ಕೆರೆ ಹೂಳೆತ್ತಿದರೂ ನೀರಾವರಿ ಇಲ್ಲ

| Published : Apr 02 2024, 01:03 AM IST

ಕೆರೆ ಹೂಳೆತ್ತಿದರೂ ನೀರಾವರಿ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಸದ್ಯ ಕೆರೆಯಲ್ಲಿ ನೀರು ಸಾಕಷ್ಟಿದ್ದರೂ ಇಲಾಖೆ ಅಧಿಕಾರಿಗಳು ದನ-ಕರುಗಳಿಗೆ ಕಾಲುವೆ ಮೂಲಕ ನೀರು ಹರಿಸದೇ ಬೇಜವಾಬ್ದಾರಿ ತೋರುತ್ತಿದ್ದಾರೆ

ಮಹದೇವಪ್ಪ ಎಂ.ಸ್ವಾಮಿ ಶಿರಹಟ್ಟಿ

ತಾಲೂಕಿನ ರೈತರಿಗೆ ಕೆರೆ-ಕಟ್ಟೆಗಳ ಮುಖಾಂತರ ನೀರೊದಗಿಸಿ ರೈತರ ಉದ್ಧಾರ ಮಾಡಬೇಕಾದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಪ್ರತಿ ವರ್ಷವೂ ಕೆರೆಗಳ ಹೂಳೆತ್ತಲು ಕೋಟ್ಯಂತರ ರು. ಖರ್ಚು ಮಾಡಿದರೂ ತಾಲೂಕಿನಲ್ಲಿ ಯಾವುದೇ ಕೆರೆಗಳೂ ಸುಸ್ಥಿತಿಯಲ್ಲಿಲ್ಲ. ನೀರಾವರಿಗೆ, ಕುಡಿಯುವ ನೀರಿಗೆ ಯಾವುದೇ ರೀತಿಯ ಅನುಕೂಲ ಆಗುತ್ತಿಲ್ಲ.

ತಾಲೂಕಿನ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುವ ಮಜ್ಜೂರ, ಜಲ್ಲಿಗೇರಿ, ವಡವಿ ಹಾಗೂ ಲಕ್ಷ್ಮೇಶ್ವರ ಭಾಗದ ಬಾಲೇಹೊಸೂರ, ಶೆಟ್ಟಿಕೇರಿ ಸೇರಿದಂತೆ ಹಲವು ಕಡೆ ಸಣ್ಣ ನೀರಾವರಿ ಇಲಾಖೆಯವರು ಕಾಲುವೆ ದುರಸ್ತಿ, ಕೆರೆ ದುರಸ್ತಿ, ಹೂಳೆತ್ತುವುದು, ಬದು ನಿರ್ಮಾಣ, ಬಾಂದಾರ ನಿರ್ಮಾಣ, ಗೇಟ ಅಳವಡಿಕೆ ಸೇರಿದಂತೆ ಪ್ರತಿ ವರ್ಷವೂ ಅನೇಕ ಕಾಮಗಾರಿ ಕೈಗೊಂಡಿದ್ದರೂ ಯಾವ ಕಾಮಗಾರಿಗಳು ಪರಿಪೂರ್ಣಗೊಂಡಿಲ್ಲ ಎನ್ನುವ ಗಂಭೀರ ಆರೋಪ ರೈತರಿಂದ ಕೇಳಿಬರುತ್ತಿದ್ದು, ಜತೆಗೆ ನಮಗೆ ನೀರಾವರಿ ಸೌಲಭ್ಯ ದೊರೆಯುತ್ತಿಲ್ಲ ಎಂಬುದು ರೈತರ ದೂರು.

