ಪರ್ಯಾಯ ರಸ್ತೆ ಭರವಸೆ: ಹೆದ್ದಾರಿ ತಡೆ ಪ್ರತಿಭಟನೆ ಮುಂದೂಡಿಕೆ

| Published : Nov 13 2024, 12:08 AM IST

ಪರ್ಯಾಯ ರಸ್ತೆ ಭರವಸೆ: ಹೆದ್ದಾರಿ ತಡೆ ಪ್ರತಿಭಟನೆ ಮುಂದೂಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಇನ್ನೆರಡು ದಿನಗಳಲ್ಲಿ ಪಿಡಬ್ಲ್ಯೂಡಿ ಕಾರ್ಯ ನಿರ್ವಾಹಕ ಎಂಜಿನಿಯರ್ ಹಾಗೂ ಇತರ ಅಧಿಕಾರಿಗಳ ತಂಡ ಉಳಾಯಿಬೆಟ್ಟಿಗೆ ಭೇಟಿ ನೀಡಿ, ಈಗಿರುವ ಸೇತುವೆ ಬದಿಯಲ್ಲಿ ತಾತ್ಕಾಲಿಕವಾಗಿ ಮಣ್ಣಿನ ರಸ್ತೆ ನಿರ್ಮಿಸುವ ಬಗ್ಗೆ ಪರಿಶೀಲಿಸಲಾಗುವುದು. ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ಮಂಗಳೂರು ಎಸಿ ಹರ್ಷವರ್ಧನ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಉಳಾಯಿಬೆಟ್ಟಿನಿಂದ ಪೆರ್ಮಂಕಿ, ಮಲ್ಲೂರು, ಅಡ್ಯಾರು, ಬೆಂಜನಪದವು, ಬಿ.ಸಿ. ರೋಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಉಳಾಯಿಬೆಟ್ಟು ಮೇಲ್ಮನೆಯಲ್ಲಿರುವ ಕಿರು ಸೇತುವೆಯಲ್ಲಿ ಘನ ವಾಹನ ನಿಷೇಧಿಸಲಾಗಿದ್ದು, ಪರ್ಯಾಯ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಸೋಮವಾರ ಆಯೋಜಿಸಲಾಗಿದ್ದ ಗ್ರಾಮಸ್ಥರ ಹೆದ್ದಾರಿ ತಡೆ ಪ್ರತಿಭಟನೆಯನ್ನು ಜಿಲ್ಲಾಡಳಿತದ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಮಂಗಳೂರು ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ಉಳಾಯಿಬೆಟ್ಟು ಗ್ರಾಮ ಪಂಚಾಯ್ತಿ ಅಧ್ಯಕ್ಷರ ನಿಯೋಗದೊಂದಿಗೆ ಸೋಮವಾರ ಹಿರಿಯ ಅಧಿಕಾರಿಗಳು ಮಾತುಕತೆ ನಡೆಸಿದರು. ಸಂಚಾರ ವ್ಯವಸ್ಥೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಇನ್ನೆರಡು ದಿನಗಳಲ್ಲಿ ಪಿಡಬ್ಲ್ಯೂಡಿ ಕಾರ್ಯ ನಿರ್ವಾಹಕ ಎಂಜಿನಿಯರ್ ಹಾಗೂ ಇತರ ಅಧಿಕಾರಿಗಳ ತಂಡ ಉಳಾಯಿಬೆಟ್ಟಿಗೆ ಭೇಟಿ ನೀಡಿ, ಈಗಿರುವ ಸೇತುವೆ ಬದಿಯಲ್ಲಿ ತಾತ್ಕಾಲಿಕವಾಗಿ ಮಣ್ಣಿನ ರಸ್ತೆ ನಿರ್ಮಿಸುವ ಬಗ್ಗೆ ಪರಿಶೀಲಿಸಲಾಗುವುದು. ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ಮಂಗಳೂರು ಎಸಿ ಹರ್ಷವರ್ಧನ ಭರವಸೆ ನೀಡಿದರು.

ಉಳಾಯಿಬೆಟ್ಟಿನಲ್ಲಿ ಘಲ್ಗುಣಿ ನದಿಯ ಕಿರು ತೋಡಿಗೆ ನಿರ್ಮಿಸಲಾದ ಸೇತುವೆ ಶಿಥಿಲಗೊಂಡಿದ್ದರಿಂದ ಕೆಲ ವಾರಗಳ ಹಿಂದೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಈ ಭಾಗದ ನೂರಾರು ಮಂದಿ ಜನರಿಗೆ ತೀವ್ರ ಸಮಸ್ಯೆ ಉಂಟಾಗಿತ್ತು. ತಾತ್ಕಾಲಿಕವಾಗಿ ಮಣ್ಣಿನ ರಸ್ತೆ ನಿರ್ಮಿಸಲು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ನ.11ರಂದು ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆಗೆ ಗ್ರಾಪಂ ಅಧ್ಯಕ್ಷರ ನೇತೃತ್ವದಲ್ಲಿ ಸ್ಥಳೀಯ ಗ್ರಾಮಸ್ಥರು ತೀರ್ಮಾನಿಸಿದ್ದರು. ಇದೀಗ ಅಧಿಕಾರಿಗಳ ಸಕಾರಾತ್ಮಕ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್‌ ಪಡೆದುಕೊಂಡಿದ್ದಾರೆ.

ಸಭೆಯಲ್ಲಿ ತಹಸೀಲ್ದಾರ್, ಕಂದಾಯ ನಿರೀಕ್ಷಕ ಪೂರ್ಣಚಂದ್ರ, ಪೊಲೀಸ್ ಅಧಿಕಾರಿಗಳು, ಉಳಾಯಿಬೆಟ್ಟು ಗ್ರಾಪಂ ಅಧ್ಯಕ್ಷ ಹರಿಕೇಶ ಶೆಟ್ಟಿ ನಡಿಗುತ್ತು, ಉಪಾಧ್ಯಕ್ಷ ದಿನೇಶ್ ಕುಮಾರ್ ಬಜಿಲೊಟ್ಟು, ಸದಸ್ಯ ವಿಶ್ವನಾಥ ಶೆಟ್ಟಿ ಹಾಗೂ ಗ್ರಾಮದ ಪ್ರಮುಖರು ಇದ್ದರು.