ಸಾರಾಂಶ
ಕನ್ನಡಪ್ರಭ ವಾರ್ತೆ ಸರಗೂರು
ಕೋಟೆಯಿಂದ ಬೇರ್ಪಟ್ಟು ನೂತನ ತಾಲೂಕಾಗಿ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಜ.೧೭ರಂದು ‘ಸರಗೂರು ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನ’ಆಯೋಜಿಸಲಾಗಿದ್ದು, ಒಂದು ದಿನದ ನುಡಿ ಜಾತ್ರೆಗೆ ಭರದ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಂದ ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ನುಡಿಜಾತ್ರೆ ಆಯೋಜಿಸಲು ತೀರ್ಮಾನಿಸಲಾಗಿದ್ದು, ಅಲ್ಲಿನ ವೇದಿಕೆಗೆ ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ನಾಮಕರಣ ಮಾಡಲಾಗಿದೆ.
ಶಾಸಕರು, ಅರಣ್ಯ ಮತ್ತು ಜಂಗಲ್ ರೆಸಾರ್ಟ್ಸ್ ನಿಗಮದ ಅಧ್ಯಕ್ಷರೂ ಆದ ಅನಿಲ್ ಚಿಕ್ಕಮಾದು ಅವರು ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಪಟ್ಟಣದಲ್ಲಿ ಮಂಗಳವಾರ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕಸಾಪ ನಿಕಟ ಪೂರ್ವ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ತಿಳಿಸಿದರು.ಕಾರ್ಯಕ್ರಮದ ವಿವರ- ಜ. 17ರಂದು ಬೆಳಗ್ಗೆ 9 ರಿಂದ 10.30ರವರೆಗೆ ಮೆರವಣಿಗೆ ಇರಲಿದೆ. ನಂತರ 11.30 ರಿಂದ 12.30 ರವರೆಗೆ ವೇದಿಕೆ ಕಾರ್ಯಕ್ರಮ, 12.30 ರಿಂದ ಮಧ್ಯಾಹ್ನ 1ರವರೆಗೆ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ. ನಂತರ ಸಮ್ಮೇಳನದ ಅಧ್ಯಕ್ಷರ ಭಾಷಣ. ನಂತರ ಮಧ್ಯಾಹ್ನ 2 ರಿಂದ ವಿಚಾರಗೋಷ್ಠಿಗಳು ಇರಲಿವೆ. ಮೊದಲನೇ ಗೋಷ್ಠಿಯಲ್ಲಿ ಸರಗೂರು ತಾಲೂಕು ದರ್ಶನ, ನಂತರದ ಗೋಷ್ಠಿಯು ಸರಗೂರು ತಾಲೂಕಿನ ಸಾಹಿತ್ಯ, ಸಾಂಸ್ಕೃತಿಕ ನೆಲೆ-ಹಿನ್ನೆಲೆ ಕುರಿತು ಇರಲಿದೆ ಎಂದು ಹೇಳಿದರು.
