ಸಾರಾಂಶ
ನಗರದ ಕೆ.ಎಲ್.ಈ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಲ್ಲಿ 1974-75ನೇ ಸಾಲಿನ ವಿದ್ಯಾರ್ಥಿಗಳು ಸಮಾಗಮ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ನಡೆಯಿತು.
ಗದಗ: ನಗರದ ಕೆ.ಎಲ್.ಈ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಲ್ಲಿ 1974-75ನೇ ಸಾಲಿನ ವಿದ್ಯಾರ್ಥಿಗಳು ಸಮಾಗಮ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ನಡೆಯಿತು.
50 ವರ್ಷಗಳ ಹಿಂದೆ ತಾವು ಕಲಿತ ಮಹಾವಿದ್ಯಾಲಯಕ್ಕೆ ಆಗಮಿಸಿದ ವಿದ್ಯಾರ್ಥಿಗಳು ತಮ್ಮ ಹಳೆಯ ನೆನಪುಗಳನ್ನು ನೆನಪಿಸಿಕೊಂಡರು. ತಾವು ಕಲಿತ ತರಗತಿ ಪ್ರಯೋಗಾಲಯ, ಗ್ರಂಥಾಲಯ ಹಾಗೂ ಕ್ರೀಡಾಂಗಣವನ್ನು ಮತ್ತೊಮ್ಮೆ ನೋಡಿ ಮಹಾವಿದ್ಯಾಲಯದ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದರು. ಬೋಧನೆ ಮಾಡಿದ ಪ್ರಾಧ್ಯಾಪಕರ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಾ.ಎನ್.ಎಲ್.ದಾನಿ, ಸಂಗಮೇಶ ಯಳಮಲಿ, ಸಿದ್ದೇಶ್ ಬೋರಶೆಟ್ಟರ, ಬಸವರಾಜ ಹಸಬಿ, ರಾಮ ನಾರಾಯಣ ಪುರಾಣಿಕರ್, ಪರಮೇಶ್ವರ ಜುಚನಲ, ದೇವರಾಜ್ ಪಾಟೀಲ್, ಅರುಣ ಪತ್ತಾರ, ಜಗದೀಶ್ ಕವಳಿಕಾಯಿ, ವೆಂಕಟೇಶ ಗುಡಿ ತಮ್ಮ ಜೀವನದ ಯಶಸ್ವಿ ಕಾರಣವಾದ ಮಹಾವಿದ್ಯಾಲಯದ ಅನುಭವಗಳನ್ನು ಹಂಚಿಕೊಂಡರು.ಡಾ. ಆರ್.ಟಿ. ಪವಾಡಶೆಟ್ಟರ ಅಧ್ಯಕ್ಷತೆ ವಹಿಸಿ ಮಾತನಾಡಿ. ಪ್ರತಿಯೊಬ್ಬ ವಿದ್ಯಾರ್ಥಿಯು ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಪ್ರಾಮಾಣಿಕ ಪ್ರಯತ್ನ ಮಾಡಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಹಾಗೂ ಪ್ರಾಧ್ಯಾಪಕರಾದವರು ಹೊಸ ಹೊಸ ತಂತ್ರಜ್ಞಾನಗಳನ್ನು ತಮ್ಮ ಬೋಧನಾ ಅವಧಿಯಲ್ಲಿ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಆಕರ್ಷಕವಾಗಿ ಕಲಿಸಬೇಕು. ಇಂದು ಕೃತಕ ಬುದ್ಧಿಮತ್ತೆಯಿಂದ ವಿದ್ಯಾರ್ಥಿಗಳ ಜ್ಞಾನ ವಿಕಾಸವಾಗುತ್ತಿದೆ. ಅಂತಹ ವೈಜ್ಞಾನಿಕ ತಂತ್ರಜ್ಞಾನಗಳನ್ನು ವಿದ್ಯಾರ್ಥಿಗಳು ಹಾಗೂ ಬೋಧಕರು ಬಳಸಿಕೊಳ್ಳಬೇಕು ಎಂದರು.
ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು. ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಾಚಾರ್ಯ ಪಿ.ಜಿ. ಪಾಟೀಲ ಸ್ವಾಗತಿಸಿದರು. ಹಳೆಯ ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ಎಚ್.ಎಸ್. ಕೌಲಗಿ ನಿರೂಪಿಸಿ, ವಂದಿಸಿದರು.