ಸಾರಾಂಶ
ಕ್ಷೇತ್ರದಿಂದ ಹೊರೆ ಕಾಣಿಕೆ ನಿರ್ವಹಣೆ, ನಗರ ಅಲಂಕಾರದ ಹೊಣೆ: ಧರ್ಮಸ್ಥಳ ಧರ್ಮಾಧಿಕಾರಿ ಘೋಷಣೆ
ಉಡುಪಿ: ಭಗವಂತ ಕೊಟ್ಟ ಈ ದೇಹವನ್ನು ಹೊರೆಯನ್ನಾಗಿ ಮಾಡಬಾರದು, ಭಕ್ತಿಯಿಂದ ಸೇವೆ ಮಾಡುವ ಮೂಲಕ ಈ ದೇಹವನ್ನು ಭಗವಂತನಿಗೆ ಅರ್ಪಿಸಿ ಹೊರೆ ಇಳಿಸಿಕೊಳ್ಳಬೇಕು, ಅದಕ್ಕೆ ಉಡುಪಿ ಕೃಷ್ಣಮಠದಲ್ಲಿ ನಡೆಯುವ ಪರ್ಯೋಯೋತ್ಸವ ಬಹಳ ಒಳ್ಳೆಯ ಅವಕಾಶ ಎಂದು ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.ನಗರದ ವಿದ್ಯೋದಯ ಶಾಲೆಯಲ್ಲಿ ಶುಕ್ರವಾರ, ಮುಂದಿನ ಜನವರಿಯಲ್ಲಿ ನಡೆಯಲಿರುವ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯೋಯೋತ್ಸವದ ಪೂರ್ವಭಾವಿ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅವರು ಪರ್ಯಾಯ ಸ್ವಾಗತ ಸಮಿತಿಯ ಗೌರವಾಧ್ಯಕ್ಷರೂ ಆಗಿದ್ದಾರೆ. ಉಡುಪಿಯ ಪರ್ಯಾಯೋತ್ಸವದ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಸೇರಿ ನಡೆಸುವ ಹೊರೆಕಾಣಿಕೆ ಸಮರ್ಪಣೆ ಇಲ್ಲಿ ಮಾತ್ರ ಇರುವ ಒಂದು ವೈಶಿಷ್ಟ್ಯಪೂರ್ಣ ಸೇವೆ. ಉಡುಪಿ ಮತ್ತು ಸುತ್ತಮುತ್ತಲಿನ ಊರುಗಳ ಭಕ್ತರು ಪರ್ಯಾಯೋತ್ಸವಕ್ಕೆ ಆಗಮಿಸುವವರ ಊಟಕ್ಕಾಗಿ ಬಹಳ ಪ್ರೀತಿಯಿಂದ ತರಕಾರಿ, ಧಾನ್ಯಗಳನ್ನು ತಲೆಮೇಲೆ ಹೊರೆ ಹೊತ್ತು ತಂದು ಅರ್ಪಿಸುವ ಈ ಸೇವೆ ದೇವರಿಗೆ ಬಹಲ ಇಷ್ಟವಾಗುತ್ತದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸಬೇಕು ಎಂದವರು ಕರೆ ನೀಡಿದರು.ಅನ್ನಸಂತರ್ಪಣೆಗೆ ಉಪಯೋಗ ಬಾರದ ಎಳನೀರಿನಂತಹ ಮತ್ತು ಬೇಗ ಹಾಳಾಗುವ ವಸ್ತುಗಳನ್ನು ನೀಡದೇ ಧೀರ್ಘ ಕಾಲ ಉಳಿಯುವ ತರಕಾರಿ, ತೆಂಗಿನಕಾಯಿ, ಧಾನ್ಯಗಳನ್ನು ತಂದೊಪ್ಪಿಸುವಂತೆ ಸಲಹೆ ಮಾಡಿದರು.
