ಕಠಿಣ ಶ್ರಮ ಹಾಕಿದರೆ ಭವಿಷ್ಯದ ಜೀವನ ಆನಂದಮಯ

| Published : Oct 25 2025, 01:00 AM IST

ಸಾರಾಂಶ

ಅಮೇರಿಕಾ ಮತ್ತಿತರ ಮುಂದುವರೆದ ದೇಶಗಳಿಗಿಂತ ಭಾರತದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರವಿದ್ಯಾರ್ಥಿಗಳು ಕಲಿಕೆಯ ಅವಧಿಯಲ್ಲಿ ಓದಿನ ಕಡೆಗೆ ಹೆಚ್ಚು ಗಮನ ಹರಿಸಿ ಕಠಿಣ ಶ್ರಮ ಹಾಕಿದರೆ ಭವಿಷ್ಯದ ಜೀವನ ಆನಂದಮಯವಾಗಿರುತ್ತದೆ ಎಂದು ಕರ್ನಾಟಕ ಕೇಡರ್ ನ ಐಪಿಎಸ್ ಅಧಿಕಾರಿ ಕೆ.ಆರ್. ನಗರದ ನಿವಾಸಿ ಕೆ.ಎಲ್.ಸೂರಜ್ ಹೇಳಿದರು.

ಪಟ್ಟಣದ ಆಲ್ಫಾ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿದ್ಯಾರ್ಥಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಕಲಿಕಾ ವಿದ್ಯಾರ್ಥಿಯು 18 ರಿಂದ 26ನೇ ವಯಸ್ಸಿನೊಳಗೆ ಶ್ರದ್ದೆಯಿಂದ ಕಲಿತರೆ ಉನ್ನತ ಶಿಕ್ಷಣ ಪಡೆಯುವುದರ ಜತೆಗೆ ಉತ್ತಮ ಹುದ್ದೆ ಪಡೆಯಬಹುದೆಂದು ಅವರು ತಿಳಿಸಿದರು. ಅಮೇರಿಕಾ ಮತ್ತಿತರ ಮುಂದುವರೆದ ದೇಶಗಳಿಗಿಂತ ಭಾರತದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಸಾಮಾಜಿಕ ಜಾಲ ತಾಣಗಳ ಸೆಳೆತಕ್ಕೆ ಒಳಗಾಗಿ ಜೀವನ ಮತ್ತು ಸಮಯವನ್ನು ವ್ಯರ್ಥ ಮಾಡದೆ ಜ್ಞಾನ ಸಂಪಾದನೆಯಲ್ಲಿ ತೊಡಗಬೇಕು ಎಂದು ಅವರು ಕಿವಿಮಾತು ಹೇಳಿದರು. ಆಲ್ಫಾ ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಸುಬ್ರಹ್ಮಣ್ಯ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಶಿಕ್ಷಣ ಕ್ಷೇತ್ರದ ಅವಕಾಶಗಳು ಹಾಗೂ ಸಾಧನೆಯ ಸಾಧ್ಯತೆಗಳ ಬಗ್ಗೆ ತಿಳಿಸಿಕೊಡಲು ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಐಪಿಎಸ್ ಪಾಸು ಮಾಡಿರುವ ಕೆ.ಎಲ್. ಸೂರಜ್ ಅವರು ನಮ್ಮ ಕಾಲೇಜಿಗೆ ಆಗಮಿಸಿ ಮಾರ್ಗದರ್ಶನ ನೀಡಿರುವುದು ಸಂತಸದ ಸಂಗತಿ ಎಂದರು.ಕೆ.ಎಲ್. ಸೂರಜ್ ಮತ್ತು ಪೋಷಕರನ್ನು ಸನ್ಮಾನಿಸಲಾಯಿತು.ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಎಂ. ರವಿಕುಮಾರ್, ಪ್ರಾಂಶುಪಾಲ ನವೀನ್, ಸೂರಜ್ ಪೋಷಕರಾದ ನಿಂಗರಾಜು, ಗೀತಾರಾಜು, ಪ್ರೇಮಮ್ಮ, ಬಿಳಿಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಕೆ.ಎಲ್. ರಮೇಶ್, ಸರ್ವೋದಯ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಗರುಡಗಂಭದ ಸ್ವಾಮಿ, ತಾಲೂಕು ರೈತ ಯುವ ವೇದಿಕೆ ಅಧ್ಯಕ್ಷ ರಾಮಪ್ರಸಾದ್ ಇದ್ದರು.