ಕೆರೆ ತುಂಬಿದ್ದರೂ ದನ-ಕರುಗಳಿಗೆ ನೀರಿಲ್ಲ: ತಾಲೂಕಿನ ಮಜ್ಜೂರ ಗ್ರಾಮದಲ್ಲಿರುವ ಮಜ್ಜೂರ ಕೆರೆ ೮೭.೨೭ಚಕಿಮೀ ಕೆರೆಯ ಜಲಾನಯನ ಪ್ರದೇಶವಾಗಿದ್ದು, ೭೨೦.೫೨ ಹೆಕ್ಟೇರ್ ಕ್ಷೇತ್ರಕ್ಕೆ ನೀರು ಸರಬರಾಜಾಗುತ್ತಿದ್ದು, ೯.೯೦ ಕಿಮೀ ಕಾಲುವೆ ಇದ್ದು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಬೃಹತ್ ಪ್ರಮಾಣದ ಕೆರೆ ನೀರು ರೈತರಿಗೆ ಉಪಯೋಗವಾಗದಂತಾಗಿದೆ. ಸದ್ಯ ಕೆರೆಯಲ್ಲಿ ನೀರು ಸಾಕಷ್ಟಿದ್ದರೂ ಇಲಾಖೆ ಅಧಿಕಾರಿಗಳು ದನ-ಕರುಗಳಿಗೆ ಕಾಲುವೆ ಮೂಲಕ ನೀರು ಹರಿಸದೇ ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಮಜ್ಜೂರ, ಮಾಚೇನಹಳ್ಳಿ, ತೆಗ್ಗಿನ ಭಾವನೂರ, ಕುಸಲಾಪೂರ ಗ್ರಾಮಗಳ ಸಾವಿರಾರು ಜನ ರೈತರ ಜಮೀನುಗಳಲ್ಲಿ ಸದ್ಯ ಗೋವಿನ ಜೋಳ, ಅಲಸಂದಿ, ಶೇಂಗಾ, ಈರುಳ್ಳಿ ಸೇರಿದಂತೆ ಇನ್ನಿತರ ಮಳೆಯಾಶ್ರಿತ ಬೆಳೆಗಳಿದ್ದು, ಸದ್ಯ ಮಳೆ ಇಲ್ಲದೇ ಒಣಗಲಾರಂಭಿಸಿವೆ. ಸುಮಾರು ದಿನಗಳಿಂದ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತುರ್ತು ಕಾಲುವೆ ಮುಖಾಂತರ ನೀರು ಹರಿಸುವಂತೆ ಮನವಿ ಮಾಡಿದರೂ ಕುಂಟು ನೆಪ ಹೇಳುತ್ತಾ ರೈತರ ಜೀವ ಹಿಂಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೂತು ಹೋದ ಕಾಲುವೆ: ೯.೯೦ ಕಿಮೀ ಉದ್ದದ ಮಜ್ಜೂರ ಕೆರೆಯ ಕಾಲುವೆ ದುರಸ್ತಿಗೆ ಎಷ್ಟೇ ಬಾರಿ ಹಣ ಖರ್ಚು ಮಾಡಿದರೂ ಕೂಡ ಕಾಲುವೆಗಳ ಸುತ್ತಲೂ ಹಾವಿನ ಹುತ್ತದಂತೆ ಜಾಲಿಕಂಠಿ, ಇತರೆ ಗಿಡ ಗಂಟಿಗಳು ಬೆಳೆದು ನೀರು ಹರಿಯದಂತಾಗಿದೆ. ಒಂದೊಮ್ಮೆ ರೈತರ ಒತ್ತಾಯಕ್ಕೆ ಮಣಿದು ಕಾಲುವೆ ಮೂಲಕ ನೀರು ಹರಿಸಲು ಇಲಾಖೆ ಮುಂದಾದರೂ ಕೂಡ ನೀರು ಮಾತ್ರ ಎಲ್ಲಿಗೆ ತಲುಪಬೇಕೋ ಅಲ್ಲಿಗೆ ತಲುಪುವುದೇ ಇಲ್ಲ. ಕಾಲುವೆ ಒಳಗೆ ಕೊಳಚೆ ತುಂಬಿ ಗಲೀಜಾಗಿದ್ದು, ದನ-ಕರುಗಳು ಕೂಡ ನೀರು ಕುಡಿಯುತ್ತಿಲ್ಲ ಎನ್ನುವ ಆರೋಪಗಳು ಗ್ರಾಮದ ರೈತರಿಂದ ಕೇಳಿ ಬರುತ್ತಿವೆ.

