ಇಂದಿನ ದಿನದಲ್ಲಿ ಅಡಕೆಯೊಂದಿಗೆ ಪರ್ಯಾಯ ಬೆಳೆಯನ್ನು ಬೆಳೆಯುವುದು ಅನಿವಾರ್ಯವಾಗಿದೆ. ಮೊದಲೆಲ್ಲ ಉಪಬೆಳೆಯಾಗಿ ಬೆಳೆಯುತ್ತಿದ್ದ ಕಾಳುಮೆಣಸು ಹಾಗೂ ಕಾಫಿಯನ್ನು ಬೆಳೆಯುವ ಜತೆಗೆ ಹೈನುಗಾರಿಕೆಯನ್ನು ಮಾಡಿ ಆರ್ಥಿಕವಾಗಿ ಸದೃಢರಾಗಬೇಕಾಗಿದೆ.

ಹಾರ್ಸಿಕಟ್ಟಾದಲ್ಲಿ ಕಾಫಿ, ಕಾಳುಮೆಣಸು ಮಾಹಿತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಇಂದಿನ ದಿನದಲ್ಲಿ ಅಡಕೆಯೊಂದಿಗೆ ಪರ್ಯಾಯ ಬೆಳೆಯನ್ನು ಬೆಳೆಯುವುದು ಅನಿವಾರ್ಯವಾಗಿದೆ. ಮೊದಲೆಲ್ಲ ಉಪಬೆಳೆಯಾಗಿ ಬೆಳೆಯುತ್ತಿದ್ದ ಕಾಳುಮೆಣಸು ಹಾಗೂ ಕಾಫಿಯನ್ನು ಬೆಳೆಯುವ ಜತೆಗೆ ಹೈನುಗಾರಿಕೆಯನ್ನು ಮಾಡಿ ಆರ್ಥಿಕವಾಗಿ ಸದೃಢರಾಗಬೇಕಾಗಿದೆ ಎಂದು ಕೊಚ್ಚಿ ಭಾರತೀಯ ಸಂಬಾರು ಮಂಡಳಿ ನಿರ್ದೇಶಕ ಪ್ರಸನ್ನ ಕೆರೆಕೈ ಹೇಳಿದರು.

ತಾಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕಾಫಿ ಮತ್ತು ಕಾಳುಮೆಣಸು ಕುರಿತು ನಡೆದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ, ಕಾಳುಮೆಣಸು, ಕಾಫಿ ಹಾಗೂ ಏಲಕ್ಕಿ ಬೆಳೆ ಇಲ್ಲಿ ಉತ್ಕೃಷ್ಟವಾಗಿ ಬೆಳೆಯುತ್ತದೆ. ಕಾಫಿ ಹಾಗೂ ಕಾಳುಮೆಣಸು ಬೆಳೆಯಲು ಪೂರ್ವ ಸಿದ್ದತೆ ಅವಶ್ಯ. ಯಾವ ತಳಿ ನಮ್ಮ ಭೂಮಿಗೆ ಸೂಕ್ತ ಎನ್ನುವುದನ್ನು ತಿಳಿದು ಬೆಳೆಯಬೇಕಾಗಿದೆ. ಮುಂದಿನ ದಿನದಲ್ಲಿ ರೈತರೊಂದಿಗೆ ಸ್ಪೈಸ್ ಬೋರ್ಡ್‌ ಸಭೆ ನಡೆಸಲು ಚಿಂತನೆ ನಡೆಸಲಾಗುತ್ತದೆ ಎಂದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ, ಕೃಷಿ ತಜ್ಞ ಕಿಶೋರ ಹೆಗಡೆ ಬೆಳ್ಳೇಕೇರಿ ಮಾತನಾಡಿ, ಕಾಳುಮೆಣಸು ಹಾಗೂ ಕಾಫಿ ಬೆಳೆಯಲು ಹೆಚ್ಚು ನಮ್ಮಲ್ಲಿ ಅವಕಾಶವಿದೆ. ಈ ಎರಡೂ ಬೆಳೆಯನ್ನು ಅಡಕೆ ತೋಟದಲ್ಲಿ ಬೆಳೆಯಬಹುದಾಗಿದೆ. ಇವುಗಳನ್ನು ಬೆಳೆಯಲು ತೋಟವನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಹೇಳಿದರು. ಬೆಳೆಯುವ ವಿಧಾನ, ತಳಿಗಳ ಆಯ್ಕೆ, ಪೋಷಕಾಂಶ ನಿರ್ವಹಣೆ, ರೋಗ ನಿಯಂತ್ರಗಳ ಕುರಿತು ಮಾಹಿತಿ ನೀಡಿ ರೈತರೊಂದಿಗೆ ಚರ್ಚೆ ನಡೆಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಅನಂತ ಹೆಗಡೆ ಗೊಂಟನಾಳ ಮಾತನಾಡಿ, ಸಂಘದಿಂದ ಕಾಳುಮೆಣಸು ಹಾಗೂ ಕಾಫಿ ಬೆಳೆಯಲು ಹೆಚ್ಚು ಪ್ರೋತ್ಸಾಹ ನೀಡಲಾಗುತ್ತದೆ. ಅಲ್ಲದೆ ಕಾಫಿ ಗಿಡ ಹಾಗೂ ಮೆಣಸಿನ ಬಳ್ಳಿಯನ್ನು ರಿಯಾಯಿತಿ ದರದಲ್ಲಿ ರೈತರಿಗೆ ನೀಡಲಾಗುತ್ತದೆ ಎಂದರು.

ಸಂಘದ ಉಪಾಧ್ಯಕ್ಷ ನರೇಂದ್ರ ಹೆಗಡೆ ಹೊಂಡಗಾಶಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಮುಖ್ಯಕಾರ್ಯನಿರ್ವಾಹಕ ದಿನೇಶ ಹೆಗಡೆ ಚಳ್ಳೆಹದ್ದ ಕಾರ್ಯಕ್ರಮ ನಿರ್ವಹಿಸಿದರು.