ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಸ್ವಸ್ಥವಾಗಿರುವ ಮನುಷ್ಯನನ್ನು ಆರೋಗ್ಯವಂತ ಎಂದು ವ್ಯಾಖ್ಯಾನಿಸಲಾಗಿದೆ.
ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಆಯುರ್ವೇದ ತಜ್ಞ
ಕನ್ನಡಪ್ರಭ ವಾರ್ತೆ ಗದಗದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಸ್ವಸ್ಥವಾಗಿರುವ ಮನುಷ್ಯನನ್ನು ಆರೋಗ್ಯವಂತ ಎಂದು ವ್ಯಾಖ್ಯಾನಿಸಲಾಗಿದೆ. ಬದಲಾದ ಜೀವನ ಶೈಲಿಯ ಕಾರಣದಿಂದ ಇಂದು ಆರೋಗ್ಯದ ಸಮಸ್ಯೆ ಕಾಡುತ್ತಿದೆ. ಆಹಾರ ಮತ್ತು ಆರೋಗ್ಯಕ್ಕೆ ನೇರ ಸಂಬಂಧವಿರುವುದರಿಂದ ಸಂತುಲಿತ ಹಾಗೂ ಋತುಮಾನಕ್ಕನುಗುಣವಾಗಿ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕೆಂದು ಆಯುರ್ವೇದ ತಜ್ಞ ಡಾ. ಜಿ.ಎಸ್. ಹಿರೇಮಠ ತಿಳಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಲಯದಲ್ಲಿ ಕಸಾಪ ವತಿಯಿಂದ ಜರುಗಿದ ಡಾ. ಶರಣಬಸಪ್ಪ ಕಳಕಪ್ಪ ಪಲ್ಲೇದ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ವಾತ, ಪಿತ್ತ, ಕಫಗಳ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಯೋಗ, ಧ್ಯಾನ, ವ್ಯಾಯಾಮಗಳ ಮೂಲಕ ಸದೃಢತೆಯನ್ನು ಕಾಯ್ದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಇಂದಿನ ಕಲಬೆರಕೆಯ ದಿನಮಾನಗಳಲ್ಲಿ ಪ್ರಜ್ಞಾಅಪರಾಧವನ್ನು ಮಾಡದೇ ಪ್ರಾಚೀನ ಆರೋಗ್ಯ ಪದ್ಧತಿಯನ್ನು ಮುಂದುವರೆಸಬೇಕು. ಆಹಾರ ಪ್ರಸಾದವಾದಾಗ ಅದೇ ಔಷಧಿಯಾಗುತ್ತದೆ ಎಂದರು.
ಯೋಗಾಚಾರ್ಯ ಕೆ.ಎಸ್. ಪಲ್ಲೇದ ಮಾತನಾಡಿ, ದೀರ್ಘಾಯುಷ್ಯಕ್ಕೆ ಯೋಗ ಮುಖ್ಯ ಕಾರಣವಾಗಿದ್ದು, ಬೆಳಗ್ಗೆ ಬೇಗನೇ ಎದ್ದು ಯೋಗಾಸನದ ಚಟುವಟಿಕೆಗಳನ್ನು ಮಾಡಬೇಕು. ಮನೆಯಲ್ಲಿ ಪೋಷಕರು ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ಆಹಾರದ ಅಭ್ಯಾಸಗಳನ್ನು ರೂಢಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಪ್ರತಿ ತಿಂಗಳಲ್ಲಿ ಬರುವ ಹಬ್ಬಗಳಲ್ಲಿ ವೈವಿಧ್ಯಮಯ ಆಹಾರವನ್ನು ತಯಾರಿಸುವ ಕ್ರಮ ಋತುಮಾನಕ್ಕನುಗುಣವಾಗಿ ವೈಜ್ಞಾನಿಕವಾಗಿದೆ. ಹಬ್ಬಗಳ ಮುಖ್ಯ ಉದ್ದೇಶವೇ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಕಾಪಾಡುವುದಾಗಿದೆ. ಆರೋಗ್ಯ ಶಿಕ್ಷಣ ಕಲಿಕೆಯ ಮುಖ್ಯ ಭಾಗವಾಗಬೇಕು. ಆರೋಗ್ಯದ ಅನಕ್ಷರತೆ ಅಧಿಕವಾಗಿದೆ. ಶಾಲಾ ಕಾಲೇಜುಗಳಿಗಿಂತ ಆಸ್ಪತ್ರೆಗಳೇ ಅಧಿಕವಾಗಿವೆ. ಇದು ಆರೋಗ್ಯದ ಬಗೆಗಿನ ನಮ್ಮ ಅಜ್ಞಾನವನ್ನು ಸೂಚಿಸುತ್ತದೆ ಎಂದರು.
ಡಾ. ಶರಣಬಸಪ್ಪ ಪಲ್ಲೇದ ಕುರಿತು ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ ಮಾತನಾಡಿದರು. ಮೈಸೂರಿನ ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಿಂದ ರಾಜಯೋಗಿ ಟಿ.ಕೃಷ್ಣಮಾಚಾರಿ ಪ್ರಶಸ್ತಿಯನ್ನು ಪಡೆದ ಯೋಗಾಚಾರ್ಯ ಕೆ.ಎಸ್. ಪಲ್ಲೇದ ಅವರನ್ನು ಸನ್ಮಾನಿಸಲಾಯಿತು.ಸತೀಶ ಚನ್ನಪ್ಪಗೌಡರ, ಶೇಖಣ್ಣ ಕಳಸಾಪೂರಶೆಟ್ರ, ಜಿ.ಎ. ಪಾಟೀಳ, ಎಂ.ಬಿ. ಚನ್ನಪ್ಪಗೌಡರ, ಸೈಯದ ಉಸ್ಮಾನ ಕೊಪ್ಪಳ, ಸಿ.ಎಂ. ಮಾರನಬಸರಿ, ನಿರ್ಮಲಾ ಪಾಟೀಲ, ಶಿವಾಜಿ ಕಾಂಬಳೇಕರ, ಶೈಲಜಾ ಗಿಡ್ನಂದಿ, ರತ್ನಾ ಪುರಂತರ, ಅರುಣ ರಾಜಪುರೋಹಿತ, ರವೀಂದ್ರ ಜೋಶಿ, ಅಶೋಕ ಗಿರಡ್ಡಿ, ಶಶಿಕಾಂತ ಕೊರ್ಲಹಳ್ಳಿ, ಶಂಕರಪ್ಪ ಗಾಂಜಿ, ಗಿರೀಶ ಪಂತರ, ಎಚ್.ಎಂ. ಗಣಾಚಾರಿ, ಯಲ್ಲಪ್ಪ ಹಂದ್ರಾಳ ಸೇರಿ ಪ್ರಮುಖರು ಇದ್ದರು. ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ರಾಹುಲ ಗಿಡ್ನಂದಿ ಸ್ವಾಗತಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.