ಅಲೋಶಿಯಸ್‌ ಕಾಲೇಜು ವಿದ್ಯಾರ್ಥಿಗಳ ನೆಚ್ಚಿನ ‘ಸಮೋಸ ಅಜ್ಜ’ ಇನ್ನಿಲ್ಲ

| Published : Sep 12 2024, 01:47 AM IST

ಅಲೋಶಿಯಸ್‌ ಕಾಲೇಜು ವಿದ್ಯಾರ್ಥಿಗಳ ನೆಚ್ಚಿನ ‘ಸಮೋಸ ಅಜ್ಜ’ ಇನ್ನಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ನಗುಮುಖದೊಂದಿಗೆ ಬಿಸಿ ಬಿಸಿ ಸಮೋಸ ಕೊಡುತ್ತಿದ್ದ ಕಾರಣಕ್ಕೆ ಬಹುಬೇಗನೆ ವಿದ್ಯಾರ್ಥಿಗಳನ್ನು ಆಕರ್ಷಿಸಿದ್ದರು. ದಿನವೂ ಮಧ್ಯಾಹ್ನ, ಸಂಜೆ ಅಲೋಶಿಯಸ್ ಕಾಲೇಜು ಆವರಣದಲ್ಲಿ ತಿಂಡಿಗಳನ್ನು ಮಾರುತ್ತಿದ್ದರಿಂದ ಮಕ್ಕಳಿಗೆ ನೆಚ್ಚಿನ ತಾತನೂ ಆಗಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಸಂತ ಅಲೋಶಿಯಸ್ ಕಾಲೇಜು ಕ್ಯಾಂಪಸ್‌ನಲ್ಲಿ ಕಳೆದ 40 ವರ್ಷಗಳಿಂದ ಸಮೋಸ ಮಾರುತ್ತಲೇ ವಿದ್ಯಾರ್ಥಿಗಳಿಂದ ‘ಸಮೋಸ ಅಜ್ಜ’ ಎಂದೇ ಕರೆಸಿಕೊಳ್ಳುತ್ತಿದ್ದ ಬಾದಾಮಿ ಮೂಲದ ಮಧುಕೇಶ್ವರ್ ಮಲ್ಲಿಕಾರ್ಜುನ ಮುಡೆಯಪ್ಪ ಮಳಗಿ (84) ವಯೋಸಹಜ ಅಸೌಖ್ಯದಿಂದ ನಿಧನರಾಗಿದ್ದಾರೆ.

ಸುಮಾರು 40 ವರ್ಷಗಳ ಹಿಂದೆ ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನಿಂದ ಅಳಿಯನೊಂದಿಗೆ ಮಳಗಿಯಿಂದ ಇವರು ಮಂಗಳೂರಿಗೆ ಬಂದಿದ್ದರು. ಬಾವುಟಗುಡ್ಡೆಯ ಅಲೋಶಿಯಸ್ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ಸಮೋಸ ಮಾರಲು ಆರಂಭಿಸಿದ್ದರು. ನಗುಮುಖದೊಂದಿಗೆ ಬಿಸಿ ಬಿಸಿ ಸಮೋಸ ಕೊಡುತ್ತಿದ್ದ ಕಾರಣಕ್ಕೆ ಬಹುಬೇಗನೆ ವಿದ್ಯಾರ್ಥಿಗಳನ್ನು ಆಕರ್ಷಿಸಿದ್ದರು. ದಿನವೂ ಮಧ್ಯಾಹ್ನ, ಸಂಜೆ ಅಲೋಶಿಯಸ್ ಕಾಲೇಜು ಆವರಣದಲ್ಲಿ ತಿಂಡಿಗಳನ್ನು ಮಾರುತ್ತಿದ್ದರಿಂದ ಮಕ್ಕಳಿಗೆ ನೆಚ್ಚಿನ ತಾತನೂ ಆಗಿದ್ದರು.

ಮಲ್ಲಿಕಾರ್ಜುನ ಅವರು ಪತ್ನಿಯೊಂದಿಗೆ ಮಂಗಳೂರಿನ ಕಾವೂರಿನಲ್ಲಿ ನೆಲೆಸಿದ್ದರು. ಇವರಿಗೆ ನಾಲ್ವರು ಮಕ್ಕಳಿದ್ದು, ಎಲ್ಲರೂ ಉದ್ಯೋಗದಲ್ಲಿದ್ದಾರೆ. ಆದರೂ ಇವರು ಮಾತ್ರ ವಯಸ್ಸಾದರೂ ವೃತ್ತಿಗೆ ನಿವೃತ್ತಿ ಕೊಡದೆ ನಿತ್ಯವೂ ತನ್ನ ಕಾಯಕ ನಡೆಸುತ್ತಿದ್ದರು.