಸುವುದಕ್ಕೂ ಯೋಜನೆ ರೂಪಿಸಿಕೊಳ್ಳಬೇಕಾಗಿತ್ತು. ಹಾಗೆ ಮಾಡಿಲ್ಲ, ಆದರೂ ಈಗಾಗಲೇ ಕ್ರಮವಹಿಸಿ, ₹5.8 ಕೋಟಿ ವೆಚ್ಚದಲ್ಲಿ ನೂತನ ಚೈನ್ ಸಿದ್ಧ ಮಾಡುವ ಟೆಂಡರ್ ಮಾಡಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್. ಎಸ್. ಬೋಸರಾಜು ತಿಳಿಸಿದ್ದಾರೆ.
ನೂತನ ಕ್ರಸ್ಟ್ ಗೇಟ್ ಅಳವಡಿಸಿದಂತೆ ಚೈನ್ ಸಹ ಅಳವಡಿಸಲು ತಜ್ಞರು ಸಲಹೆ ನೀಡಿದ್ದರಿಂದ ಅದನ್ನು ಸಹ ಅಳವಡಿಸುವುದಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.