ಸಾರಾಂಶ
ಕಾರವಾರ: ಶೂನ್ಯ ಬಡ್ಡಿದರ ಹಾಗೂ ಶೇ. 3 ಬಡ್ಡಿದರಲ್ಲಿ ರೈತರಿಗೆ ಸಾಲದ ಮಿತಿಯನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಮಾಡಿದ್ದರೂ ರೈತರಿಗೆ ಮಾತ್ರ ಇದರ ಪ್ರಯೋಜನ ದೊರೆಯುತ್ತಿಲ್ಲ. ರೈತರು ಕಚೇರಿಗಳಿಗೆ ಅಲೆದಾಡುತ್ತಲೇ ಇದ್ದಾರೆ.ರಾಜ್ಯದ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಶೂನ್ಯ ಬಡ್ಡಿದರಲ್ಲಿ ರೈತರಿಗೆ ನೀಡುವ ಅಲ್ಪಾವಧಿ ಕೃಷಿ ಸಾಲದ ಮಿತಿಯನ್ನು ₹3 ಲಕ್ಷಗಳಿಂದ ₹5 ಲಕ್ಷಗಳಿಗೆ ಏರಿಸಿತ್ತು. ಅದೇ ರೀತಿ ಶೇ. 3ರಷ್ಟು ಬಡ್ಡಿ ದರದಲ್ಲಿ ನೀಡುತ್ತಿದ್ದ ಸಾಲದ ಮಿತಿಯನ್ನು ₹10 ಲಕ್ಷಗಳಿಂದ ₹15 ಲಕ್ಷಗಳಿಗೆ ಏರಿಸಿ ಸರ್ಕಾರ ಆದೇಶ ಮಾಡಿತ್ತು. 2023ರ ಸೆ. 8ರಂದು ಸರ್ಕಾರ ಈ ಬಗ್ಗೆ ಸಹಕಾರಿ ಇಲಾಖೆಗೆ ಆದೇಶ ನೀಡಿತ್ತು. ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಶಿವರಾಮ ಗಾಂವಕರ ಅವರು 2024ರ ಜು. 20ರಂದು ಈ ಕುರಿತು ಮಾಹಿತಿ ಹಕ್ಕಿನಡಿ ಪ್ರಶ್ನಿಸಿದರು. ನಂತರ ಜು. 27ರಂದು ಸಹಕಾರಿ ಇಲಾಖೆ ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್ ಮತ್ತು ಸಹಕಾರಿ ನಿಬಂಧಕರಿಗೆ ಸರ್ಕಾರಿ ಆದೇಶವನ್ನು ನೀಡಿತು. ಆದರೆ 2023- 24ನೇ ಸಾಲಿಗೆ ರೈತರಿಗೆ ಸಿಗಬೇಕಾದ ಸಾಲವನ್ನು ಸಹಕಾರಿ ಇಲಾಖೆ 2024- 25ನೇ ಸಾಲಿಗೂ ವಿತರಿಸದೆ ಇರುವುದು ಬೆಳಕಿಗೆ ಬಂದಿದೆ. ಇದಲ್ಲದೆ ಯಾವುದೆ ಸಹಕಾರಿ ಸಂಘಗಳಿಗೆ ಈ ಸುತ್ತೋಲೆಯನ್ನೇ ಕಳುಹಿಸಲಾಗಿಲ್ಲ ಎನ್ನುವುದೂ ತಿಳಿದುಬಂದಿದೆ. ಸರ್ಕಾರ ಸಾಲದ ಮಿತಿ ಹೆಚ್ಚಿಸಿ ಆದೇಶ ಮಾಡಿರುವುವ ಬಗ್ಗೆ ಮಾಹಿತಿ ಪಡೆದ ರೈತರು ಸಹಕಾರಿ ಸಂಘಗಳಿಗೆ ಎಡತಾಕುತ್ತಲೇ ಇದ್ದಾರೆ. ಆದರೆ ರೈತರಿಗೆ ಮಾತ್ರ ಸರ್ಕಾರಿ ಆದೇಶದ ಪ್ರಯೋಜನ ದೊರೆಯುತ್ತಿಲ್ಲ. ಈ ಕುರಿತು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಮ ಗಾಂವಕರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ. ಉತ್ತರ ಪ್ರಾಂತದ ಪ್ರಧಾನ ಕಾರ್ಯದರ್ಶಿ ಮಾಧವ ಹೆಗಡೆ, ಅಂಕೋಲಾ ತಾಲೂಕು ಅಧ್ಯಕ್ಷ ರಾಘವೇಂದ್ರ ಗಾಂವಕರ ಇದ್ದರು.
ನಿರ್ಲಕ್ಷ್ಯ: ಇದುವರೆಗೂ ಸಾಲ ನೀಡದೆ, ಸುತ್ತೋಲೆಯನ್ನೂ ಸಹಕಾರಿ ಸಂಘಗಳಿಗೆ ಕಳುಹಿಸದೆ ಇರುವುದು ರೈತರ ಮೇಲಿನ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಸಾಲ ವಿತರಣೆಗೆ ಸಹಕಾರಿ ಸಂಘಕ್ಕೆ ಕೂಡಲೇ ಆದೇಶ ನೀಡುವಂತೆ ಒತ್ತಾಯಿಸುತ್ತೇನೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಶಿವರಾಮ ಗಾಂವಕರ ತಿಳಿಸಿದರು.