ಸಾರಾಂಶ
ಹಾನಗಲ್ಲ: ಮಕ್ಕಳಿಗೆ ಅಕ್ಷರಾಭ್ಯಾಸದ ಜತೆಗೆ ಪರಿಸರ ಪ್ರೀತಿಯ ಶಿಕ್ಷಣ ನೀಡಿದಲ್ಲಿ ಮಾತ್ರ ಭವಿಷ್ಯದಲ್ಲಿ ಕಾಡು ನಾಡು ಎರಡೂ ಒಳ್ಳೆಯ ರೀತಿ ಇರಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಂಯೋಜಕ ರಾಘವೇಂದ್ರ ಪಟಗಾರ ಹೇಳಿದರು.
ಹಾನಗಲ್ಲಿನ ಶಾಸಕರ ಮಾದರಿ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಮಕ್ಕಳಿಗಾಗಿ ಪರಿಸರ ಜಾಗೃತಿಯ ಪ್ರಬಂಧ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ನೆಲ, ಜಲ, ವಾಯು, ಕಾಡನ್ನು ಕಾಳಜಿಯಿಂದ ಬಳಸಿಕೊಳ್ಳಬೇಕು. ಭವಿಷ್ಯದ ಭಯವಿಲ್ಲದೆ ಇವನ್ನು ಹಾಳು ಮಾಡಿದರೆ ಅದು ಮನುಷ್ಯನ ಆತಂಕಕ್ಕೆ ಕಾರಣವಾಗುತ್ತದೆ. ಅದರ ದುಷ್ಪರಿಣಾಮ ಪ್ರಾಣಿ-ಪಕ್ಷಿಗಳ ಮೇಲೆಯೂ ಆಗುತ್ತದೆ. ಮಕ್ಕಳಿಗೆ ವಿಷ ಆಹಾರ ಉಣಿಸುತ್ತಿದ್ದೇವೆ. ಪ್ರಕೃತಿಯ ದೇವರಂತೆ, ಅದು ನಮ್ಮನ್ನು ರಕ್ಷಿಸುತ್ತದೆ. ನಾವು ಪರಿಸರವನ್ನು ರಕ್ಷಿಸಬೇಕು. ಇದು ಕೇವಲ ಸರ್ಕಾರದ ಕೆಲಸ ಅಲ್ಲ. ನಿಜವಾಗಿಯೂ ಸಮಾಜದ ಜವಾಬ್ದಾರಿ ಎಂದರು.ಬಿಆರ್‌ಪಿ ಗೀತಾ ಶೇಖರಸಾಲಿ ಮಾತನಾಡಿ, ಜೀವ ಸಂಕುಲ ನಮ್ಮ ಬದುಕಿನ ಭಾಗವಾಗಿದೆ. ಈ ಪರಿಸರದಲ್ಲಿ ಮನುಷ್ಯ ಮಾತ್ರ ಜೀವಿಸುತ್ತಿಲ್ಲ. ಆದರೆ ಪರಿಸರವನ್ನು ಪೂರ್ಣ ಪ್ರಮಾಣದಲ್ಲಿ ಹಾಳು ಮಾಡುತ್ತಿರುವವನು ಮನುಷ್ಯ. ಮನುಷ್ಯನ ಸ್ವಾರ್ಥಕ್ಕೆ ಇಡೀ ವಿಶ್ವದ ಜೀವ ಜಂತುಗಳೂ ಅಪಾಯಕ್ಕೆ ತಲುಪಲಿವೆ. ಪ್ರಕೃತಿಗೆ ವಿಷಪಾಶನ ಮಾಡಲಾಗುತ್ತಿದೆ. ಈಗಲಾದರೂ ಎಚ್ಚೆತ್ತುಕೊಳ್ಳೋಣ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ ಭೋಸಲೆ, ಮುಖ್ಯೋಪಾಧ್ಯಾಯ ಆರ್.ಬಿ. ರೆಡ್ಡಿ, ಮಹೇಶ ನಾಯಕ್, ಸುಧಾ ಎಚ್.ಡಿ., ಎಲ್.ಟಿ. ಜೋಶಿ, ಬಸವರಾಜ ತಿಳವಳ್ಳಿ, ಮಂಜುಳಾ ದುಂಡಣ್ಣನವರ, ಋಷಭ ದುಂಡಣ್ಣನವರ, ಬಸವರಾಜ ಮಲ್ನಾಡ್, ಚಿನ್ನಮ್ಮ ಬನ್ನಿಕೊಪ್ಪ, ಪದ್ಮಾವತಿ ಬೆಳಗಲಿ ಮೊದಲಾದವರಿದ್ದರು.ವಿಜೇತರು: ಪರಿಸರ ಕುರಿತು ಪ್ರಬಂಧ ಸ್ಪರ್ಧೆಯ ೮ನೇ ತರಗತಿ ವಿಭಾಗಗಳಲ್ಲಿ ಸಂಪತ್ ಹಲಗಣ್ಣನವರ ಪ್ರಥಮ, ಗಾಯತ್ರಿ ಚಂದಾಪುರ ದ್ವಿತೀಯ, ಅಮೃತಾ ಕಟ್ಟಿಮನಿ ತೃತೀಯ ಸ್ಥಾನ ಪಡೆದರು. ೫ನೇ ತರಗತಿ ವಿಭಾಗದಲ್ಲಿ ರಿಷಿತಾ ಹಂಚಿಮನಿ ಪ್ರಥಮ, ತನ್ಮಯಿ ಕೊಂಡೋಜಿ ದ್ವಿತೀಯ, ವೈಷ್ಣವಿ ಕೋರಿಶೆಟ್ಟರ ತೃತೀಯ ಸ್ಥಾನ ಪಡೆದರು. ೭ನೇ ತರಗತಿಯಲ್ಲಿ ರೀನಾ ಗೌಡರ ಪ್ರಥಮ ಸ್ಥಾನ, ಕಾವ್ಯಾ ದ್ವಿತೀಯ ಸ್ಥಾನ ಪಡೆದರು.