ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಇಟ್ಟಂಗಿ ಭಟ್ಟಿಯಲ್ಲಿ ಮಾಲೀಕನಿಂದಲೇ ತೀವ್ರ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರು ಇನ್ನು ಮುಂದೆ ಬೇರೆ ಕಡೆ ಕೆಲಸಕ್ಕೆ ಹೋಗಬೇಕಿಲ್ಲ. ಅವರಿಗೆ ಮಾಜಿ ಶಾಸಕ ಆನಂದ ನ್ಯಾಮಗೌಡರ ಸಕ್ಕರೆ ಕಾರ್ಖಾನೆ ಅಥವಾ ಬಿಎಲ್‌ಡಿಇ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಇಟ್ಟಂಗಿ ಭಟ್ಟಿಯಲ್ಲಿ ಮಾಲೀಕನಿಂದಲೇ ತೀವ್ರ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರು ಇನ್ನು ಮುಂದೆ ಬೇರೆ ಕಡೆ ಕೆಲಸಕ್ಕೆ ಹೋಗಬೇಕಿಲ್ಲ. ಅವರಿಗೆ ಮಾಜಿ ಶಾಸಕ ಆನಂದ ನ್ಯಾಮಗೌಡರ ಸಕ್ಕರೆ ಕಾರ್ಖಾನೆ ಅಥವಾ ಬಿಎಲ್‌ಡಿಇ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದರು.ಶನಿವಾರ ಜಿಲ್ಲಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಕಾರ್ಮಿಕರನ್ನು ಭೇಟಿ ಮಾಡಿದ ಸಚಿವ ಎಂ.ಬಿ.ಪಾಟೀಲರು ಸಾಂತ್ವನ ಹೇಳಿದರು. ಅಲ್ಲದೇ, ವೈಯಕ್ತಿಕವಾಗಿ ತಲಾ ₹ 50 ಸಾವಿರ ಆರ್ಥಿಕ ನೆರವು ನೀಡಿದರು. ನೀವು ಇನ್ನು ಮುಂದೆ ಜಮಖಂಡಿ ತಾಲೂಕಿನಲ್ಲಿ ಕೆಲಸ ಮಾಡಲು ಉದ್ಯೋಗ ಕೊಡಿಸುವುದಾಗಿಯೂ ಅವರಿಗೆ ಭರವಸೆ ನೀಡಿದರು.
ಈ ವೇಳೆ ಕಾರ್ಮಿಕರಿಂದ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಅವರಿಗೆ ಆತ್ಮಸ್ಥೈರ್ಯ ತುಂಬಿದರು. ನಿಮಗೆ ಸರ್ಕಾರದಿಂದ ಸಕಲ ನೆರವು ಒದಗಿಸಲು ಕ್ರಮ ಕೈಗೊಳ್ಳುತ್ತೇನೆ. ಸರ್ಕಾರ ನಿಮ್ಮೊಂದಿಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ತಪ್ಪಿತಸ್ಥರಿಗೆ ಬುದ್ಧಿ ಕಲಿಸಲು ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ಘಟನೆಯ ಆಘಾತದಿಂದ ಕಾರ್ಮಿಕರು ಹೊರ ಬರಬೇಕು. ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ ಅವರು, ಆರೋಪಿಗಳು ಹೇಯ ಕೃತ್ಯ ಮಾಡುವ ಮೂಲಕ ದೌರ್ಜನ್ಯ ಎಸಗಿದ್ದಾರೆ. ಈ ಘಟನೆ ಬೆಳಕಿಗೆ ಬಂದಾಗ ನಾನು ಬೆಂಗಳೂರಿನಲ್ಲಿ ಸಭೆಯಲ್ಲಿದ್ದೆ. ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಭೆಯಲ್ಲಿದ್ದರು. ತಕ್ಷಣ ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿಯೊಂದಿಗೆ ಮಾತನಾಡಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಸೂಚನೆ ನೀಡಿದ್ದೆ. ಘಟನೆಯ ಬಳಿಕ ಭಯ ಮತ್ತು ಆಘಾತದಲ್ಲಿದ್ದ ಕಾರ್ಮಿಕರು ತಕ್ಷಣ ದೂರು ನೀಡಿಲ್ಲ. ಹೀಗಾಗಿ ಘಟನೆ ಗಮನಕ್ಕೆ ಬಂದ ನಂತರ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಮೊದಲು ಈ ಕಾರ್ಮಿಕರನ್ನು ಘಟನೆಯ ಆಘಾತದಿಂದ ಹೊರತರಲಾಗುವುದು ಎಂದು ಅವರು ಮಾಹಿತಿ ನೀಡಿದರು.ಈ ವೇಳೆ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಜಿಪಂ ಸಿಇಒ ರಿಷಿ ಆನಂದ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ, ಡಾ.ಮಹಾಂತೇಶ ಬಿರಾದಾರ, ವಿಜಯಪುರ ಗ್ರಾಮೀಣ ಸಿಪಿಐ ರಾಯಗೊಂಡ ಜಾನರ, ಮುಖಂಡರಾದ ಅಡಿವೆಪ್ಪ ಸಾಲಗಲ್ಲ, ಷಹಜಹಾನ್ ಮುಲ್ಲಾ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.