ಸಮ್ಮೇಳನದ ಕಾರ್ಯನಿರ್ವಹಣಾ ಸಮಿತಿಯ ಸದಸ್ಯರಾದ ಪಿ. ರವಿ ಮಾತನಾಡಿ, ಸಂಜೆ 4 ಕ್ಕೆ ತಾಲೂಕಿನ ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದನಾ ಸಮಾರಂಭ ನಂತರ ಸಮ್ಮೇಳನದ ಸಮಾರೋಪ ಸಮಾರಂಭ ಇರಲಿದೆ. ಬಳಿಕ ಮಿಮಿಕ್ರಿ ಗೋಪಿ ಹಾಗೂ ಜಿ ಕನ್ನಡ ವಾಹಿನಿಯ ಹಾಸ್ಯ ಕಲಾವಿದರಿಂದ ಹಾಸ್ಯೋತ್ಸವ ಕಾರ್ಯಕ್ರಮ ಇರಲಿದೆ. ಇದಲ್ಲದೆ ಇದೇ ಸಂದರ್ಭದಲ್ಲಿ ಸಮ್ಮೇಳನದ ಸವಿನೆನಪಿಗೆ ಸ್ಮರಣ ಸಂಚಿಕೆ ಬಿಡುಗಡೆಯಾಗಲಿದೆ ಎಂದರು.ಮೆರವಣಿಗೆ - ಕಸಾಪ ತಾಲೂಕು ಅಧ್ಯಕ್ಷ ಎಂ. ಕೆಂಡಗಣ್ಣಸ್ವಾಮಿ ಮಾತನಾಡಿ, ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸುವ ಹಿನ್ನೆಲೆ ಈಗಾಗಲೇ ಹಲವು ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಜವಾಬ್ದಾರಿಯನ್ನು ಸಮಿತಿಗಳಿಗೆ ನೇಮಿಸಲಾಗಿದೆ. ಮೆರವಣಿಗೆಯೂ ನಾಮಧಾರಿಗೌಡ ಸಮುದಾಯ ಭವನದಿಂದ ಹೊರಟು ಕೆಇಬಿ ಕಚೇರಿ, ಬಸ್ ನಿಲ್ದಾಣದ ಮೂಲಕ ಒಂದನೇ ಮುಖ್ಯರಸ್ತೆ, ಎರಡನೇ ಮುಖ್ಯ ರಸ್ತೆ ಮುಖಾಂತರ ಹಾದು ವೇದಿಕೆ ತಲುಪಲಿದೆ. ವಿವಿಧ ಬಗೆಯ 10 ಕಲಾ ತಂಡಗಳು, ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯ ಸೇರಿದಂತೆ ಕಲೆಯನ್ನು ಬಿಂಬಿಸುವ 6 ಸ್ತಬ್ಧಚಿತ್ರಗಳು ಹಾಗೂ ನಾಡು-ನುಡಿಯ ಸಂಕೇತವಾಗಿ ಭುವನೇಶ್ವರಿ ಮೆರವಣಿಗೆಯಲ್ಲಿ ಇರಲಿದೆ. ಇದರೊಂದಿಗೆ ಸಮ್ಮೇಳನದ ಅಧ್ಯಕ್ಷ ಕುಳಿತ ರಥ ಮೆರವಣಿಗೆಗೆ ಮೆರಗು ತರಲಿದೆ ಎಂದು ಹೇಳಿದರು.
ನಂತರ ಜಿಲ್ಲಾ ಕಸಾಪ ನಿಕಟ ಪೂರ್ವ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಅವರು ನಿರ್ವಹಣ ಸಮಿತಿಯ ಜವಾಬ್ದಾರಿಯ ಬಗ್ಗೆ ವಿವರಿಸಿದರು.ಸಭೆಯಲ್ಲಿ ಅಧ್ಯಕ್ಷ ಎಂ.ಕೆಂಡಗಣ್ಣಸ್ವಾಮಿ, ಸಮ್ಮೇಳನದ ಕಾರ್ಯ ನಿರ್ವಹಣಾ ಸಮಿತಿಯ ಪದಾಧಿಕಾರಿಗಳಾದ ನರಸೀಪುರ ಪಿ.ರವಿ, ಸಿ.ಕೆ.ಗಿರೀಶ್, ಭಾಗ್ಯಲಕ್ಷ್ಮಿ ನಿಂಗರಾಜು, ಆದಿಕರ್ನಾಟಕ ಮಹಾಸಭಾದ ತಾಲೂಕು ಅಧ್ಯಕ್ಷ ಶಿವಣ್ಣ, ಅಕ್ರಮ ಸಕ್ರಮ ಸಮಿತಿ ಶಿವಶಂಕರನ್, ನಾಗರಾಜು, ಮಲ್ಲೇಶ್, ಗ್ರಾಮೀಣ ಮಹೇಶ್, ನಿಂಗರಾಜು ಇದ್ದರು.
-----------