ಸಾರಾಂಶ
ಧಾರವಾಡ: ಪಂ. ರಾಜೀವ ತಾರಾನಾಥ ಅವರ ಮಾತು ಕಠೋರವಾಗಿದ್ದರೂ ತಾಯಿ ಮನಸ್ಸು ಆಗಿರುತ್ತಿತ್ತು. ಎಲ್ಲ ವಿಷಯಗಳಲ್ಲೂ ನೇರವಾಗಿ ಇರುತ್ತಿದ್ದರು. ಕೆಲವರಿಗೆ ಹಿಡಿಸದೇ ಹೋಗಿರಬಹುದು, ಆದರೆ, ಅವರ ಹೃದಯ ಮಾತ್ರ ಹಾಲಿನಂತಹದ್ದು ಎಂದು ಸರೋದವಾದಕ ಪಂ. ಫಯಾಜ ಖಾನ್ ನುಡಿದರು.
ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಸರೋದ ಕಲಾವಿದ ಪದ್ಮಶ್ರೀ ಪಂ. ರಾಜೀವ ತಾರಾನಾಥ ಅವರ ನುಡಿನಮನ ಸಭೆಯಲ್ಲಿ ಅವರು ಮಾತನಾಡಿ, ತಾರಾನಾಥ ಅವರು ವೇಳೆಗೆ, ಶಿಸ್ತಿಗೆ, ಕಲಿಕೆಗೆ ಹೆಸರಾದವರು. ಅದರಲ್ಲಿ ಎಂದೂ ರಾಜಿಯಾದವರಲ್ಲ. ನಮ್ಮಲ್ಲಿಯೇ ಅವರಿಗೇನು ಸಿಗಬೇಕಾಗಿತ್ತೋ ಅದು ಸಿಗಲಿಲ್ಲ. ಇದ್ದಾಗ ಅವರ ಸಂಗೀತ ಕೇಳಲು ಬರದವರು ಅವರು ಇಲ್ಲದಾಗ ಅವರ ಸಂಗೀತದ ಬಗ್ಗೆ ಮಾತಾಡುತ್ತೇವೆ. ನಮ್ಮಲ್ಲಿ ಈಗಲೂ ಸಂಗೀತದಿಂದ ಏನಾಗಬೇಕಾಗಿದೆ ಎಂದು ತಾತ್ಸಾರ ಇರುವುದು ಬೇಸರದ ಸಂಗತಿ ಎಂದರು.ಡಾ. ಮೃತ್ಯುಂಜಯ ಶೆಟ್ಟರ ನುಡಿನಮನ ಸಲ್ಲಿಸಿ, ಪಂ. ತಾರಾನಾಥ ಅವರು ನೆಲಮೂಲದ ಸಂಸ್ಕೃತಿಯನ್ನು ಎಂದೂ ಬಿಟ್ಟುಕೊಡಲಿಲ್ಲ. ಪವಿತ್ರ ಮತ್ತು ಶುದ್ಧವಾಗಿ ಬದುಕಿದವರು. ಎಲ್ಲ ಕಲಾವಿದರ ಬಗ್ಗೆ ಅಪಾರ ಗೌರವದಿಂದ ಕಾಣುತ್ತಿದ್ದರು. ಸಂಗೀತ ಕ್ಷೇತ್ರದ ಅಪರೂಪದ ವ್ಯಕ್ತಿತ್ವ ಅವರದು ಎಂದರು.
ಡಾ. ಶಾಂತಾರಾಮ ಹೆಗಡೆ ಮಾತನಾಡಿ, ವಿಸ್ಮಯ ವ್ಯಕ್ತಿತ್ವ ತಾರಾನಾಥ ಅವರದ್ದಾಗಿತ್ತು. ಅನೇಕ ರೂಪಗಳಲ್ಲಿ ಅವರನ್ನು ನೋಡಬಹುದು. ನನ್ನ ಆತ್ಮಸಾಕ್ಷಿಯಂತೆ ಬದುಕುತ್ತಿದ್ದೇನೆ ಎನ್ನುತ್ತಿದ್ದರು ಎಂದು ನುಡಿನಮನ ಸಲ್ಲಿಸಿದರು.ಡಾ. ಶಶಿಧರ ನರೇಂದ್ರ ಮಾತನಾಡಿ, ತಾರಾನಾಥ ಅವರು ಸಾಹಿತಿಗಳಾಗಿ ಮುಂದುವರಿದಿದ್ದರೆ ಇನ್ನೊಂದು ಜ್ಞಾನಪೀಠ ಅವರಿಂದ ಬರಲು ಸಾಧ್ಯತೆ ಇತ್ತು. ಸಾಹಿತ್ಯದಲ್ಲಿ ಸುಳ್ಳನ್ನು ಹೇಳಲಿಕ್ಕೆ ಸಾಧ್ಯತೆ ಇದೆ. ಸಂಗೀತದಲ್ಲಿ ಸುಳ್ಳು ಹೇಳಲು ಸಾಧ್ಯವಿಲ್ಲ ಎನ್ನುತ್ತಿದ್ದರು. ಸಂಗೀತಗಾರರಿಗೆ ಪ್ರೇರಣಾದಾಯಕವಾಗಿ ನಿಂತವರು ಎಂದರು. ಶಶಿಧರ ತೋಡಕರ್, ಪಂ. ಅರಣ್ಯಕುಮಾರ ಎಂ., ಆಕಾಶವಾಣಿ ನಿವೃತ್ತ ನಿರ್ದೇಶಕ ಸಿ.ಯು. ಬೆಳ್ಳಕ್ಕಿ, ಡಾ. ವೀರಣ್ಣ ರಾಜೂರ, ಎಂ.ಎಂ. ಚಿಕ್ಕಮಠ, ಡಾ. ಮಲ್ಲಿಕಾರ್ಜುನ ತರ್ಲಘಟ್ಟಿ ನುಡಿನಮನ ಸಲ್ಲಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸಂಘಟಿಸಿದರು. ಪ್ರಕಾಶ ಬಾಳಿಕಾಯಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ಡಾ. ಡಿ.ಎಂ. ಹಿರೇಮಠ, ಡಾ. ಎಸ್.ಎಂ. ಶಿವಪ್ರಸಾದ, ಕೆ.ಎಚ್. ನಾಯಕ, ಎ.ಎಲ್. ದೇಸಾಯಿ, ಮಹಾಂತೇಶ ನರೇಗಲ್ಲ, ಎಚ್.ಜಿ. ದೇಸಾಯಿ, ಪ್ರಮೀಳಾ ಜಕ್ಕಣ್ಣವರ, ಅನಿತಾ ಚಿಕ್ಕಮಠ ಎಂ.ಬಿ. ಹೆಗ್ಗೇರಿ, ಶಂಕರ ಕುಂಬಿ ಇದ್ದರು.