ಚಿಕ್ಕಮಗಳೂರು : ಭಾರೀ ಮಳೆಯಿಂದ ಅಪಾಯ ಪ್ರದೇಶದಲ್ಲಿರುವ ಜನರಿಗೆ ಬದಲಿ ಜಾಗದ ವ್ಯವಸ್ಥೆ ಕಲ್ಪಿಸಬೇಕು : ತಮ್ಮಯ್ಯ

| Published : Aug 01 2024, 01:53 AM IST / Updated: Aug 01 2024, 01:36 PM IST

ಚಿಕ್ಕಮಗಳೂರು : ಭಾರೀ ಮಳೆಯಿಂದ ಅಪಾಯ ಪ್ರದೇಶದಲ್ಲಿರುವ ಜನರಿಗೆ ಬದಲಿ ಜಾಗದ ವ್ಯವಸ್ಥೆ ಕಲ್ಪಿಸಬೇಕು : ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು ಭಾರೀ ಮಳೆಯಿಂದಾಗಿ ಗುಡ್ಡ ಕುಸಿಯುವ ಹಂತದಲ್ಲಿರುವ ನಿವಾಸಿಗಳಿಗೆ ಬದಲಿ ಜಾಗದ ವ್ಯವಸ್ಥೆ ಕಲ್ಪಿಸಬೇಕು. ರಸ್ತೆಯ ಮೇಲಿರುವ ಮರದ ಕೊಂಬೆಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

 ಚಿಕ್ಕಮಗಳೂರು :  ಭಾರೀ ಮಳೆಯಿಂದಾಗಿ ಗುಡ್ಡ ಕುಸಿಯುವ ಹಂತದಲ್ಲಿರುವ ನಿವಾಸಿಗಳಿಗೆ ಬದಲಿ ಜಾಗದ ವ್ಯವಸ್ಥೆ ಕಲ್ಪಿಸಬೇಕು. ರಸ್ತೆಯ ಮೇಲಿರುವ ಮರದ ಕೊಂಬೆಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಕಳವಾಸೆ, ಶಿರವಾಸೆ, ಹಡ್ಲಗದ್ದೆ, ಸುಗುಡುವಾನಿ ಹಾಗೂ ಗಾಳಿಗುಡ್ಡೆ ಗ್ರಾಮಗಳಲ್ಲಿ ಮಳೆಯಿಂದ ಆಗಿರುವ ಹಾನಿ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಬುಧವಾರ ವೀಕ್ಷಿಸಿ ಮಾತನಾಡಿದರು. ಶಿರವಾಸೆ ಸಮೀಪದ ಹಡ್ಲಗದ್ದೆ ಬಳಿ ಗಿರಿಶ್ರೇಣಿಯ ಗುಡ್ಡ ಕುಸಿಯುವ ಹಂತದಲ್ಲಿರುವ ಹಿನ್ನೆಲೆಯಲ್ಲಿ ಅನೇಕ ಕುಟುಂಬಗಳು ಜೀವಭಯದಿಂದ ಕಾಲ ಕಳೆಯುವಂತಾಗಿದೆ. ಹೀಗಾಗಿ ಬೇರೆಡೆ ಇಡೀ ಗ್ರಾಮವನ್ನು ಸ್ಥಳಾಂತರಿಸಲು ಮುಂದಾಗಿ ಭದ್ರತೆ ಒದಗಿಸಿಕೊಡಬೇಕು ಎಂದು ಸ್ಥಳೀಯರು ಮನವಿ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಒಂದೂವರೆ ದಶಕಗಳ ಹಿಂದೆ ಬಿದ್ದಿದ್ದ ಮಳೆ ಇದೀಗ ಬಂದಿದೆ. ಹಾಗಾಗಿ ಆತಂಕಕ್ಕೆ ಒಳಗಾಗಿದ್ದಾರೆ. ನಿವಾಸಿಗಳ ಒಪ್ಪಿಗೆಯಂತೆ ಕೂಡಲೇ ಜಾಗ ಗುರುತಿಸಿ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ಸ್ಥಳದಲ್ಲಿದ್ದ ಸ್ಥಳೀಯ ಅರಣ್ಯಾಧಿಕಾರಿ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡಲೇ ಕ್ರಮ ವಹಿಸಬೇಕೆಂದು ಸೂಚಿಸಿದರು.