ಹೊರೆ ಕಾಣಿಕೆಯ ನಿರ್ವಹಣೆ, ಅದನ್ನು ಒಪ್ಪವಾಗಿ ಜೋಡಿಸುವ, ಪ್ರದರ್ಶಿಸುವ, ಹಾಳಾಗದಂತೆ ರಕ್ಷಿಸುವ ಸೇವೆಯನ್ನು ಧರ್ಮಸ್ಥಳ ಕ್ಷೇತ್ರದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ನಡೆಸುತ್ತಾರೆ ಎಂದ ಅವರು, ಪರ್ಯಾಯೋತ್ಸವದ ಸಂದರ್ಭ ಉಡುಪಿ ನಗರವನ್ನು ಅಲಂಕರಿಸುವ ಹೊಣೆಯನ್ನೂ ಕ್ಷೇತ್ರ ವತಿಯಿಂದ ನಿರ್ವಹಿಸುವುದಾಗಿ ಘೋಷಿಸಿದರು.ಋಣ ತೀರಿಸುವ ಅವಕಾಶ:ಹಿಂದೂ ಸಂಘಟನೆಗಳ ಪ್ರಮುಖರಾದ ಪ್ರೊ ಎಂ ಬಿ ಪುರಾಣಿಕ್ ಮಾತನಾಡಿ, ಕರಾವಳಿಯ ಪ್ರತಿಯೊಬ್ಬರ ಮೇಲೂ ಕೃಷ್ಣಮಠದ ಅನ್ನದ ಋಣವಿದೆ, ಆದ್ದರಿಂದ ಎಲ್ಲರೂ ಶಿರೂರು ಶ್ರೀಗಳ ಈ ಪರ್ಯಾಯೋತ್ಸವದಲ್ಲಿ ತಮ್ಮಿಂದಾಗುವ ಸೇವೆ ಸಲ್ಲಿಸುವ ಮೂಲಕ ಋಣ ತೀರಿಸುವ ಅವಕಾಶವಾಗಿದೆ ಎಂದರು.ಮನೆ ಮನೆಗೆ ಆಹ್ವಾನ:
ಸ್ವಾಗತ ಸಮಿತಿ ಅಧ್ಯಕ್ಷ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ತಮ್ಮ ಪರ್ಯಾಯ ಜನರ, ಭಕ್ತರ ಪರ್ಯಾಯವಾಗಿ ಆಚರಿಸುತಿದ್ದರು. ಅದೇ ಸಂಪ್ರದಾಯ ಮುಂದುವರಿಸಲು ನಿರ್ಧರಿಸಲಾಗಿದ್ದು, ಅವಿಭಜಿತ ದ.ಕ. ಜಿಲ್ಲೆಯ ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸಬೇಕು, ಈ ಜಿಲ್ಲೆಯ 243 ಗ್ರಾ.ಪಂ.ಗಳ 5.83 ಲಕ್ಷ ಮನೆಗಳಿಗೂ ಪರ್ಯಾಯೋತ್ಸವದ ಆಹ್ವಾನವನ್ನು ತಲುಪಿಸಲಾಗುವುದು, ಈಗಾಗಲೇ 2 ಲಕ್ಷ ಮನೆಗಳಿಗೆ ಆಹ್ವಾನ ತಲುಪಿಸಲಾಗಿದೆ ಎಂದರು.ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕರಾದ ಸುನೀಲ್ ಕುಮಾರ್, ಕಿರಣ್ ಕುಮಾರ್ ಕೊಡ್ಗಿ, ಕೃಷ್ಣಮಠದ ಗಣ್ಯಭಕ್ತರಾದ ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣ, ಹರಿಕೃಷ್ಣ ಪುನರೂರು, ರಘುಪತಿ ಭಟ್, ದಿನಕರ ಹೇರೂರು, ಉದಯಕುಮಾರ್ ಮುನಿಯಾಲು, ಪ್ರಸಾದರಾಜ್ ಕಾಂಚನ್, ಅರುಣಕುಮಾರ್ ಪುತ್ತಿಲ, ಧನಂಜಯ ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರ, ಗಣೇಶ್ ರಾವ್, ರಮೇಶ್ ವೈದ್ಯ, ಹರಿಯಪ್ಪ ಕೋಟ್ಯಾನ್, ಪ್ರಭಾಕರ ಪೂಜಾರಿ, ಪುರುಷೋತ್ತಮ ಶೆಟ್ಟಿ, ಬಿ.ಎನ್. ಶಂಕರ ಪೂಜಾರಿ, ಪದ್ಮಾ ರತ್ನಕರ್, ಮಹೇಶ್ ಅಂಚನ್, ಆನಂದ ಸುವರ್ಣ, ರಮೇಶ್ ಕಾಂಚನ್, ರಮೇಶ್ ರಾವ್, ನಾರಾಯಣ ಕಾಂಚನ್, ಡಾ, ಸತ್ಯನಾರಾಯಣ, ವಿಷ್ಣುಮೂರ್ತಿ ಭಟ್ ಮುಂತಾದವರಿದ್ದರು.ಹೊರೆಕಾಣಿಕೆ ಸಂಚಾಲಕ ಸುಪ್ರಸಾದ್ ಶೆಟ್ಟಿ ಸ್ವಾಗತಿಸಿದರು, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಬಾರ್ಕೂರು ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು, ಕೋಶಾಧಿಕಾರಿ ಜ.ಯಪ್ರಕಾಶ್ ಕೆದ್ಲಾಯ ವಂದಿಸಿದರು.