ಕೆರೆ ಮತ್ತು ಕಾಲುವೆ ದುರಸ್ತಿ ಹೆಸರಿನಲ್ಲಿ ಪ್ರತಿವರ್ಷ ಲಕ್ಷಗಟ್ಟಲೇ ಹಣ ಖರ್ಚು ಮಾಡುವ ಅಧಿಕಾರಿಗಳು ರೈತರ ಸಮಸ್ಯೆಗೆ ಮಾತ್ರ ಸ್ಪಂದಿಸುತ್ತಿಲ್ಲ. ಸದ್ಯ ಕೆರೆ ತುಂಬಿದ್ದು, ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೆರೆಯಲ್ಲಿನ ನೀರು ರೈತರಿಗೆ ಉಪಯೋಗವಾಗುತ್ತಿಲ್ಲ. ಈ ಭಾಗದಲ್ಲಿ ಕೆರೆ ಇದ್ದು ಇಲ್ಲದಂತಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಮಜ್ಜೂರ ಕೆರೆಗೆ ಪೈಪ್‌ಲೈನ್ ಜೋಡಣೆ ಮಾಡಿ ಕೆರೆ ಮೂಲಕ ನೀರು ತುಂಬಿಸುವ ಯೋಜನೆಯಡಿ ಇಲಾಖೆಗೆ ಯಾವುದೇ ಅನುದಾನ ಬಂದಿಲ್ಲ. ಸಧ್ಯ ಕೆರೆಯಲ್ಲಿ ನೀರಿದ್ದರೂ ಕಾಲುವೆಗಳು ಸೋರುತ್ತಿದ್ದು, ದುರಸ್ತಿಗೆ ಅನುದಾನ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಯಾವುದೇ ಅನುದಾನ ನೀಡಿಲ್ಲ. ಒಂದೊಮ್ಮೆ ರೈತರ ಒತ್ತಾಯಕ್ಕೆ ಮಣಿದು ನೀರು ಹರಿಸಿದರೂ ರೈತರ ಜಮೀನುಗಳಿಗೆ ತಲುಪುವುದಿಲ್ಲ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಪ್ರವೀಣ ಪಾಟೀಲ ಹೇಳಿದರು.

ರೈತರು ಎಲ್ಲೆಂದರಲ್ಲಿ ಸಾಲ, ಸೋಲ ಮಾಡಿ ಬೀಜ, ಗೊಬ್ಬರ, ಕಳೆ ಅಂತ ಹಣ ಖರ್ಚು ಮಾಡಿದ್ದು, ಖರ್ಚು ಮಾಡಿದ ಹಣ ಕೂಡ ಮರಳಿ ಬರದಂತಾಗಿದೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮಾತ್ರ ಒಮ್ಮೆಯೂ ಈ ಕೆರೆಯತ್ತ ತಿರುಗಿ ನೋಡದೇ ರೈತರ ಗೋಳು ಆಲಿಸದೇ ಕಣ್ಮುಚ್ಚಿ ಕುಳಿತಿದ್ದು, ರೈತರ ಹೊಲದಲ್ಲಿಯ ಬೆಳೆ ಹಾನಿಗೆ ಇವರೇ ನೇರ ಹೊಣೆ ಎಂದುಮಜ್ಜೂರ ಗ್ರಾಮದ ಮುಖಂಡ ಬಸವರಾಜ ಮುಂಡವಾಡ ಹೇಳಿದರು.