ಶಿರವಾಸೆ ಮಾರ್ಗ ಮಧ್ಯೆ ರಸ್ತೆ ಕುಸಿದಿದೆ ಹಾಗೂ ಅಲ್ಲಲ್ಲಿ ಬೃಹದಾಕಾರದ ಮರಗಳು ಉರುಳಿರುವ ಪರಿಣಾಮ ಸಂಚಾರಕ್ಕೆ ಅಡಚಣೆಯಾಗಿದೆ. ಅಲ್ಲದೇ ವಿದ್ಯುತ್ ಕಂಬಗಳ ಮೇಲೆ ಮರದ ಕೊಂಬೆಗಳು ಬಿದ್ದಿರುವ ಕಾರಣ ವಾರಗಟ್ಟಲೇ ವಿದ್ಯುತ್ ಸಮಸ್ಯೆ ಎದುರಿಸುವಂತಾಗಿದೆ. ಇದಕ್ಕೆ ಪ್ರತಿಯಿಸಿದ ಶಾಸಕರು, ರಸ್ತೆಗೆ ಬಿದ್ದಿರುವ ಮರದ ಕೊಂಬೆಗಳನ್ನು ತೆರವು ಗೊಳಿಸಲು ಮುಂದಾಗಿದೆ. ವಿದ್ಯುತ್ ಕಂಬಗಳನ್ನು ಸರಿಪಡಿಸುವ ಕಾರ್ಯದಲ್ಲಿ ಮೆಸ್ಕಾಂ ನಿರತವಾಗಿದೆ ಎಂದು ಹೇಳಿದರು.

ಕಳೆದ ಅನೇಕ ದಿನಗಳಿಂದ ಸುರಿದಿರುವ ಧಾರಾಕಾರ ಮಳೆಗೆ ಶಿರವಾಸೆ ವ್ಯಾಪ್ತಿ ಅನೇಕ ಮನೆಗಳು ಕುಸಿದಿದೆ. ಅಂಥ ನಿವಾಸಿಗಳಿಗೆ ಸ್ಥಳೀಯವಾಗಿ ಆಶ್ರಯ ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಸಂಪೂರ್ಣ ಮನೆ ಕಳೆದುಕೊಂಡ ಅಜ್ಜಯ್ಯ ಸೇರಿದಂತೆ ಇಬ್ಬರಿಗೆ ತಲಾ 1.20 ಲಕ್ಷ ರು. ಅವರ ಖಾತೆಗೆ ಜಮೆ ಪತ್ರವನ್ನು ವಿತರಿಸಿದರು. ಮಳೆಯಿಂದ ಶಿರವಾಸೆ ಸುತ್ತಮುತ್ತಲು 50 ಲಕ್ಷ ರು. ಮೌಲ್ಯದ ಆಸ್ತಿ ಹಾನಿಗೊಂಡಿವೆ ಎಂದು ಲೋಕೋಪಯೋಗಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಸರ್ಕಾರ ಜಿಲ್ಲೆಯನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಿಸಿ ದರೆ ಹೆಚ್ಚಿನ ಮಟ್ಟದಲ್ಲಿ ಪರಿಹಾರ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.ಬಳಿಕ ಶಿರವಾಸೆ ಗ್ರಾಪಂ ಕಚೇರಿಗೆ ತೆರಳಿದ ಶಾಸಕರು ಗ್ರಾಮಸ್ಥರ ನಿವೇಶನದ ಹಕ್ಕುಪತ್ರ ಹಾಗೂ ಮೂಲಭೂತ ಸೌಕರ್ಯಗಳ ಸಮಸ್ಯೆ ಅಹವಾಲು ಪಡೆದುಕೊಂಡರು. 

ಈ ಬಗ್ಗೆ ಪ್ರತಿಕ್ರಿಯಿಸಿ ಮುಂದಿನ ಬಗರ್‌ಹುಕುಂ ಸಭೆಯಲ್ಲಿ ಅನೇಕ ವರ್ಷಗಳಿಂದ ವಾಸಿಸುತ್ತಿರುವ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ. ಸುಮಂತ್, ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್‌.ಕೆ. ತಾರಾನಾಥ್, ಶಿರವಾಸೆ ಗ್ರಾಪಂ ಅಧ್ಯಕ್ಷ ರಘುನಾಥ್, ಉಪಾಧ್ಯಕ್ಷೆ ರಾಧಮ್ಮ, ಸದಸ್ಯರಾದ ರವಿ, ಗಣೇಶ್, ವಿಮಲ, ತಾಲೂಕು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಪ್ರವೀಣ್‌ ಬೆಟ್ಟಗೆರೆ, ಬಗರ್‌ಹುಕುಂ ಸಮಿತಿ ಸದಸ್ಯ ಕೆಂಗೇಗೌಡ, ಗ್ಯಾರಂಟಿ ಪ್ರಾಧಿಕಾರದ ತಾಲೂಕು ಸದಸ್ಯ ನರೇಂದ್ರಗೌಡ, ಕಾಂಗ್ರೆಸ್ ಜಾಗರ ಹೋಬಳಿ ಅಧ್ಯಕ್ಷ ಪ್ರಸನ್ನ, ಮುಖಂಡರಾದ ಬಿ.ವಿ.ಕೃಷ್ಣಮೂರ್ತಿ, ಮನ್ಸೂರ್ ಇದ್ದರು.